ADVERTISEMENT

ಅರಣ್ಯವಾಸಿಗಳ ಸ್ಥಳಾಂತರ ಕಾನೂನುಬಾಹಿರ: ಅರಣ್ಯ ಸಚಿವರಿಗೆ ಸುರತ್ಕಲ್ ನಿವಾಸಿ ದೂರು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2025, 15:48 IST
Last Updated 18 ಫೆಬ್ರುವರಿ 2025, 15:48 IST
<div class="paragraphs"><p>ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್</p></div>

ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್

   

ನವದೆಹಲಿ: ‘ಕರ್ನಾಟಕದ ವಿವಿಧೆಡೆ ಅರಣ್ಯ ವಾಸಿಗಳನ್ನು ಕಾನೂನುಬಾಹಿರವಾಗಿ ಸ್ಥಳಾಂತರ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಭಾಗಿಯಾದ ಅರಣ್ಯಾಧಿಕಾರಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಒತ್ತಾಯಿಸಿ ಮಂಗಳೂರಿನ ಸುರತ್ಕಲ್ ನಿವಾಸಿ ರೇಷ್ಮಾ ಎಂಬುವರು ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಹಾಗೂ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುಯಲ್ ಓರಮ್‌ ಅವರಿಗೆ ದೂರು ನೀಡಿದ್ದಾರೆ.

ನ್ಯಾಯ, ಹೊಣೆಗಾರಿಕೆ ಮತ್ತು ಹಕ್ಕುಗಳಿಗಾಗಿ ರಾಷ್ಟ್ರೀಯ ಒಕ್ಕೂಟವು (ನಜಾರ್) ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ 2024ರ ಸೆಪ್ಟೆಂಬರ್‌ನಲ್ಲಿ ಬರೆದಿರುವ ಪತ್ರವನ್ನು ಉಲ್ಲೇಖಿಸಿ ದೂರು ನೀಡಿರುವ ಅವರು, ‘ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಹುಲಿ ಮೀಸಲು ಅರಣ್ಯಗಳ ಕೇಂದ್ರ ಭಾಗದಲ್ಲಿ ವಾಸಿಸುತ್ತಿರುವ ಅರಣ್ಯವಾಸಿಗಳನ್ನು ಮಾತ್ರ ಪುನರ್ವಸತಿ ಕಲ್ಪಿಸಲು ಅವಕಾಶವಿದೆ. ಮೀಸಲು ಪ್ರದೇಶಗಳಲ್ಲಿ ವಾಸಿಸುತ್ತಿರುವವರನ್ನು ಸ್ಥಳಾಂತರಗೊಳಿಸಲು ಸ್ಪಷ್ಟ ನಿರ್ಬಂಧ ಇದೆ. ಆದರೂ ವನ್ಯಜೀವಿ ಕಾಯ್ದೆ ಮತ್ತು ಎನ್‌ಟಿಸಿಎ ಮಾರ್ಗಸೂಚಿ ಉಲ್ಲಂಘಿಸಿ ಕಾಳಿ ಹುಲಿ ಮೀಸಲು ಅರಣ್ಯದ ಕೇಂದ್ರ ಪ್ರದೇಶಗಳಾದ ಸುಲಾವಳಿ, ಕರಂಜೆ, ಕಲಭಾವಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಅರಣ್ಯ ವಾಸಿಗಳನ್ನು ಸ್ಥಳಾಂತರಿಸಲಾಗಿದೆ’ ಎಂದು ತಿಳಿಸಿದ್ದಾರೆ. 

ADVERTISEMENT

ಹುಲಿ ಸಂರಕ್ಷಿತ ಪ್ರದೇಶಗಳೆಂದು ಅಧಿಸೂಚಿತಗೊಳ್ಳದ ಅಭಯಾರಣ್ಯಗಳು ಹಾಗೂ ರಾಷ್ಟ್ರೀಯ ಉದ್ಯಾನಗಳಲ್ಲಿ ವಾಸಿಸುತ್ತಿರುವ ಅರಣ್ಯವಾಸಿಗಳನ್ನು ಸ್ಥಳಾಂತರಗೊಳಿಸುವಂತಿಲ್ಲ. ಜತೆಗೆ, ಅವರನ್ನು ಸ್ಥಳಾಂತರ ಮಾಡುವ ಮೊದಲು ಅವರ ಹಕ್ಕುಗಳನ್ನು ಗುರುತಿಸಿ ಇತ್ಯರ್ಥಪಡಿಸಬೇಕು. ಗ್ರಾಮ ಅರಣ್ಯ ಸಮಿತಿ, ಉಪ ವಿಭಾಗೀಯ ಮಟ್ಟದ ಸಮಿತಿ ಹಾಗೂ ಜಿಲ್ಲಾ ಮಟ್ಟದ ಸಮಿತಿಯಿಂದ ಇತ್ಯರ್ಥ ಮಾಡುವ ಕುರಿತು ಕಾನೂನು ಪ್ರಕ್ರಿಯೆಯನ್ನು ಅನುಸರಿಸಬೇಕು. ಆದರೆ, ರಾಜ್ಯದ ವಿವಿಧ ಕಡೆಗಳಲ್ಲಿ ಅರಣ್ಯವಾಸಿಗಳಿಗೆ ಯಾವುದೇ ಜಮೀನು ನೀಡದೆ ₹15 ಲಕ್ಷ ನೀಡಿ ಸ್ಥಳಾಂತರ ಮಾಡಲಾಗಿದೆ. ಇದು ಅರಣ್ಯ ಹಕ್ಕು ಕಾಯ್ದೆ– 2006 ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆ– 1972ರ ಉಲ್ಲಂಘನೆ ಎಂದು ಅವರು ದೂರಿದ್ದಾರೆ. 

ಹುಲಿ ಸಂರಕ್ಷಿತ ಪ್ರದೇಶಗಳೆಂದು ಅಧಿಸೂಚಿತಗೊಳ್ಳದ ರಾಜ್ಯದ ಮಹದೇಶ್ವರ ಬೆಟ್ಟ, ಭೀಮಗಡ, ಚಿಂಚೋಳಿ ಸೇರಿದಂತೆ ವಿವಿಧ ಅಭಯಾರಣ್ಯಗಳು ಹಾಗೂ ರಾಷ್ಟ್ರೀಯ ಉದ್ಯಾನಗಳಲ್ಲಿ ಕೈಗೊಳ್ಳಲಾಗುತ್ತಿರುವ ಪುನರ್ವಸತಿ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.