ADVERTISEMENT

ಕೂರ್ಮಗಡ ಬಳಿ ದೋಣಿ ದುರಂತ: ಇಬ್ಬರು ಮಕ್ಕಳಿಗೆ ಮುಂದುವರಿದ ಹುಡುಕಾಟ

48 ಗಂಟೆಗಳಿಗೂ ಅಧಿಕ ನಿರಂತರ ಕಾರ್ಯಾಚರಣೆ

ಸದಾಶಿವ ಎಂ.ಎಸ್‌.
Published 24 ಜನವರಿ 2019, 6:30 IST
Last Updated 24 ಜನವರಿ 2019, 6:30 IST
ಭಾರತೀಯ ಕೋಸ್ಟ್‌ ಗಾರ್ಡ್‌ನ ದೋಣಿಯ ಹಾಗೂ ಸ್ಥಳೀಯ ಮೀನುಗಾರರ ದೋಣಿಗಳು ಅರಬ್ಬಿ ಸಮುದ್ರದಲ್ಲಿ ಕಾರ್ಯಾಚರಣೆಯಲ್ಲಿ ನಿರತವಾಗಿರುವುದು.
ಭಾರತೀಯ ಕೋಸ್ಟ್‌ ಗಾರ್ಡ್‌ನ ದೋಣಿಯ ಹಾಗೂ ಸ್ಥಳೀಯ ಮೀನುಗಾರರ ದೋಣಿಗಳು ಅರಬ್ಬಿ ಸಮುದ್ರದಲ್ಲಿ ಕಾರ್ಯಾಚರಣೆಯಲ್ಲಿ ನಿರತವಾಗಿರುವುದು.   

ಕಾರವಾರ: ಕೂರ್ಮಗಡ ಬಳಿ ಅರಬ್ಬಿ ಸಮುದ್ರದಲ್ಲಿ ಅಡಿಮೇಲಾದ ದೋಣಿಯಲ್ಲಿದ್ದ ಇಬ್ಬರು ಮಕ್ಕಳಿಗೆ ಬುಧವಾರವೂ ಶೋಧ ಕಾರ್ಯ ಮುಂದುವರಿಯಿತು. ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾದ ಐದು ತಂಡಗಳು ನಿರಂತರವಾಗಿ 48 ಗಂಟೆಗಳಿಗೂ ಅಧಿಕ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ.

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಹೊಸೂರಿನಕೀರ್ತಿ ಸೋಮಪ್ಪಬೆಳಗಲಕೊಪ್ಪ (9) ಹಾಗೂ ಸಂದೀಪ್ ಪರಸಪ್ಪ (10) ಅವರು ಇನ್ನೂ ಸಿಕ್ಕಿಲ್ಲ.ಈ ಮಕ್ಕಳನ್ನೂ ಒಳಗೊಂಡುಕುಟುಂಬದ 12 ಮಂದಿ ದುರಂತಕ್ಕೀಡಾದ ದೋಣಿಯಲ್ಲಿದ್ದರು. ಅವರ ಪೈಕಿ ಏಳುಜನರ ಶವಗಳು ಮಂಗಳವಾರ ಪತ್ತೆಯಾಗಿದ್ದವು. ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಸಂಬಂಧಿಕರು ಶವಗಳನ್ನು ಹೊಸೂರಿಗೆ ಆಂಬುಲೆನ್ಸ್‌ನಲ್ಲಿ ತೆಗೆದುಕೊಂಡು ಹೋದರು.

ಬುಧವಾರ ಬೆಳಿಗ್ಗೆ ಆರು ಗಂಟೆ ಸುಮಾರಿಗೇ ನೌಕಾಪಡೆಯ ಚೇತಕ್ ಹೆಲಿಕಾಪ್ಟರ್ ಸಮುದ್ರದ ಮೇಲೆ ಹಾರಾಟ ಆರಂಭಿಸಿತ್ತು. ಅನುಮಾನ ಕಂಡಲ್ಲೆಲ್ಲ ಕೆಳಮಟ್ಟದಲ್ಲಿ ಹಾರಾಟ ನಡೆಸಿದ ಸಿಬ್ಬಂದಿ, ತೀವ್ರ ಶೋಧ ಕಾರ್ಯ ನಡೆಸಿದರು. ಕಾಳಿ ನದಿ, ಕೋಡಿಬಾಗ, ರವೀಂದ್ರನಾಥ ಟ್ಯಾಗೋರ್ ಕಡಲತೀರ, ಲೈಟ್ ಹೌಸ್, ಕೂರ್ಮಗಡ, ಬೈತಖೋಲ, ಮುದಗಾ, ಅಂಜುದೀವ್ ದ್ವೀಪದ ಸುತ್ತಮುತ್ತ ಹುಡುಕಾಟ ನಡೆಸಲಾಯಿತು.

