ADVERTISEMENT

‘ರಿಯಾಲಿಟಿ ಶೋ’ ನಂತಾದ ಸರ್ಕಾರ : ಆರ್.ಅಶೋಕ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 16:14 IST
Last Updated 2 ಡಿಸೆಂಬರ್ 2025, 16:14 IST
ಆರ್.ಅಶೋಕ
ಆರ್.ಅಶೋಕ   

ಬೆಂಗಳೂರು: ‘ರಾಜ್ಯ ಸರ್ಕಾರ ರೈತರ ಸಮಸ್ಯೆ ಬಗೆಹರಿಸಿಲ್ಲ, ರಸ್ತೆಗುಂಡಿಗಳನ್ನು ದುರಸ್ತಿ ಮಾಡಿಲ್ಲ. ಆದರೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ತಮ್ಮ ನಡುವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಉಪಾಹಾರ ಸಭೆ ಮಾಡಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೊದಲು ಸಿದ್ದರಾಮಯ್ಯ ಮನೆಯಲ್ಲಿ ಉಪಾಹಾರ ನಡೆದಿದ್ದರೆ, ಈಗ ಡಿ.ಕೆ.ಶಿವಕುಮಾರ್‌ ಮನೆಯಲ್ಲಿ ನಡೆದಿದೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ವೇಣುಗೋಪಾಲ್‌ ನಿರ್ದೇಶನದಂತೆ ಈ ಪ್ರಹಸನ ನಡೆದಿದೆ. ರಾಜ್ಯದಲ್ಲಿನ ರಸ್ತೆ ಗುಂಡಿಗಳಿಂದಾಗಿ 10 ತಿಂಗಳಲ್ಲಿ 580 ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಉಪಾಹಾರಕ್ಕೆ ವ್ಯರ್ಥ ಮಾಡುವ ಸಮಯವನ್ನು ರಸ್ತೆ ಗುಂಡಿ ಮುಚ್ಚಲು ವಿನಿಯೋಗಿಸಿದ್ದರೆ ಜನರ ಪ್ರಾಣವನ್ನಾದರೂ ಉಳಿಸಬಹುದಿತ್ತು’ ಎಂದರು.

ರೈತರ ಕಬ್ಬಿನ ದರದ ಸಮಸ್ಯೆ, ಮೆಕ್ಕೆಜೋಳ ಖರೀದಿ ಕೇಂದ್ರದ ಸಮಸ್ಯೆ ಬಗೆಹರಿದಿಲ್ಲ. ಇಂತಹ ಸಮಸ್ಯೆ ಬಗೆಹರಿಸಲು ಉಪಾಹಾರ ಸಭೆ ನಡೆದಿಲ್ಲ. ಅಂಗನವಾಡಿ ಕಾರ್ಯಕರ್ತರು, ರೈತರು, ಉದ್ಯಮಿಗಳು, ದಲಿತರ ವಿಶ್ವಾಸವನ್ನು ಸರ್ಕಾರ ಕಳೆದುಕೊಂಡಿದೆ ಎಂದು ಟೀಕಿಸಿದರು.

ADVERTISEMENT

‘ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆಂದು ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಆದರೆ, ಈಗ ಅವರು ಉಪಾಹಾರ ಸವಿದಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ ಬಹಳ ನೋವಿನಿಂದ ಮಾತಾಡಿದ್ದಾರೆ. ಬಿಗ್‌ಬಾಸ್‌ನಲ್ಲಿ ‘ವೈಲ್ಡ್‌ ಕಾರ್ಡ್‌ ಎಂಟ್ರಿ’ ರೀತಿ ಸತೀಶ ಜಾರಕಿಹೊಳಿ, ಪರಮೇಶ್ವರ ಅವರು ದಲಿತ ಕೋಟಾದಲ್ಲಿ ಮುಖ್ಯಮಂತ್ರಿ ಆಗಲು ಕಾಯುತ್ತಿದ್ದಾರೆ. ಇಡೀ ಸರ್ಕಾರ ‘ರಿಯಾಲಿಟಿ ಶೋ’ನಂತೆ ಆಗಿದೆ ಎಂದು ದೂರಿದರು.

‘ಉತ್ತರ ಕರ್ನಾಟಕ ಸೇರಿದಂತೆ ಯಾವುದೇ ಅಭಿವೃದ್ಧಿಗೆ ಸರ್ಕಾರದ ಬಳಿ ಹಣವಿಲ್ಲ. ಸಿದ್ದರಾಮಯ್ಯ ಕಳೆದ ಬೆಳಗಾವಿ ಅಧಿವೇಶನದಲ್ಲಿ ಕೊಟ್ಟ ಮಾತನ್ನು ಈಡೇರಿಸಿಲ್ಲ. ಧರ್ಮಸ್ಥಳದಲ್ಲಿ ಬುರುಡೆ ತಂದವನಿಗೆ ಬಿರಿಯಾನಿ ಕೊಟ್ಟಿದ್ದೇ ಇವರ ಸಾಧನೆ’ ಎಂದು ಹೇಳಿದರು.

‘ಬೆಂಗಳೂರಿನ ಬಗ್ಗೆ ಟೀಕೆ ಮಾಡಿದ ಉತ್ತರ ಪ್ರದೇಶದ ಸಂಸದರು ಭದ್ರತೆ ಹೆಚ್ಚು ಮಾಡಿಕೊಳ್ಳಬೇಕು. ಇಲ್ಲವಾದರೆ ಡಿ.ಕೆ.ಶಿವಕುಮಾರ್‌, ಅವರಿಗೂ ಬೆದರಿಕೆ ಹಾಕುತ್ತಾರೆ. ಈಗಾಗಲೇ ಉದ್ಯಮಿಗಳಿಗೆ ಬೆದರಿಕೆ ಹಾಕಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.