ADVERTISEMENT

ಕನ್ನಡ ಮಾತನಾಡಲು ನಿರಾಕರಿಸಿದ SBI ಮ್ಯಾನೇಜರ್‌ಗೆ CM ಸಿದ್ದರಾಮಯ್ಯ ತೀವ್ರ ತರಾಟೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಮೇ 2025, 7:08 IST
Last Updated 21 ಮೇ 2025, 7:08 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಗ್ರಾಹಕರ ಒತ್ತಾಯದ ಹೊರತಾಗಿಯೂ ಕನ್ನಡ ಮಾತನಾಡಲು ನಿರಾಕರಿಸಿದ್ದಕ್ಕಾಗಿ ಬೆಂಗಳೂರಿನ ಚಂದಾಪುರ ಸೂರ್ಯಸಿಟಿಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಶಾಖೆಯ ಮಹಿಳಾ ಮ್ಯಾನೇಜರ್‌ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡಲು ನಿರಾಕರಿಸಿ ನಾಗರಿಕರನ್ನು ಕಡೆಗಣಿಸಿರುವ ಆನೇಕಲ್ ತಾಲ್ಲೂಕಿನ ಸೂರ್ಯಸಿಟಿಯ ಎಸ್‌ಬಿಐ ಶಾಖಾ ವ್ಯವಸ್ಥಾಪಕರ ವರ್ತನೆ ತೀವ್ರ ಖಂಡನೀಯ’ ಎಂದು ಸಿದ್ದರಾಮಯ್ಯ ‘ಎಕ್ಸ್‌’ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

‘ಅಧಿಕಾರಿಯನ್ನು ವರ್ಗಾವಣೆ ಮಾಡುವಲ್ಲಿ ಎಸ್‌ಬಿಐನ ತ್ವರಿತ ಕ್ರಮವನ್ನು ನಾವು ಪ್ರಶಂಸಿಸುತ್ತೇವೆ. ಆದಾಗ್ಯೂ, ಇಂತಹ ಘಟನೆಗಳು ಮರುಕಳಿಸಬಾರದು. ಎಲ್ಲಾ ಬ್ಯಾಂಕ್ ಉದ್ಯೋಗಿಗಳು ಗ್ರಾಹಕರನ್ನು ಘನತೆಯಿಂದ ನಡೆಸಿಕೊಳ್ಳಬೇಕು ಮತ್ತು ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು’ ಎಂದು ಹೇಳಿದ್ದಾರೆ.

ADVERTISEMENT

‘ಭಾರತದಾದ್ಯಂತ ಎಲ್ಲಾ ಬ್ಯಾಂಕ್ ಸಿಬ್ಬಂದಿಗೆ ಸಾಂಸ್ಕೃತಿಕ ಮತ್ತು ಭಾಷಾ ಸಂವೇದನಾ ತರಬೇತಿಯನ್ನು ಕಡ್ಡಾಯಗೊಳಿಸಬೇಕೆಂದು ನಾನು ಹಣಕಾಸು ಸಚಿವಾಲಯ ಮತ್ತು ಹಣಕಾಸು ಸೇವೆಗಳ ಇಲಾಖೆಯನ್ನು ಒತ್ತಾಯಿಸುತ್ತೇನೆ. ಸ್ಥಳೀಯ ಭಾಷೆಯನ್ನು ಗೌರವಿಸುವುದು ಎಂದರೆ ಜನರನ್ನು ಗೌರವಿಸುವುದಾಗಿದೆ’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಏನಿದು ಘಟನೆ?

ಕನ್ನಡ ಮಾತನಾಡುವ ವಿಚಾರಕ್ಕೆ ಚಂದಾಪುರ ಸೂರ್ಯಸಿಟಿಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಶಾಖೆಯ ಮಹಿಳಾ ಮ್ಯಾನೇಜರ್‌ ಮತ್ತು ಕೆಆರ್‌ಎಸ್‌ ಪಕ್ಷದ ಮಹೇಶ್‌ ನಡುವೆ ಮಂಗಳವಾರ ಮಾತಿನ ಚಕಮಕಿ ನಡೆದಿತ್ತು.

ಸೂರ್ಯಸಿಟಿ ಎಸ್‌ಬಿಐ ಬ್ಯಾಂಕ್‌ಗೆ ಹೋಗಿದ್ದ ಕೆಆರ್‌ಎಸ್‌ ಪಕ್ಷದ ಮಹೇಶ್‌ ಬೆಳಗ್ಗೆ 10.30 ಆದರೂ ಸಿಬ್ಬಂದಿ ಏಕೆ ಕೆಲಸ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದರು. ಈ ವಿಷಯಕ್ಕೆ ಆರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿತ್ತು.

ಮಾತುಕತೆ ವೇಳೆ ಬ್ಯಾಂಕ್‌ ಮ್ಯಾನೇಜರ್‌ ಹಿಂದಿಯಲ್ಲಿ ಮಾತನಾಡಲು ಆರಂಭಿಸಿದ್ದರು. ಆಗ ಮಹೇಶ್‌, ಕನ್ನಡದಲ್ಲಿ ಮಾತನಾಡುವಂತೆ ಒತ್ತಾಯಿಸಿದ್ದರು. ‘ಕಡ್ಡಾಯವಾಗಿ ಕನ್ನಡದಲ್ಲಿ ಮಾತನಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ’ ಎಂದ ಮ್ಯಾನೇಜರ್‌, ‘ಕನ್ನಡ ಮಾತನಾಡುವುದಿಲ್ಲ’ ಎಂದು ವಾದ ಮಾಡಿದ್ದರು.

‘ಇದು ಕರ್ನಾಟಕ. ಹಾಗಾಗಿ ಕನ್ನಡ ಮಾತನಾಡಿ’ ಎಂದು ಮಹೇಶ್‌ ಹೇಳಿದ್ದಾರೆ. ಆಗ ಮ್ಯಾನೇಜರ್‌, ‘ಇದು ಭಾರತ, ಹಾಗಾಗಿ ಕನ್ನಡ ಮಾತನಾಡುವುದಿಲ್ಲ’ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಹಿಳಾ ಸಿಬ್ಬಂದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಆಯಾ ರಾಜ್ಯಗಳಲ್ಲಿ ಸ್ಥಳೀಯ ಭಾಷೆ ಮಾತನಾಡುವಂತೆ ಆರ್‌ಬಿಐ ತಿಳಿಸಿದೆ. ಹಾಗಾಗಿ ಬ್ಯಾಂಕ್‌ ಸಿಬ್ಬಂದಿ ಕಡ್ಡಾಯವಾಗಿ ಕನ್ನಡ ಮಾತನಾಡಬೇಕು. ಆದರೆ ಚಂದಾಪುರ ಎಸ್‌ಬಿಐ ಶಾಖೆಯ ಮ್ಯಾನೇಜರ್‌ ಕನ್ನಡ ಮಾತನಾಡುವುದಿಲ್ಲ ಎಂದು ಹೇಳಿರುವುದು ಖಂಡನೀಯ ಮಹೇಶ್‌ ಆಕ್ಷೇಪ ಎತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.