ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ಆರೋಪ ನಿರಾಕರಿಸಿದ ದರ್ಶನ್‌, ಪವಿತ್ರಾ

ನ.10ಕ್ಕೆ ವಿಚಾರಣೆ ಮುಂದೂಡಿ 57ನೇ ಎಸಿಎಂಎಂ ನ್ಯಾಯಾಲಯ ಆದೇಶ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 14:06 IST
Last Updated 3 ನವೆಂಬರ್ 2025, 14:06 IST
<div class="paragraphs"><p>ದರ್ಶನ್,&nbsp;ಪವಿತ್ರಾಗೌಡ</p></div>

ದರ್ಶನ್, ಪವಿತ್ರಾಗೌಡ

   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಅವರ ಕೊಲೆ ಪ್ರಕರಣದಲ್ಲಿ ತಮ್ಮ ಮೇಲಿರುವ ಆರೋಪವನ್ನು ನಟ ದರ್ಶನ್‌ ಹಾಗೂ ಅವರ ಗೆಳತಿ ಪವಿತ್ರಾಗೌಡ ಸೇರಿ ಎಲ್ಲ ಆರೋಪಿಗಳೂ 57ನೇ ಎಸಿಎಂಎಂ ನ್ಯಾಯಾಲಯದಲ್ಲಿ ಸೋಮವಾರ ನಡೆದ ವಿಚಾರಣೆ ವೇಳೆ ನಿರಾಕರಿಸಿದರು.

ಕೊಲೆ ಪ್ರಕರಣದಲ್ಲಿ ದೋಷಾರೋಪ ನಿಗದಿ ಸಂಬಂಧ ನ್ಯಾಯಾಲಯದಲ್ಲಿ ಸೋಮವಾರ ಮಧ್ಯಾಹ್ನ ವಿಚಾರಣೆ ನಡೆಯಿತು.

ADVERTISEMENT

‘ಅಕ್ರಮಕೂಟ ರಚಿಸಿಕೊಂಡು ರೇಣುಕಸ್ವಾಮಿ ಅವರನ್ನು ಚಿತ್ರದುರ್ಗದಿಂದ ಅಪಹರಿಸಿಕೊಂಡು ಕರೆತಂದು ಶೆಡ್‌ಗೆ ಕರೆದೊಯ್ದು ಅವರ ಚಿನ್ನಾಭರಣ ಕಸಿದುಕೊಂಡು ಮೇಲಕ್ಕಿ ಎತ್ತಿ ಕುಕ್ಕಿ ಕೊಲೆ ಮಾಡಿದ್ದೀರಿ’ ಎಂದು ತನಿಖಾಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆ ಆರೋಪವನ್ನು ಒಪ್ಪಿಕೊಳ್ಳುತ್ತೀರಾ ಎಂದು ಆರೋಪಿಗಳನ್ನೂ ನ್ಯಾಯಾಧೀಶರು ಪ್ರಶ್ನಿಸಿದರು.

‘ಎರಡು, ಮೂರು ಹಾಗೂ 10ನೇ ಆರೋಪಿಯ ಜತೆಗೆ ಸೇರಿಕೊಂಡು ಒಳಸಂಚು ರೂಪಿಸಿರುವ ಬಗ್ಗೆ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಪವಿತ್ರಾ ಅವರನ್ನು ನ್ಯಾಯಾಧೀಶರು ಪ್ರಶ್ನಿಸಿದರು.

ಆಗ ದರ್ಶನ್‌, ಪವಿತ್ರಾ ಸೇರಿ ಇತರೆ ಆರೋಪಿಗಳು, ‘ತಮ್ಮ ಮೇಲಿರುವ ಆರೋಪ ಸುಳ್ಳು’ ಎಂದು ಹೇಳಿದರು. ಆರೋಪ ನಿರಾಕರಿಸಿದ್ದರಿಂದ ಮುಂದಿನ ವಿಚಾರಣೆಯನ್ನು ನ.10ಕ್ಕೆ (ಸೋಮವಾರ) ಮುಂದೂಡಿ ನ್ಯಾಯಾಲಯ ಆದೇಶಿಸಿತು. ಸೋಮವಾರದಿಂದ ಸಾಕ್ಷಿಗಳ ವಿಚಾರಣೆ ಆರಂಭವಾಗಲಿದೆ.

ದರ್ಶನ್‌ ಹಾಗೂ ಪವಿತ್ರಾ ಅವರನ್ನು ಬಿಗಿಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆ ತರಲಾಗಿತ್ತು. ಕೋರ್ಟ್‌ ಹಾಲ್‌ನಲ್ಲಿ ಸಹಿ ಮಾಡಿದ ಆರೋಪಿಗಳು ವಿಚಾರಣೆಗೆ ಹಾಜರಾದರು.