ADVERTISEMENT

ಭಾರತೀಯ ಕೋಸ್ಟ್‌ ಗಾರ್ಡ್‌ನ ಸಿ–155, ಸಿ–420 ಹಾಗೂ ಸಿ–123 ದೋಣಿಗಳೂ ದಿನವಿಡೀ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಕರಾವಳಿ ಕಾವಲು ಪೊಲೀಸ್‌ನ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರೂ ಜತೆಯಾಗಿದ್ದರು. ಬುಧವಾರ ಮೀನುಗಾರಿಕೆ ತೆರಳಿದ್ದ ಮೀನುಗಾರರು ಸಮುದ್ರದಲ್ಲಿ ತಮ್ಮ ಗಮನಕ್ಕೆ ಬಂದ ಎಲ್ಲ ಅಂಶಗಳನ್ನೂ ರಕ್ಷಣಾ ಸಿಬ್ಬಂದಿಯ ಗಮನಕ್ಕೆ ತಂದರು. ತಮಗೆ ಅನುಮಾನ ಕಂಡಲ್ಲಿ ಪರಿಶೀಲನೆ ನಡೆಸುವಂತೆ ಕರಾವಳಿ ಕಾವಲು ಪೊಲೀಸರನ್ನು ಒತ್ತಾಯಿಸಿದರು.

ಸಂಭ್ರಮವನ್ನು ಕಾಣಲೇ ಇಲ್ಲ:ಮೃತಪಟ್ಟ ಸ್ಥಳೀಯ ಯುವಕ ಶ್ರೇಯಸ್ ಪಾವಸ್ಕರ್‌ಗೆ(28) ವಿವಾಹ ನಿಶ್ಚಯವಾಗಿತ್ತು. ರಾಮನಗುಳಿಯ ಸಂಗೀತಾ (23) ಅವರೂ ಹಸೆಮಣೆ ಏರಲು ಸಜ್ಜಾಗಿದ್ದರು. ಮುಂಬೈನಲ್ಲಿರುವ ನೀಲೇಶ ಪೆಡ್ನೇಕರ್ ಹಾಗೂ ಪತ್ನಿ ನೇಹಾ ಜಾತ್ರೆಗಾಗಿಯೇ ಬಂದಿದ್ದರು. ರಾಮನಗುಳಿಗೆ ಬಂದುಪರಿಚಿತರ ಜೊತೆ ಕೂರ್ಮಗಡಕ್ಕೆ ಅವರು ಪ್ರಯಾಣಿಸಿದ್ದರು. ದುರಂತದಲ್ಲಿ ನೀಲೇಶ ಮೃತಪಟ್ಟರು.

ಕಾರವಾರದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದದೊಡ್ಡದುರಂತಇದಾಗಿದ್ದು, ಮೂರು ದಿನಗಳ ಬಳಿಕವೂ ನಾಗರಿಕರು ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದಾರೆ. ಯಾರೇ ಮಾತನಾಡಿದರೂ ಕೊನೆಗೆ ದುರಂತದ ವಿಚಾರವನ್ನು ನೆನಪಿಸಿಕೊಂಡು, ಹೀಗಾಗಬಾರದಿತ್ತು ಎಂಬ ವಿಷಾದದೊಂದಿಗೆ ಮಾತು ಕೊನೆಗೊಳಿಸುತ್ತಿದ್ದಾರೆ.

ಬಹುಚರ್ಚಿತ ವಿಷಯ: ದೋಣಿ ದುರಂತವು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲೂ ಅತ್ಯಂತ ಹೆಚ್ಚು ಚರ್ಚಿತ ವಿಚಾರವಾಗಿತ್ತು. ಟಾಪ್ 10 (ಟ್ರೆಂಡ್‌) ವಿಷಯಗಳಲ್ಲಿ ಒಳಗೊಂಡು, ಜಾಗತಿಕಮಟ್ಟದಲ್ಲಿ ಗಮನ ಸೆಳೆದಿತ್ತು. ಸಾವಿರಾರು ಜನರು ಈ ಬಗ್ಗೆ ಟ್ವೀಟ್ ಮಾಡಿದ್ದರು. ಅವಘಡದ ಫೋಟೊಗಳು ಹಾಗೂ ವಿಡಿಯೊಗಳನ್ನು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದರು.

ನೆನಪಾದ ಮಾಡಿಭಾಗ ದುರಂತ:ಕೂರ್ಮಗಡ ಸಮೀಪ ದೋಣಿ ಮುಳುಗಿ 16 ಮಂದಿ ಮೃತಪಟ್ಟ ಪ್ರಕರಣವು, ಸುಮಾರು 10 ವರ್ಷಗಳ ಹಿಂದಿನ ಮತ್ತೊಂದು ದುರಂತದ ಕರಾಳ ನೆನಪನ್ನು ಮುಂದಿಟ್ಟಿದೆ. ಕಾರವಾರ ತಾಲ್ಲೂಕಿನ ಕಡವಾಡ ಸಮೀಪದ ಮಾಡಿಭಾಗದಲ್ಲಿ ಗುಡ್ಡ ಕುಸಿದು ಮನೆಗಳ ಮೇಲೆ ಮಣ್ಣು, ಬಂಡೆ ಬಿದ್ದಿತ್ತು. ಅದರಲ್ಲಿ 19 ಜನರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.