ಅರಣ್ಯ
ನವದೆಹಲಿ: ಕರ್ನಾಟಕದಲ್ಲಿ ಅರಣ್ಯ ವಾಸಿಗಳ ಪುನರ್ವಸತಿ ಪ್ರಕ್ರಿಯೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು, ಕಾಡು ಜನರ ಒಪ್ಪಿಗೆ ಪಡೆದೇ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಈ ಪ್ರಕ್ರಿಯೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕಟ್ಟಪ್ಪಣೆ ಮಾಡಿದೆ.
ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಇದೇ 3ರಂದು ಪತ್ರ ಬರೆದಿರುವ ಸಚಿವಾಲಯವು, ‘ರಾಜ್ಯದಲ್ಲಿ ಅರಣ್ಯವಾಸಿಗಳನ್ನು ಕಾನೂನುಬಾಹಿರವಾಗಿ ಸ್ಥಳಾಂತರ ಮಾಡಲಾಗುತ್ತಿದೆ ಎಂಬ ಬಗ್ಗೆ ದೂರುಗಳು ಬಂದಿವೆ. ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸಚಿವಾಲಯಕ್ಕೆ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದೆ.
‘ರಾಜ್ಯದ ವಿವಿಧೆಡೆ ವಾಸಿಸುತ್ತಿರುವ ಅರಣ್ಯ ವಾಸಿಗಳನ್ನು ಕಾನೂನುಬಾಹಿರವಾಗಿ ಸ್ಥಳಾಂತರ ಮಾಡಲಾಗುತ್ತಿದೆ. ಇದರಲ್ಲಿ ಭಾಗಿಯಾಗಿರುವ ಅರಣ್ಯಾಧಿಕಾರಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಆಗ್ರಹಿಸಿ ಕೇಂದ್ರ ಅರಣ್ಯ ಹಾಗೂ ಬುಡಕಟ್ಟು ಸಚಿವಾಲಯಕ್ಕೆ ಮಂಗಳೂರಿನ ಸುರತ್ಕಲ್ ನಿವಾಸಿ ರೇಷ್ಮಾ ಎಂಬುವರು ದೂರು ನೀಡಿದ್ದರು.
‘ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಹುಲಿ ಮೀಸಲು ಅರಣ್ಯಗಳ ಹೃದಯ ಭಾಗದಲ್ಲಿ ವಾಸಿಸುತ್ತಿರುವ ಅರಣ್ಯವಾಸಿಗಳಿಗೆ ಮಾತ್ರ ಪುನರ್ವಸತಿ ಕಲ್ಪಿಸಲು ಅವಕಾಶವಿದೆ. ಮೀಸಲು ಪ್ರದೇಶಗಳಲ್ಲಿ ವಾಸಿಸುತ್ತಿರುವವರನ್ನು ಸ್ಥಳಾಂತರಗೊಳಿಸಲು ಸ್ಪಷ್ಟ ನಿರ್ಬಂಧ ಇದೆ. ವನ್ಯಜೀವಿ ಕಾಯ್ದೆ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿ ಉಲ್ಲಂಘಿಸಿ ಕಾಳಿ ಹುಲಿ ಮೀಸಲು ಅರಣ್ಯದ ಬಫರ್ ಪ್ರದೇಶಗಳಾದ ಸುಲಾವಳಿ, ಕರಂಜೆ, ಕಲಭಾವಿ ಗ್ರಾಮಗಳಿಂದ ಅರಣ್ಯ ವಾಸಿಗಳನ್ನು ಸ್ಥಳಾಂತರಿಸಲಾಗಿತ್ತು. ಹುಲಿ ಸಂರಕ್ಷಿತ ಪ್ರದೇಶಗಳೆಂದು ಅಧಿಸೂಚಿತಗೊಳ್ಳದ ಮಹದೇಶ್ವರ ಬೆಟ್ಟ, ಭೀಮಗಡ, ಚಿಂಚೋಳಿ, ದಾಂಡೇಲಿ ಸೇರಿದಂತೆ ವಿವಿಧ ಅಭಯಾರಣ್ಯಗಳು ಹಾಗೂ ರಾಷ್ಟ್ರೀಯ ಉದ್ಯಾನಗಳಲ್ಲಿ ಕೈಗೊಳ್ಳಲಾಗುತ್ತಿರುವ ಪುನರ್ವಸತಿ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು’ ಎಂದು ಅವರು ಆಗ್ರಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.