ADVERTISEMENT

ದೇವನಹಳ್ಳಿಯ ರೆಸಾರ್ಟ್‌ನಲ್ಲಿ ಮಧ್ಯಪ್ರದೇಶ ಶಾಸಕರ ವಾಸ್ತವ್ಯ

* ತೆರೆಮರೆಯಲ್ಲಿ ‘ಆಪರೇಷನ್ ಕಮಲ’ * ಬೆಂಗಳೂರಿನಲ್ಲಿ ರಕ್ಷಣೆ ಕೋರಿದ ಶಾಸಕರು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 2:11 IST
Last Updated 11 ಮಾರ್ಚ್ 2020, 2:11 IST
ರೆಸಾರ್ಟ್‌ನಲ್ಲಿ ತಂಗಿರುವ ಶಾಸಕರು ತಮ್ಮ ರಾಜೀನಾಮೆ ಪತ್ರಗಳನ್ನು ಪ್ರದರ್ಶಿಸಿದರು
ರೆಸಾರ್ಟ್‌ನಲ್ಲಿ ತಂಗಿರುವ ಶಾಸಕರು ತಮ್ಮ ರಾಜೀನಾಮೆ ಪತ್ರಗಳನ್ನು ಪ್ರದರ್ಶಿಸಿದರು   

ಬೆಂಗಳೂರು/ದೇವನಹಳ್ಳಿ: ಮಧ್ಯಪ್ರದೇಶದಲ್ಲಿ ಕಮಲನಾಥ್ ಸರ್ಕಾರವನ್ನು ಪತನಗೊಳಿಸಲು ತೆರೆಮರೆಯಲ್ಲಿ ‘ಆಪರೇಷನ್ ಕಮಲ’ ಆರಂಭ ವಾಗಿದ್ದು, ಬಿಜೆಪಿಯವರು ಸೆಳೆದಿದ್ದಾರೆ ಎನ್ನಲಾದ ಕಾಂಗ್ರೆಸ್‌ನ 19 ಶಾಸಕರು ದೇವನಹಳ್ಳಿತಾಲ್ಲೂಕಿನ ನಂದಿಬೆಟ್ಟ ಸಮೀಪದಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ಶೇರ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ವಿಶೇಷ ವಿಮಾನ ಮೂಲಕ ಸೋಮ ವಾರವೇ ಬೆಂಗಳೂರಿಗೆ ಬಂದಿದ್ದ ಆರು ಸಚಿವರು ಹಾಗೂ 11 ಶಾಸಕರು ಮಾರತ್ತಹಳ್ಳಿಯ ಆದರ್ಶ ರಿಟ್ರೀಟ್ ಹೋಟೆಲ್‌ನಲ್ಲಿ ತಂಗಿದ್ದರು. ತಡರಾತ್ರಿ ಮತ್ತಿಬ್ಬರು ನಗರಕ್ಕೆ ಬಂದಿದ್ದಾರೆ. ಬಳಿಕ 19 ಮಂದಿಯೂ ಗಾಲ್ಫ್ ಶೇರ್‌ ರೆಸಾರ್ಟ್‌ಗೆ ಸ್ಥಳಾಂತರಗೊಂಡಿದ್ದಾರೆ.

ಇದರ ನಡುವೆಯೇ ಶಾಸಕರು ಹಾಗೂ ಸಂಸದರು, ಕರ್ನಾಟಕದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ. ಬೆಂಗಳೂರಿನಲ್ಲಿ ತಂಗಿರುವ ತಮಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ.

ADVERTISEMENT

‘ಮಧ್ಯಪ್ರದೇಶದ ಶಾಸಕರು ಹಾಗೂ ಸಂಸದರಾದ ನಾವು ಸ್ವಯಂಪ್ರೇರಿತ ವಾಗಿ ಮಹತ್ವದ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದೇವೆ. ಇಲ್ಲಿ ಓಡಾಡಲು ಹಾಗೂ ವಾಸ್ತವ್ಯ ಇರಲು ರಕ್ಷಣೆ ಅಗತ್ಯವಿದೆ. ನಮ್ಮ ಸುರಕ್ಷತೆ ದೃಷ್ಟಿಯಿಂದ ಸ್ಥಳೀಯ ಪೊಲೀಸರಿಂದ ಭದ್ರತೆ ಕೊಡಿಸಬೇಕು’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

2018ರಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದಿ ದ್ದಾಗ ಜೆಡಿಎಸ್ ಶಾಸಕರು ಹಲವು ದಿನಗಳ ಕಾಲ ಪ್ರೆಸ್ಟೀಜ್ ಗಾಲ್ಫ್ ಶೇರ್ ರೆಸಾರ್ಟ್‌ನಲ್ಲಿ ತಂಗಿದ್ದರು. ನಂತರ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ಸೇರಿ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು.

ಇದಾದ ನಂತರ ಆಡಳಿತ ನಡೆಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರ ಪತನಗೊಳಿಸಲು ಬಿಜೆಪಿ ಆಪರೇಷನ್ ಕಮಲ ಆರಂಭಿಸಿದಾಗಲೂ ಜೆಡಿಎಸ್ ಶಾಸಕರು ಇದೇ ರೆಸಾರ್ಟ್‌ನಲ್ಲಿ ಇದ್ದರು. ಇದೀಗ ಮಧ್ಯಪ್ರದೇಶದಲ್ಲೂ ಆಪರೇಷನ್ ಕಮಲ ಆರಂಭವಾಗಿದ್ದು, ಅಲ್ಲಿಯ ಶಾಸಕರು ಹಾಗೂ ಸಂಸದರು ಇದೇ ರೆಸಾರ್ಟ್‌ಗೆ ಬಂದು ತಂಗಿದ್ದಾರೆ.

ರೆಸಾರ್ಟ್‌ನಲ್ಲಿರುವ ಶಾಸಕರು-ಸಂಸದರು
ತುಳಸಿ ಸಿಲಾವತ್, ಮಹೇಂದ್ರ ಸಿಂಗ್ ಸಿಸೋಡಿಯಾ, ಗೋವಿಂದ್‌ಸಿಂಗ್ ರಜಪೂತ್, ಇಮ್ರಾತಿದೇವಿ, ಪ್ರದ್ಯುಮನ್ ಸಿಂಗ್ ತೋಮರ್, ಪ್ರಭುರಾಮ್ ಚೌಧರಿ,ರಣವೀರ್ ಜಟಾಯು, ಪ್ರಭು ನಾರಾಯಣ ಚೌಧರಿ, ರಾಜವರ್ಧನ್‌ಸಿಂಗ್, ಕಮಲೇಶ್ ಜಟಾಯು, ಮುನ್ನಾಲಾಲ್ ಗೋಯಲ್, ಜಸ್ವಂತ್, ರಘುರಾಜ್, ಹರ್ಮನ್‌ಸಿಂಗ್, ಸುರೇಶ್, ಗೋವಿಂದ್‌ರಾಜ್, ಜೈಪಾಲ್‌ ಸಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.