ADVERTISEMENT

ಉಪ ಚುನಾವಣೆ ಫಲಿತಾಂಶ; ಪರಿಣಾಮ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 18:53 IST
Last Updated 7 ನವೆಂಬರ್ 2018, 18:53 IST
   

ಕಾಂಗ್ರೆಸ್ ಉಲ್ಲಾಸ: ಉಮೇದು-ಪೈಪೋಟಿ

* ಬಿಜೆಪಿ ಮಣಿಸಿ, ಮೈತ್ರಿ ಗೆದ್ದಿರುವುದರಿಂದ ನಾಯಕರ ಉತ್ಸಾಹ ಇಮ್ಮಡಿ.

*ಲೋಕಸಭೆ ಚುನಾವಣೆಗೆ ಅನುಕೂಲಕರ ವಾತಾವರಣ ಇದೆ ಎಂಬ ಭಾವನೆ ಮೂಡಿಸಿದ್ದು, ‘ಬಿಜೆಪಿ ಮುಕ್ತ ಭಾರತ’ದ ರಾಹುಲ್ ಗಾಂಧಿ ಕರೆಗೆ ಕೈಜೋಡಿಸುವ ಉಮೇದು ಹೆಚ್ಚಿಸಲಿದೆ.

ADVERTISEMENT

*ಉಪ ಚುನಾವಣೆವರೆಗೂ ಪಕ್ಷದ ಚಟುವಟಿಕೆಯಿಂದ ಸ್ವಲ್ಪಮಟ್ಟಿಗೆ ದೂರ ಉಳಿದಿದ್ದ ಸಿದ್ದರಾಮಯ್ಯ ಶಲ್ಯ ಕೊಡವಿ ನಿಂತು ಪ್ರಚಾರದಲ್ಲಿ ಪಾಲ್ಗೊಂಡರು.

*ಬಳ್ಳಾರಿ ಚುನಾವಣೆ ಉಸ್ತುವಾರಿ ಹೊತ್ತಿದ್ದ ಸಚಿವ ಡಿ.ಕೆ. ಶಿವಕುಮಾರ್, ಈ ಗೆಲುವನ್ನು ತಮ್ಮ ನಾಯಕತ್ವ, ಪ್ರಭಾವ ಹೆಚ್ಚಿಸಿಕೊಂಡು ಬಳಸಿಕೊಳ್ಳಲು ಅಣಿಯಾಗಲಿದ್ದಾರೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಮಧ್ಯೆ ನಡೆಯುತ್ತಿರುವ ನಾಯಕತ್ವದ ಸಮರಕ್ಕೂ ದಾರಿ ಮಾಡಿಕೊಡಲಿದೆ.

**

ಕಮಲ ತಳಮಳ: ನಾಯಕತ್ವದ ವಿರುದ್ಧ ಸಿಟ್ಟು

* ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ರಾಜ್ಯ ನಾಯಕರಾಗಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಓಡಾಡದೇ, ತಮ್ಮ ಪುತ್ರ ಬಿ.ವೈ. ರಾಘವೇಂದ್ರ ಗೆಲ್ಲಿಸಿಕೊಳ್ಳಲು ಸೀಮಿತರಾದರು. ಇದರಿಂದಾಗಿ ಬಳ್ಳಾರಿ, ಜಮಖಂಡಿಯಲ್ಲಿ ಸೋಲಾಯಿತು ಎಂಬ ವಾದ ಮುಂದಿಟ್ಟುಕೊಂಡು ನಾಯಕತ್ವ ಬದಲಾವಣೆಗೆ ಎಂಬ ಕೂಗು ಜೋರಾಗಬಹುದು.

