ADVERTISEMENT

ಜನರ ಸಂಪತ್ತು ಮರುಹಂಚಿಕೆ ಅಪಾಯಕಾರಿ: ಸುರೇಶ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 15:24 IST
Last Updated 24 ಏಪ್ರಿಲ್ 2024, 15:24 IST
ಶಾಸಕರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ಎಸ್‌.ಸುರೇಶ್‌ಕುಮಾರ್‌ ಅವರು ‘ಕಾಂಗ್ರೆಸ್‌ ಡೇಂಜರ್‌’ ಪೋಸ್ಟರ್‌ ಬಿಡುಗಡೆ ಬಿಡುಗಡೆ ಮಾಡಿದರು.
ಶಾಸಕರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ಎಸ್‌.ಸುರೇಶ್‌ಕುಮಾರ್‌ ಅವರು ‘ಕಾಂಗ್ರೆಸ್‌ ಡೇಂಜರ್‌’ ಪೋಸ್ಟರ್‌ ಬಿಡುಗಡೆ ಬಿಡುಗಡೆ ಮಾಡಿದರು.   

ಬೆಂಗಳೂರು: ‘ಕಷ್ಟಪಟ್ಟು ಸಂಪಾದಿಸಿದ ಆಸ್ತಿಯನ್ನು ಮರುಹಂಚಿಕೆ ಮಾಡುವುದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಇದು ದೇಶಕ್ಕೆ ಅತ್ಯಂತ ಅಪಾಯಕಾರಿ ಚಿಂತನೆ’ ಎಂದು ಬಿಜೆಪಿ ಶಾಸಕ ಎಸ್‌.ಸುರೇಶ್‌ಕುಮಾರ್‌ ಟೀಕಿಸಿದರು.

 ‘ಕಾಂಗ್ರೆಸ್‌ ಡೇಂಜರ್‌’ ಪೋಸ್ಟರ್‌ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಯಾರಾದರೂ ದುಡಿದು ಆಸ್ತಿ ಸಂಪಾದನೆ ಮಾಡುವುದೇ ತಪ್ಪು ಎನ್ನುವ ಧೋರಣೆ ಕಾಂಗ್ರೆಸ್‌ ಪಕ್ಷದ್ದು. ಮತದಾರರು ಮತ ಚಲಾಯಿಸುವುದಕ್ಕೆ ಮುನ್ನ ಕಾಂಗ್ರೆಸ್‌ ಪ್ರಣಾಳಿಕೆಯನ್ನು ಒಮ್ಮೆ ಓದಿಕೊಳ್ಳುವುದು ಸೂಕ್ತ’ ಎಂದರು.

‘ಅಮೆರಿಕಾದಲ್ಲಿರುವ ಕಾಂಗ್ರೆಸ್‌ ನಾಯಕ ಸ್ಯಾಮ್‌ ಪಿತ್ರೋಡ ಅವರು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ಯಾವುದೇ ವ್ಯಕ್ತಿ ಮೃತಪಟ್ಟರೆ ಆತನ ಪಿತಾರ್ಜಿತ ಆಸ್ತಿಯಲ್ಲಿ ಶೇ 45 ರಷ್ಟು ಮಕ್ಕಳಿಗೆ ಉಳಿದ ಶೇ 55 ಸಾರ್ವಜನಿಕರಿಗೆ ಹಂಚಿಕೆ ಮಾಡಬೇಕು ಎಂದಿದ್ದಾರೆ. ಸಂಪತ್ತಿನ ಆಧಾರದಲ್ಲಿ ಜನರನ್ನು ಒಡೆಯಲು ಮುಂದಾಗಿರುವುದು ಉಗ್ರ ಎಡಪಂಥೀಯ ಚಿಂತನೆ’ ಎಂದು ಅವರು ಹೇಳಿದರು.

ADVERTISEMENT

‘ಕಮ್ಯುನಿಸ್ಟ್‌ ಪಕ್ಷಗಳು ಭಾರತದ ಅಣ್ವಸ್ತ್ರ ಶಕ್ತಿಯನ್ನು ಅಳಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿವೆ. ಡಿಎಂಕೆ ಸನಾತನ ಧರ್ಮವನ್ನು ಹೊಸಕಿ ಹಾಕುವುದಾಗಿ ಹೇಳಿದೆ. ಈ ಮೂಲಕ ಇಂಡಿ ಒಕ್ಕೂಟ ಭಾರತದ ಭವಿಷ್ಯ ಮತ್ತು ರಕ್ಷಣೆಯ ಬಗ್ಗೆ ಕಿಂಚಿತ್ತು ಕಾಳಜಿ ವಹಿಸಿದಂತೆ ಕಾಣುತ್ತಿಲ್ಲ’ ಎಂದರು.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, ಬೆಂಗಳೂರು ಗ್ರಾಮಾಂತರ ಮತ್ತು ಇತರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷ ಸಾರ್ವಜನಿಕರಿಗೆ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸುತ್ತಿದೆ. ಚುನಾವಣೆಯಲ್ಲಿ ಗೆದ್ದ ಬಳಿಕ ಪ್ರತಿ ಗ್ಯಾರಂಟಿ ಕಾರ್ಡ್‌ಗೆ ₹10 ಸಾವಿರ ಕೊಡುವುದಾಗಿ ಆಮಿಷ ಒಡ್ಡುತ್ತಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.