ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಿಕ್ಕಿರಿದು ಸೇರಿದ್ದ ಆರ್‌ಸಿಬಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದರು
ಪ್ರಜಾವಾಣಿ ಚಿತ್ರ: ಪುಷ್ಕರ್ ವಿ
ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿರುವುದಕ್ಕೆ ಸಂಬಂಧಿಸಿದಂತೆ, ಕರ್ತವ್ಯಲೋಪದ ಅಡಿಯಲ್ಲಿ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ರದ್ದುಗೊಳಿಸಿದೆ.
‘ಅಮಾನತು ಆದೇಶ ರದ್ದುಪಡಿಬೇಕು’ ಎಂದು ಕೋರಿ, ಅಂದು ಬೆಂಗಳೂರು ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿದ್ದ ವಿಕಾಸ್ ಕುಮಾರ್ ವಿಕಾಸ್ (46) ಸಲ್ಲಿಸಿದ್ದ ಮೂಲ ಅರ್ಜಿಯ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಾಂಗ ಸದಸ್ಯರಾದ ನ್ಯಾಯಮೂರ್ತಿ ಬಿ.ಕೆ.ಶ್ರೀವಾಸ್ತವ ಮತ್ತು ಆಡಳಿತಾತ್ಮಕ ಸದಸ್ಯ ಸಂತೋಷ್ ಮೆಹ್ರಾ ಅವರಿದ್ದ ವಿಭಾಗೀಯ ಪೀಠವು ಮಂಗಳವಾರ ಪ್ರಕಟಿಸಿದೆ.
ಅರ್ಜಿದಾರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪುನಃ ನೇಮಕ ಮಾಡಿಕೊಳ್ಳಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಆದೇಶಿಸಿದೆ. ಅಮಾನತು ಅವಧಿಯನ್ನು ಪೂರ್ಣ ವೇತನ ಮತ್ತು ಭತ್ಯೆಗೆ ಒಳಪಡುವ ಕರ್ತವ್ಯ ಎಂದು ಪರಿಗಣಿಸುವಂತೆಯೂ ನಿರ್ದೇಶಿಸಿದೆ.
‘ಈ ಪ್ರಕರಣದಲ್ಲಿ ಅಮಾನತುಗೊಂಡ ಇತರ ಅಧಿಕಾರಿಗಳಿಗೂ ಸರ್ಕಾರ ಈ ಆದೇಶದ ಪ್ರಯೋಜನವನ್ನು ನೀಡಲಿದೆ ಎಂಬ ವಿಶ್ವಾಸ ಹೊಂದಿದ್ದೇವೆ’ ಎಂದು ಪೀಠವು ಇದೇ ವೇಳೆ ಸ್ಪಷ್ಟಪಡಿಸಿದೆ. ವಿಕಾಸ್ ಕುಮಾರ್ ವಿಕಾಸ್ ಪರ ಪದಾಂಕಿತ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿದ್ದರು.
ಆಕ್ಷೇಪ ಏನಿತ್ತು?: ‘ಭಾರಿ ದುರ್ನಡತೆ, ಭ್ರಷ್ಟಾಚಾರ, ಕ್ರಿಮಿನಲ್ ನಿರ್ಲಕ್ಷ್ಯದಂತಹ ಸಂಗತಿಗಳು ಎದುರಾದಾಗ ಮಾತ್ರವೇ ಅಮಾನತು ಮಾಡುವಂತಹ ತೀವ್ರ ಕ್ರಮಕ್ಕೆ ಮುಂದಾಗಬೇಕಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರಿಗೆ ಯಾವುದೇ ಪೂರ್ವಭಾವಿ ನೋಟಿಸ್ ನೀಡದೆ, ಪ್ರಾಥಮಿಕ ವಿಚಾರಣೆಯನ್ನೂ ನಡೆಸದೆ ಹಾಗೂ ಅವರ ವಿರುದ್ದದ ಆರೋಪಗಳನ್ನು ಅಲ್ಲಗಳೆದು ಸಮರ್ಥನೆ ಮಾಡಿಕೊಳ್ಳಲಿಕ್ಕೂ ಕಿಂಚಿತ್ ಅವಕಾಶ ಕಲ್ಪಿಸದೆ, ನಿಂತ ಗಳಿಗೆಯಲ್ಲೇ ಅಮಾನತು ಆದೇಶ ಹೊರಡಿಸಿರುವುದು ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ವಿರುದ್ಧವಾಗಿದೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
ಅಮಾನತು: ವಿಕಾಸ್ ಕುಮಾರ್ ವಿಕಾಸ್ ಸೇರಿದಂತೆ ಐಪಿಎಸ್ ಅಧಿಕಾರಿಗಳಾದ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ, ಬೆಂಗಳೂರು ನಗರ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್.ತೆಕ್ಕಣ್ಣವರ್ ಹಾಗೂ ರಾಜ್ಯ ಪೊಲೀಸ್ ಅಧಿಕಾರಿಗಳಾದ ಕಬ್ಬನ್ ಪಾರ್ಕ್ ಠಾಣೆಯ ಎಸಿಪಿ ಸಿ.ಬಾಲಕೃಷ್ಣ ಮತ್ತು ಇನ್‌ಸ್ಪೆಕ್ಟರ್ ಎ.ಕೆ.ಗಿರೀಶ್ ಅವರನ್ನು ರಾಜ್ಯ ಸರ್ಕಾರ 2025ರ ಜೂನ್ 4ರಂದು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು.