ದರ್ಶನ್

ಕೋರ್ಟ್‌ಗೆ ಬಂದಿದ್ದ ಕುಟುಂಬಸ್ಥರು:

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ತೆರಳಿ ಯೋಗಕ್ಷೇಮ ವಿಚಾರಿಸಲು ಹೆಚ್ಚಿನ ಅವಕಾಶವಿಲ್ಲದ ಕಾರಣಕ್ಕೆ ದರ್ಶನ್‌, ಪವಿತ್ರಾ ಹಾಗೂ ಇತರೆ ಆರೋಪಿಗಳ ಕುಟುಂಬಸ್ಥರು ಕೋರ್ಟ್‌ ಆವರಣಕ್ಕೆ ಬಂದಿದ್ದರು.

ಅಭಿಮಾನಿಗಳತ್ತ ಕೈಬೀಸಿದ ದರ್ಶನ್‌:

ಕೋರ್ಟ್‌ ಆವರಣದಲ್ಲೂ ದರ್ಶನ್ ಅಭಿಮಾನಿಗಳು ಅಪಾರಸಂಖ್ಯೆಯಲ್ಲಿ ಜಮಾಯಿಸಿದ್ದರು. ದರ್ಶನ್ ಅವರು ವಿಚಾರಣೆ ಮುಗಿಸಿ ಪೊಲೀಸ್ ವಾಹನದತ್ತ ತೆರಳಿದಾಗ ‘ಡಿ ಬಾಸ್’ ಎಂದು ಅಭಿಮಾನಿಗಳು ಘೋಷಣೆ ಕೂಗಿದರು. ಆಗ ದರ್ಶನ್‌ ಅವರು ಅಭಿಮಾನಿಗಳತ್ತ ಕೈಬೀಸಿ ಮೌನದಿಂದಲೇ ವಾಹನ ಹತ್ತಿದರು.

ಪವಿತ್ರಾಗೌಡ

ಅಪಾರ ಸಂಖ್ಯೆಯಲ್ಲಿ ವಕೀಲರ ಜಮಾವಣೆ

ಪ್ರಕರಣದ ವಿಚಾರಣೆಯನ್ನು ಸಮೀಪದಿಂದಲೇ ಗಮನಿಸಲು ಹೆಚ್ಚಿನ ಸಂಖ್ಯೆ ವಕೀಲರು ಹಾಲ್‌ನಲ್ಲಿ ಜಮಾಯಿಸಿದ್ದರು. ಕಿಕ್ಕಿರಿದು ಜಮಾಯಿಸಿದ್ದ ವಕೀಲರನ್ನು ಕಂಡ ನ್ಯಾಯಾಧೀಶರು, ಮುಗುಳ್ನಗೆ ಬೀರಿದರು.

ಇಷ್ಟು ಮಂದಿ ಸೇರಿದರೆ ದೋಷಾರೋಪ ಹೊರಿಸುವುದು ಹೇಗೆ? ಆರೋಪಿಗಳನ್ನು ಕರೆದು ನಿಲ್ಲಿಸುವುದಾರೂ ಎಲ್ಲಿ? ಪ್ರಕರಣಕ್ಕೆ ಸಂಬಂಧಿಸಿದ ವಕೀಲರು ಮಾತ್ರವೇ ಹಾಲ್‌ನಲ್ಲಿ ಇರಬೇಕು. ಹೀಗಾದರೆ ವಿಚಾರಣೆ ಮುಂದೂಡಲಾಗುವುದು ಎಂದು ನ್ಯಾಯಾಧೀಶರು ಎಚ್ಚರಿಸಿದರು.

ನ್ಯಾಯಾಧೀಶರ ಕೊಠಡಿಯಲ್ಲಿ ವಿಚಾರಣೆ ನಡೆಸುವಂತೆ ಬಳಿಕ ಆರೋಪಿಗಳ ಪರ ವಕೀಲರು ಮನವಿ ಮಾಡಿದರು. ಸ್ವಲ್ಪ ಮಂದಿ ಹೊರಕ್ಕೆ ಹೋದ ಮೇಲೆ ವಿಚಾರಣೆ ಆರಂಭ ಆಯಿತು.

ಮುಂದೆ ಬರುವಂತೆ ಕರೆದ ಪವಿತ್ರಾ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದರ್ಶನ್‌ ಅವರು ಕ್ವಾರಂಟೈನ್‌ ಸೆಲ್‌ನಲ್ಲಿದ್ದಾರೆ. ಪವಿತ್ರಾ ಅವರು ಮಹಿಳಾ ಬ್ಯಾರಕ್‌ನಲ್ಲಿ ಇದ್ದಾರೆ. ಎರಡನೇ ಬಾರಿಗೆ ಜೈಲಿಗೆ ತೆರಳಿದ ಮೇಲೆ ಆರೋಪಿಗಳು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿರಲಿಲ್ಲ. ಸೋಮವಾರ ನಡೆದ ವಿಚಾರಣೆ ವೇಳೆ ಇಬ್ಬರೂ ಮುಖಾಮುಖಿಯಾದರು.

ವಿಚಾರಣೆಗೂ ಮುನ್ನ ದರ್ಶನ್‌ ಅವರನ್ನು ಮುಂದೆ ಬರುವಂತೆ ಪವಿತ್ರಾ ಕರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.