ಸಾಂದರ್ಭಿಕ ಚಿತ್ರ
ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು, ಸರ್ಕಾರಿ ಪಾಲಿಟೆಕ್ನಿಕ್‌ಗಳು ಮತ್ತು ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅರೆಕಾಲಿಕ ಉಪನ್ಯಾಸಕರ ವಿದ್ಯಾರ್ಹತೆ ಮತ್ತು ಸಲ್ಲಿಸಿದ ಸೇವಾ ಅವಧಿ ಪರಿಗಣಿಸಿ, ತಿಂಗಳ ಗೌರವಧನವನ್ನು ಹೆಚ್ಚಿಸಿ ಉನ್ನತ ಶಿಕ್ಷಣ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.
ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು, ಪಾಲಿಟೆಕ್ನಿಕ್‌ಗಳು ಮತ್ತು ಕಿರಿಯ ತಾಂತ್ರಿಕ ಶಾಲೆಗಳಲ್ಲಿ ಕೆಲಸ ಮಾಡುವ ಅರೆಕಾಲಿಕ ಉಪನ್ಯಾಸಕರಿಗೆ ಕ್ರಮವಾಗಿ ಹಾಲಿ ಗರಿಷ್ಠ 8, 9, 9 ಗಂಟೆಗಳ ಕಾರ್ಯಭಾರಕ್ಕೆ ಬದಲಾಗಿ, ವಾರಕ್ಕೆ 15, 17, 14 ಗಂಟೆಗಳ ಕಾರ್ಯಭಾರ ನಿಗದಿಪಡಿಸಿ ಗೌರವಧನ ಪರಿಷ್ಕರಿಸಲಾಗಿದೆ ಎಂದೂ ಆದೇಶದಲ್ಲಿ ವಿವರಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ 294, ಪಾಲಿಟೆಕ್ನಿಕ್, ಕಿರಿಯ ತಾಂತ್ರಿಕ ಶಾಲೆಗಳಿಗೆ 1,600 ಸೇರಿ ಒಟ್ಟು 1,894 ಅರೆಕಾಲಿಕ ಉಪನ್ಯಾಸಕರನ್ನು ಮಾತ್ರ ನೇಮಕ ಮಾಡಿಕೊಳ್ಳಬೇಕು. ಗೌರವಧನ ಹೆಚ್ಚಳದಿಂದ ಆಗುವ ವೆಚ್ಚವನ್ನು ಪ್ರಸಕ್ತ ಸಾಲಿನಲ್ಲಿ ಒದಗಿಸಿದ ಅನುದಾನದಿಂದ ಭರಿಸಿ, ಆ ಅನುದಾನ ಸಂಪೂರ್ಣ ವೆಚ್ಚವಾದ ಬಳಿಕ ಹೆಚ್ಚುವರಿ ಅನುದಾನ ಅಗತ್ಯವಿದ್ದರೆ ಪ್ರಸ್ತಾವ ಸಲ್ಲಿಸಬೇಕು ಎಂದೂ ಷರತ್ತು ವಿಧಿಸಲಾಗಿದೆ.
ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳ ಅರೆಕಾಲಿಕ ಉಪನ್ಯಾಸಕರು ಪ್ರತಿ ತಿಂಗಳು ಗರಿಷ್ಠ 56 ಗಂಟೆ ಕಾರ್ಯಭಾರ ನಿಭಾಯಿಸಬೇಕಿದ್ದು, ₹18 ಸಾವಿರ ಗೌರವಧನ ನಿಗದಿಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.