ಮೇಲ್ಮನವಿಗೆ ಸಿದ್ಧತೆ: ‘ಸಿಎಟಿ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದೆ. ಈಗಾಗಲೇ ಅಡ್ವೊಕೇಟ್ ಜನರಲ್ ಕಚೇರಿಯು ಮೇಲ್ಮನವಿಯ ಕರಡು ಸಿದ್ಧಪಡಿಸಿ ರಾಜ್ಯ ಗೃಹ ಇಲಾಖೆ, ಸಿಬ್ಬಂದಿ ಹಾಗೂ ಆಡಳಿತ ಇಲಾಖೆಗೆ ಕಳುಹಿಸಿದೆ. ಸರ್ಕಾರದಿಂದ ಅನುಮೋದನೆ ದೊರೆತ ಕೂಡಲೇ ಮೇಲ್ಮನವಿ ಸಲ್ಲಿಸಿ, ಸಿಎಟಿ ಆದೇಶಕ್ಕೆ ಮಧ್ಯಂತರ ತಡೆ ನೀಡುವಂತೆ ಕೋರಲಿದೆ’ ಎಂದು ಮೂಲಗಳು ತಿಳಿಸಿವೆ
ಕಾಲ್ತುಳಿತಕ್ಕೆ ಆರ್‌ಸಿಬಿ ನೇರ ಕಾರಣ
‘ಕಾಲ್ತುಳಿತ ಘಟನೆಗೆ ಪೊಲೀಸ್ ಅಧಿಕಾರಿಗಳ ಕರ್ತವ್ಯ ಲೋಪವೇ ಕಾರಣ’ ಎಂಬ ಸರ್ಕಾರದ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಪೀಠ, ‘ಇಡೀ ಘಟನೆಗೆ ಆರ್‌ಸಿಬಿ ನೇರ ಹೊಣೆ’ ಎಂದು ಖಚಿತ ಪದಗಳಲ್ಲಿ ನುಡಿದಿದೆ.
ವಿಜಯೋತ್ಸವ ಆಚರಿಸಲು ಆರ್‌ಸಿಬಿ ಪೊಲೀಸರಿಂದ ಅನುಮತಿ ಪಡೆದಿರಲಿಲ್ಲ. ಕಾರ್ಯಕ್ರಮ ನಡೆಸುವ ಬಗ್ಗೆ ದಿಢೀರ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿತು. ಈ ಮಾಹಿತಿಯ ಕಾರಣದಿಂದಲೇ ಮೂರು ಲಕ್ಷದಿಂದ ಐದು ಲಕ್ಷ ಜನ ಸೇರಿದ್ದು ವೇದ್ಯವಾಗುತ್ತದೆ. ಮೇಲ್ನೋಟಕ್ಕೆ ಆರ್‌ಸಿಬಿ ಬೇಜವಾಬ್ದಾರಿ ಎದ್ದು ಕಾಣುತ್ತಿದೆ’ ಎಂದು ಹೇಳಿದೆ.
‘ವಿಜಯೋತ್ಸವಕ್ಕೆ ಸಮರ್ಪಕ ಸಿದ್ಧತೆ ನಡೆಸಲು ಪೊಲೀಸರಿಗೆ ಸೂಕ್ತ ಕಾಲಾವಕಾಶ ನೀಡಿಲ್ಲ. ಜೂನ್ 3-4ರ ಇಡೀ ರಾತ್ರಿ ಸಾರ್ವಜನಿಕರು ಬೀದಿಯಲ್ಲಿ ವಿಜಯೋತ್ಸವ ನಡೆಸಿದ್ದರು. ಸಾರ್ವಜನಿಕರ ನಿರ್ವಹಣೆಯಲ್ಲಿ ಪೊಲೀಸ್ ವ್ಯವಸ್ಥೆ ನಿರತವಾಗಿತ್ತು. ಇದೇ ವೇಳೆ ವಿಧಾನಸೌಧದ ಆವರಣದಲ್ಲಿ ರಾಜ್ಯ ಸರ್ಕಾರ ಮತ್ತೊಂದು ಕಾರ್ಯಕ್ರಮ ಆಯೋಜಿಸಿತ್ತು. ವಿಧಾನಸೌಧಕ್ಕೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಇಂತಹ ಸನ್ನಿವೇಶದಲ್ಲಿ ಆರ್‌ಸಿಬಿ ಉಪದ್ರವ ಸೃಷ್ಟಿಸಿದೆ’ ಎಂದು ಪೀಠ ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.