ADVERTISEMENT

ರಾಜ್ಯಾಧ್ಯಕ್ಷರ ಆಯ್ಕೆಯಾದರೆ ಕಾಂಗ್ರೆಸ್‌ನಲ್ಲಿ ಬಂಡಾಯ: ನಳಿನ್ ಕುಮಾರ್ ಕಟೀಲ್

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 12:38 IST
Last Updated 15 ಫೆಬ್ರುವರಿ 2020, 12:38 IST
ನಳೀನ್ ಕುಮಾರ್ ಕಟೀಲ್
ನಳೀನ್ ಕುಮಾರ್ ಕಟೀಲ್   

ದಾವಣಗೆರೆ: ಕಾಂಗ್ರೆಸ್ ಅಧ್ಯಕ್ಷರು ಖಾಲಿಯಾಗಿ ಆರು ತಿಂಗಳಾದರೂ ಇನ್ನೂ ಆಯ್ಕೆಯಾಗಿಲ್ಲ. ಸಿದ್ದರಾಮಯ್ಯ ಆದರೆ ಡಿಕೆಶಿಗೆ ಆಗುವುದಿಲ್ಲ, ಡಿಕೆಶಿಗೆ ಆದರೆ ಸಿದ್ದರಾಮಯ್ಯಗೆ ಆಗುವುದಿಲ್ಲ. ಯಾವಾಗ ರಾಜ್ಯಾಧ್ಯಕ್ಷರನ್ನು ಮಾಡುತ್ತಾರೋ ಆಗಲೇ ಕಾಂಗ್ರೆಸ್‌ನಲ್ಲಿ ಬಂಡಾಯ ಎದ್ದೇಳುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ತಿಳಿಸಿದರು.

ದಾವಣಗೆರೆಯಲ್ಲಿ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷ ನಾನಾಗಬೇಕು, ನಾನಾಗಬೇಕು ಎಂದು ಹೊಡೆದಾಡುತ್ತಿದ್ದಾರೆ. ಅಧಿವೇಶನ ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗುತ್ತದೆ. ಪ್ರಶ್ನಿಸಲು ವಿರೋಧ ಪಕ್ಷದ ನಾಯಕರೇ ಇಲ್ಲದಂತಾಗಿದೆ. ಸಿದ್ದರಾಮಯ್ಯರನ್ನು ಮಾಡಿದ್ರೆ ಡಿಕೆಶಿ ಹೊರಗೆ ಹೋಗ್ತಾರೆ. ಡಿಕೆಶಿ ಮಾಡಿದ್ರೆ ಸಿದ್ದರಾಮಯ್ಯ ಹೊರಗೆ ಹೋಗ್ತಾರೆ. ಇಬ್ಬರನ್ನೂ ಕೂರಿಸಿ ಮಾಡಿದ್ರೆ ಪರಮೇಶ್ವರ್ ಹೊರಗೆ ಹೋಗ್ತಾರೆ. ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿದ ಮರುದಿನವೇ ಕಾಂಗ್ರೆಸ್‌‌ನಲ್ಲಿ‌ಬಂಡಾಯ ಎದ್ದೇಳುತ್ತದೆ. ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗುತ್ತದೆ ಎಂದು ಭವಿಷ್ಯ ನುಡಿದರು.

ಯಡಿಯೂರಪ್ಪನವರು ಮಾತ್ರ ಎಲ್ಲರನ್ನು ಆಶಿರ್ವಾದ ಮಾಡಿದರು. ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದರು. ಆದರೆ ಸೋನಿಯಾಗಾಂಧಿ ರಾಜ್ಯಕ್ಕೆ ಮೇಸ್ತ್ರಿಗಳನ್ನು ಕಳುಹಿಸಿದರು. ಯಡಿಯೂರಪ್ಪ ಕಣ್ಣೀರು ಒರೆಸುವ ಮುಖ್ಯಮಂತ್ರಿ, ಕಣ್ಣೀರು ಹಾಕುವ ಮುಖ್ಯಮಂತ್ರಿ ಕುಮಾರಸ್ವಾಮಿ. ಮನೆ ಮನೆಗೂ ಹೋಗಿ ಕಣ್ಣೀರು ಹಾಕುವ ಮುಖ್ಯಮಂತ್ರಿ ಯಾರು ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದಾಗ ಕುಮಾರಸ್ವಾಮಿ ಎಂದು ಕಾರ್ಯಕರ್ತರು ಉತ್ತರಿಸಿದರು.

ADVERTISEMENT

ಸಿದ್ದರಾಮಯ್ಯ ಸರ್ಕಾರ ಇದ್ದಾಗ ಟಿಪ್ಪು ಜಯಂತಿ ಜಾರಿಗೆ ತಂದರು. ಈ ಜಯಂತಿಯಿಂದ ಕಗ್ಗೊಲೆಯಾದವು, ಗಲಭೆಗಳಾದವು. ಸಿದ್ದರಾಮಯ್ಯ ಸರ್ಕಾರ ನರಹಂತಕ ಸರ್ಕಾರ. ಸಿದ್ದರಾಮಯ್ಯನ ಸರ್ಕಾರ ಇದ್ದಾಗ ಕೊಲೆಗಳು, ಅತ್ಯಾಚಾರಗಳು ಆದವು. ಮತ ಬ್ಯಾಂಕ್‌ಗೆ ದೇಶಕ್ಕೆ ಬೆಂಕಿ ಇಡುವ ಕೆಲಸ ಮಾಡುತ್ತಿದ್ದಾರೆ. ಪೌರತ್ವ ತಿದ್ದುಪಡಿಗೆ ಅಡ್ಡಿ ಮಾಡುತ್ತಿದ್ದಾರೆ. ಸಂವಿಧಾನ ವಿರೋಧ ಮಾಡಿದವರು ದೇಶದ್ರೋಹಿಗಳು ಎಂದು ಹೇಳುತ್ತಾರೆ. ಈಗ ಸಂವಿಧಾನವನ್ನು ವಿರೋಧ ಮಾಡುತ್ತಿರುವ ದೇಶದ್ರೋಹಿಗಳು ಯಾರು ಎಂದಾಗ ಕಾಂಗ್ರೆಸ್‌ನವರು ಎಂದು ಕಾರ್ಯಕರ್ತರು ಕೂಗಿ ಹೇಳಿದರು. ಬಳಿಕ ನಾನು ಹೇಳಿಲ್ಲ, ನೀವೇ ಹೇಳಿದ್ದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.