ADVERTISEMENT

ನಬಾರ್ಡ್ ನೆರವು ಕಡಿತ: ಲೋಕಸಭೆಯಲ್ಲಿ ಸಂಸದ ಜಿ.ಕುಮಾರ ನಾಯಕ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2024, 15:29 IST
Last Updated 16 ಡಿಸೆಂಬರ್ 2024, 15:29 IST
ಜಿ.ಕುಮಾರ ನಾಯಕ
ಜಿ.ಕುಮಾರ ನಾಯಕ   

ನವದೆಹಲಿ: ‘ಅಲ್ಪಾವಧಿ ಬೆಳೆ ಸಾಲ ವಿತರಣೆಗೆ ಸಾಧ್ಯವಾಗುವಂತೆ ಪ್ರಸಕ್ತ ಸಾಲಿನಲ್ಲಿ ಕರ್ನಾಟಕಕ್ಕೆ ಒದಗಿಸಿರುವ ನಬಾರ್ಡ್ ನೆರವು ಕಡಿತಗೊಳಿಸಿರುವುದರಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ತುರ್ತು ಗಮನ ಹರಿಸಬೇಕು’ ಎಂದು ರಾಯಚೂರು ಸಂಸದ ಜಿ.ಕುಮಾರ ನಾಯಕ ಆಗ್ರಹಿಸಿದರು. 

ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಹಣಕಾಸು ಸಚಿವರಿಗೆ ಸೋಮವಾರ ಪ್ರಶ್ನೆ ಕೇಳಿದ ಅವರು, ‘ವಾಣಿಜ್ಯ ಬ್ಯಾಂಕ್‌ಗಳು ನಗರ ಪ್ರದೇಶದ ಜನರಿಗೆ ಹೆಚ್ಚು ಸಾಲ ಕೊಡುತ್ತವೆ. ಅವುಗಳ ಬಡ್ಡಿ ದರ ಹೆಚ್ಚು ಇರುತ್ತದೆ. ಆದರೆ, ಕೃಷಿಕರಿಗೆ ಸಾಲ ನೀಡಲು ಹಿಂದೇಟು ಹಾಕುತ್ತವೆ. ನಬಾರ್ಡ್ ನೆರವು ಕಡಿತದಿಂದ ಕಲ್ಯಾಣ ಕರ್ನಾಟಕ, ಅಭಿವೃದ್ಧಿ ಆಕಾಂಕ್ಷಿ ಹಾಗೂ ಹಿಂದುಳಿದ ಜಿಲ್ಲೆಗಳ ರೈತರಿಗೆ ಭಾರಿ ತೊಂದರೆ ಆಗಿದೆ’ ಎಂದು ಗಮನ ಸೆಳೆದರು. 

‘2024-25 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು 35 ಲಕ್ಷ ರೈತರಿಗೆ ₹25 ಸಾವಿರ ಕೋಟಿ ಅಲ್ಪಾವಧಿ ಕೃಷಿ ಸಾಲ ವಿತರಿಸುವ ಗುರಿ ಹೊಂದಿದೆ. 2023-24ರಲ್ಲಿ ರಾಜ್ಯಕ್ಕೆ ನಬಾರ್ಡ್ ₹5,600 ಕೋಟಿ ಸಾಲ ಕೊಟ್ಟಿತ್ತು. ಈ ವರ್ಷ ಅದನ್ನು ₹2,340 ಕೋಟಿಗೆ ಇಳಿಸಲಾಗಿದೆ. ಇದರಿಂದಾಗಿ, ರೈತರು ಹೆಚ್ಚಿನ ಬಡ್ಡಿ ದರದ ಲೇವಾದೇವಿಗಾರರಿಂದ ಸಾಲ ಪಡೆಯುವಂತಾಗಿದೆ’ ಎಂದರು.  

ADVERTISEMENT

ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ಉತ್ತರಿಸಿ, ‘ಬ್ಯಾಂಕ್‌ಗಳ ಆದ್ಯತೆಯ ವಲಯ ಸಾಲದ ಗುರಿ ತಲುಪಲು ಸಹಕಾರಿ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಆರ್‌ಬಿಐ ವಾರ್ಷಿಕವಾಗಿ ವಿತರಣಾ ಮಿತಿ ಹೇರುತ್ತದೆ’ ಎಂದರು. ‘ಆದ್ಯತೆ ವಲಯದ ಸಾಲದ ಹಂಚಿಕೆಯನ್ನು 2024-25 ನೇ ಹಣಕಾಸು ವರ್ಷದಲ್ಲಿ ₹2.1 ಲಕ್ಷ ಕೋಟಿಯಿಂದ ₹1.5 ಲಕ್ಷ ಕೋಟಿಗೆ ಕಡಿತಗೊಳಿಸಲಾಗಿದೆ. ಹೀಗಾಗಿ, ಕರ್ನಾಟಕಕ್ಕೆ ನಬಾರ್ಡ್ ಮೂಲಕ ಕಡಿಮೆ ನಿಧಿ ಮಂಜೂರಾತಿ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದರು. 

