ADVERTISEMENT

ವರದಿಗೂ ಮುನ್ನವೇ ಕ್ವಾರಂಟೈನ್‌ನಲಿದ್ದವರ ಬಿಡುಗಡೆ: ಸತೀಶ್ ಜಾರಕಿಹೊಳಿ ಆರೋಪ

ಸರ್ಕಾರದ ಆದೇಶವಿದೆ– ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 31 ಮೇ 2020, 10:08 IST
Last Updated 31 ಮೇ 2020, 10:08 IST
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ   

ಬೆಳಗಾವಿ: ‘ಜಿಲ್ಲೆಯ ವಿವಿಧೆಡೆ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇದ್ದವರನ್ನು ಪ್ರಯೋಗಾಲಯದಿಂದ ಪರೀಕ್ಷಾ ವರದಿ ಬರುವುದಕ್ಕೆ ಮುನ್ನವೇ ಬಿಡುಗಡೆ ಮಾಡಲಾಗುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ಸತೀಶ ಜಾರಕಿಹೊಳಿ ಆರೋಪಿಸಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮಹಾರಾಷ್ಟ್ರದ ಮುಂಬೈ ಮೊದಲಾದ ಕಡೆಗಳಿಂದ ಬಂದಿದ್ದ ವಲಸೆ ಕಾರ್ಮಿಕರನ್ನು ಸರ್ಕಾರಿ ಹಾಸ್ಟೆಲ್‌, ವಸತಿ ಶಾಲೆಗಳು ಮೊದಲಾದ ಕಡೆಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಅವರನ್ನು ಸರ್ಕಾರದ ಆದೇಶದ ಮೇರೆಗೆ ಅಧಿಕಾರಿಗಳು ದಿಢೀರನೆ ಬಿಡುಗಡೆ ಮಾಡಿದ್ದಾರೆ. ಇದರಿಂದ ದೊಡ್ಡ ಯಡವಟ್ಟಾಗಿದೆ. ಹೀಗೆ ಬಿಡುಗಡೆಯಾದ ಕೆಲವರಿಗೆ ಕೊರೊನಾ ಪಾಸಿಟಿವ್ ಇರುವುದು ಬಳಿಕ ಗೊತ್ತಾಗುತ್ತಿದೆ. ಹೀಗಾಗಿ, ಸಂಪೂರ್ಣ ವರದಿ ಬರುವವರೆಗೆ ಕ್ವಾರಂಟೈನ್ ಕೇಂದ್ರಗಳಲ್ಲಿ ಅವರನ್ನು ಇರಿಸಿಕೊಳ್ಳಬೇಕು’ ಎಂದು ಹೇಳಿದರು.

‘ಯಮಕನಮರಡಿ ಕ್ಷೇತ್ರದಲ್ಲಿರುವ ತಾಲ್ಲೂಕಿನ ಅಗಸಗಿ ಶಾಲೆಯ ಕ್ವಾರಂಟೈನ್‌ ಕೇಂದ್ರದಲ್ಲಿ ಆರು ನೂರು ಕಾರ್ಮಿಕರನ್ನು ಇರಿಸಲಾಗಿತ್ತು. ಅವರನ್ನು ಬಿಡುಗಡೆ ಮಾಡಲಾಗಿದೆ. ಅವರನ್ನು ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿದುಬಂದಿದೆ. ಇವರು ಮತ್ತಷ್ಟು ಮಂದಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಅದಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತವೇ ಹೊಣೆ ಆಗಬೇಕಾಗುತ್ತದೆ’ ಎಂದರು.

ADVERTISEMENT

‘ವರದಿ ಬರುವವರೆಗೆ ಅವರನ್ನು ಇರಿಸಿಕೊಂಡಿದ್ದರೆ ಏನೂ ತೊಂದರೆ ಆಗುತ್ತಿರಲಿಲ್ಲ. ನಾನು ಸೇರಿ ಹಲವರು ಕಾರ್ಮಿಕರಿಗೆ ನೆರವು ನೀಡಿದ್ದೇವೆ. ಮುಂದೆಯೂ ಸಿಗುತ್ತಿತ್ತು. ತರಾತುರಿಯಲ್ಲಿ ಸರ್ಕಾರ ಸೂಚನೆ ನೀಡಿರುವುದು ಸರಿಯಲ್ಲ’ ಎಂದು ದೂರಿದರು.

‘ಕ್ವಾರಂಟೈನ್‌ ಕೇಂದ್ರಗಳಲ್ಲಿ 7 ದಿನಗಳಿಗಿಂತ ಹೆಚ್ಚು ದಿನಗಳಿಂದ ಇರುವವರು ಮತ್ತು ಸೋಂಕಿನ ಲಕ್ಷಣ ಇಲ್ಲದವರನ್ನು ಬಿಡುಗಡೆ ಮಾಡಬೇಕು. ಅವರಿಗೆ ಹೋಂ ಕ್ವಾರಂಟೈನ್‌ಗೆ ಸೂಚಿಸಬೇಕು. ಗಂಟಲು ದ್ರವದ ಮಾದರಿ ಸಂಗ್ರಹ ಮಾಡಿದವರನ್ನು ಕೂಡ ಬಿಡುಗಡೆ ಮಾಡಬಹುದು ಎಂಬ ಆದೇಶ ಬಂದಿದೆ. ಈ ಪ್ರಕಾರ ಬಿಡುಗಡೆ ಮಾಡಲಾಗಿದೆ. ಆದೇಶ ನಮಗಷ್ಟೇ ಅಲ್ಲ ಇಡೀ ರಾಜ್ಯಕ್ಕೆ ಅನ್ವಯಿಸುವಂಥದು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ‘‍ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಹೀಗೆ ಬಿಡುಗಡೆ ಆದವರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುವುದು’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.