* ಕನಿಷ್ಠ ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದರೆ ಮೈತ್ರಿ ಸರ್ಕಾರ ಪತನಗೊಳಿಸುವ ಯತ್ನ ಮತ್ತೆ ಆರಂಭಿಸುವ ಚಿಂತನೆ ನಾಯಕರಲ್ಲಿತ್ತು. ಒಂದೇ ಕ್ಷೇತ್ರದಲ್ಲಿ ಗೆದ್ದಿರುವುದರಿಂದ ಲೋಕಸಭೆ ಚುನಾವಣೆವರೆಗೂ ಸರ್ಕಾರ ಪತನದ ಯತ್ನವನ್ನು ಕೈಬಿಡುವ ಸಾಧ್ಯತೆ.

* ವಾಲ್ಮೀಕಿ ನಾಯಕ ಸಮುದಾಯದ ನೇತಾರನಾದ ತನಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಎಂಬ ಬಿ. ಶ್ರೀರಾಮುಲು ಪ್ರತಿಪಾದನೆಗೆ ಭಂಗ ಬಂದಿದೆ.

* ರಾಜ್ಯ ಘಟಕದ ಅಧ್ಯಕ್ಷರ ವಿರುದ್ಧ ಭಿನ್ನಮತ ಸ್ಪೋಟವಾಗಬಹುದು.

* ಶಿವಮೊಗ್ಗದಲ್ಲಿ ಗೆಲುವಿನ ಅಂತರ ಕುಸಿದಿದೆ. ಇದು ನಾಯಕತ್ವದ ಸಾಮರ್ಥ್ಯವನ್ನೇ ಪ್ರಶ್ನಿಸುವಂತೆ ಮಾಡಿದೆ.

**

ಜೆಡಿಎಸ್: ಹೊಸ ಹುರುಪು; ಹೊಸ ಲೆಕ್ಕ

* ಎರಡು ಸ್ಥಾನಗಳನ್ನು ಉಳಿಸಿಕೊಂಡಿರುವುದು, ಮೈತ್ರಿಗೆ ಮುನ್ನಡೆ ಹಾಗೂ ಒಬ್ಬ ಶಾಸಕನೂ ಇಲ್ಲದ ಶಿವಮೊಗ್ಗದಲ್ಲಿ ಭಾರಿ ಪೈಪೋಟಿ ನೀಡಿದ್ದು ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ವಿಶ್ವಾಸವನ್ನು ದುಪ್ಪಟ್ಟುಗೊಳಿಸಿದೆ.

* ಮೈತ್ರಿ ಸರ್ಕಾರಕ್ಕೆ ಕಾಂಗ್ರೆಸ್ ನಾಯಕರ ಸಹಕಾರವಿಲ್ಲ; ಮೈತ್ರಿ ಬೇಕಿಲ್ಲ ಎಂಬರ್ಥದಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ ತಮ್ಮ ನಿಲುವು ಬದಲಿಸಿಕೊಳ್ಳಬಹುದು.

* ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಭಾರಿ ಪೈಪೋಟಿ ನೀಡಿದ್ದರಿಂದಾಗಿ, ಲೋಕಸಭೆ ಚುನಾವಣೆಯಲ್ಲಿ ತನ್ನ ನೆಲೆಯಿಲ್ಲದ ಕ್ಷೇತ್ರಗಳನ್ನೂ ಬಿಟ್ಟುಕೊಡುವಂತೆ ಮಿತ್ರ ಪಕ್ಷದ ಜತೆ ಚೌಕಾಶಿ ನಡೆಸಲು ದಾರಿ ಮಾಡಿಕೊಟ್ಟಿದೆ.

* ಮಂಡ್ಯ, ಹಾಸನ ಲೋಕಸಭೆ ಕ್ಷೇತ್ರಗಳು ಈಗ ಜೆಡಿಎಸ್ ವಶದಲ್ಲಿದೆ. ಮುಂದಿನ ಚುನಾವಣೆಯಲ್ಲಿ ಶಿವಮೊಗ್ಗ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಉತ್ತರ, ಮೈಸೂರು ಕ್ಷೇತ್ರಗಳಿಗೂ ಬೇಡಿಕೆ ಇಡಲು ಇದು ನೆಪವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.