ಯುವಜನರ ವಲಸೆ:

ಬೀದರ್ ಸಂಸದ ಸಾಗರ್‌ ಖಂಡ್ರೆ ಪ್ರಶ್ನೆ ಕೇಳಿ, ‘ಬೀದರ್‌ ಜಿಲ್ಲೆ ಬಹಳ ಹಿಂದುಳಿದಿದೆ. ಯುವಜನರು ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಉದ್ಯೋಗಕ್ಕಾಗಿ ಬೆಂಗಳೂರು, ಹೈದರಾಬಾದ್‌ ಹಾಗೂ ಮುಂಬೈಗೆ ವಲಸೆ ಹೋಗುತ್ತಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ವಲಸೆ ಪ್ರಮಾಣ ಅತೀ ಹೆಚ್ಚು ಇದೆ. ವಲಸೆ ತಡೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಕಾರ್ಮಿಕ ಸಚಿವ ಮನ್ಸುಖ್‌ ಮಾಂಡವೀಯಾ ಉತ್ತರಿಸಿ, ‘ಕೌಶಲ ಇದ್ದವರಿಗೆ ಉದ್ಯೋಗ ದೊರಕುತ್ತದೆ. ಬೀದರ್‌ನವರು ಹೈದರಾಬಾದ್‌ಗೆ, ಹೈದರಾಬಾದ್‌ನವರು ಕಲ್ಯಾಣ ಕರ್ನಾಟಕಕ್ಕೆ ಉದ್ಯೋಗ ಅರಸಿ ವಲಸೆ ಬಂದರೆ ತಪ್ಪಲ್ಲ’ ಎಂದರು. 

ಆನೆ ದಾಳಿ ತಡೆಗೆ ಕಾಂಪಾ ಅನುದಾನ

ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್‌, ‘ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಆನೆಗಳ ಹಾವಳಿ ವ್ಯಾಪಕವಾಗಿದೆ. ಬನ್ನೇರುಘಟ್ಟ, ಸಾತನೂರು ಮತ್ತಿತರ ಕಡೆಗಳಲ್ಲಿ ಆನೆ ದಾಳಿಗಳಿಂದ ಮನುಷ್ಯರು ಮೃತಪಟ್ಟಿದ್ದಾರೆ. ಕೃಷಿ ನಷ್ಟ ಅಪಾರವಾಗಿದೆ. ಬ್ಯಾರಿಕೇಡ್‌ ಅಳವಡಿಕೆಗೆ ಕಾಂಪಾ ನಿಧಿಯಿಂದ ವಿಶೇಷ ಅನುದಾನ ನೀಡಬೇಕು’ ಎಂದು ಆಗ್ರಹಿಸಿದರು.

‘ಕಾಡು ಪ್ರಾಣಿಗಳ ದಾಳಿಯಿಂದ ಅರಣ್ಯ ಇಲಾಖೆಯವರು ಮೃತಪಟ್ಟರೆ ₹25 ಲಕ್ಷ ಪರಿಹಾರ ನೀಡಲಾಗುತ್ತದೆ. ರೈತರಿಗೆ ₹15 ಲಕ್ಷವಷ್ಟೇ ಪರಿಹಾರ ಒದಗಿಸಲಾಗುತ್ತದೆ. ಈ ತಾರತಮ್ಯ ಸರಿಯಲ್ಲ. ಪರಿಹಾರವನ್ನು ₹25 ಲಕ್ಷಕ್ಕೆ ಏರಿಸಬೇಕು’ ಎಂದು ಅವರು ಒತ್ತಾಯಿಸಿದರು.

ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅರಣ್ಯ ಸಚಿವ ಭೂಪೇಂದರ್ ಯಾದವ್‌ ಭರವಸೆ ನೀಡಿದರು. 

ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ, ‘ತಾಪಮಾನ ಬದಲಾವಣೆ ನಿರ್ವಹಣೆಗೆ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಎನ್‌ಎಎಫ್‌ಸಿಯಿಂದ ಒದಗಿಸಿರುವ ನೆರವೆಷ್ಟು?’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.