ADVERTISEMENT

ಇಂದು ನಿಖಿಲ್‌– ರೇವತಿ ಹಸೆಮಣೆಗೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2020, 0:59 IST
Last Updated 17 ಏಪ್ರಿಲ್ 2020, 0:59 IST
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಹಾಗೂ ರೇವತಿ ಅವರ ನಿಶ್ಚಿತಾರ್ಥ ಸೋಮವಾರ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ನಡೆಯಿತು
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಹಾಗೂ ರೇವತಿ ಅವರ ನಿಶ್ಚಿತಾರ್ಥ ಸೋಮವಾರ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ನಡೆಯಿತು   

ಚಿತ್ರನಟ, ಜೆಡಿಎಸ್‌ ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ ಮತ್ತು ರೇವತಿ ಅವರ ವಿವಾಹ ಇಂದು (ಶುಕ್ರವಾರ) ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ಅತ್ಯಂತ ಸರಳವಾಗಿ ಮತ್ತು ಎರಡೂ ಕುಟುಂಬಗಳ 30 ಸದಸ್ಯರ ಸಮ್ಮುಖದಲ್ಲಿ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಧಾರಾ ಮುಹೂರ್ತ ಇದೆ.

ಗುರುವಾರ ಬೆಳಿಗ್ಗೆಯಿಂದಲೇ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಬೆಂಗಳೂರಿನ ಜೆ.ಪಿ. ನಗರದ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿತ್ತು. ನಿಖಿಲ್‌ ಅಜ್ಜ ಎಚ್.ಡಿ.ದೇವೇಗೌಡರು ಮತ್ತು ಅಜ್ಜಿ ಚನ್ನಮ್ಮ, ತಂದೆ ಎಚ್‌.ಡಿ.ಕುಮಾರಸ್ವಾಮಿ, ತಾಯಿ ಅನಿತಾ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ವರ ಪೂಜೆ ಮಧ್ಯಾಹ್ನ ನಡೆಯಿತು.

ಕೊರೊನಾ ಕಾರಣಕ್ಕೆ ಅಂತರ ಕಾಯ್ದುಕೊಳ್ಳಬೇಕಿರುವುದರಿಂದ ಕುಟುಂಬದ ಕೆಲವೇ ಕೆಲವು ಸದಸ್ಯರ ಸಮ್ಮುಖದಲ್ಲಿ ಕಾರ್ಯಕ್ರಮಗಳು ನಡೆದವು.ಸಂಜೆ ವರಪೂಜೆ ನಡೆಯುವುದಕ್ಕೂ ಮೊದಲು ಮನೆಯ ಹತ್ತಿರದ ದೇವಸ್ಥಾನಕ್ಕೆ ವರ ಸಮೇತ ಕುಟುಂಬ ಸದಸ್ಯರು ಭೇಟಿ ನೀಡಿ, ದೇವಸ್ಥಾನದ ಹೊರಗಿನಿಂದಲೇ ಕೈಮುಗಿದು ಬಂದರು. ಕಾಶಿಪಂಚೆ ಧರಿಸಿದ್ದ ಮದುಮಗ ನಿಖಿಲ್‌ ಅಜ್ಜ– ಅಜ್ಜಿ, ತಂದೆ–ತಾಯಿಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.

ADVERTISEMENT

ನಿಖಿಲ್‌ ಹಾಗೂ ರೇವತಿ ಅವರ ನಿಶ್ಚಿತಾರ್ಥ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಫೆಬ್ರುವರಿ 10ರಂದು ಅದ್ಧೂರಿಯಾಗಿ ನಡೆದಿತ್ತು.

‘ಬಂಧುಗಳು, ಅಭಿಮಾನಿಗಳು ತಾವಿದ್ದ ಸ್ಥಳದಿಂದಲೇ ವಧೂವರರನ್ನು ಆಶೀರ್ವದಿಸಬೇಕು, ಕೊರೊನಾ ಪಿಡುಗು ಮರೆಯಾದ ಮೇಲೆ ತಮ್ಮೆಲ್ಲರ ಆಶೀರ್ವಾದಕ್ಕಾಗಿ ದಂಪತಿ ನಿಮ್ಮ ಮುಂದೆ ಬರಲಿದ್ದಾರೆ. ತಾವು ಅಭಿಮಾನದಿಂದ ಮದುವೆಗೆ ಬಂದು ಸಮಾಜಕ್ಕೆ ತಪ್ಪು ಸಂದೇಶ ಹೋಗುವುದು ಬೇಡ, ಆರೋಗ್ಯ ಸಮಾಜ ನಿರ್ಮಿಸೋಣ’ ಎಂದು ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು.

ಈ ಮೊದಲು ರಾಮನಗರದ ಜಾನಪದ ಲೋಕ ಸಮೀಪ ಬೃಹತ್ ವೇದಿಕೆ ನಿರ್ಮಿಸಿ, ಸುಮಾರು 5 ಲಕ್ಷ ಜನರ ಸಮ್ಮುಖದಲ್ಲಿ ನಿಖಿಲ್‌ ಮದುವೆಯನ್ನು ವೈಭವಯುತವಾಗಿ ನೆರವೇರಿಸಲು ಕುಮಾರಸ್ವಾಮಿ ಅವರು ಯೋಜನೆ ರೂಪಿಸಿದ್ದರು. ರಾಜಕಾರಣಿಗಳು, ಉದ್ಯಮಿಗಳು, ಚಿತ್ರರಂಗದ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು, ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರೆನ್ನೆಲ್ಲ ಆಹ್ವಾನಿಸಲು ನಿರ್ಧರಿಸಿದ್ದರು. ಆದರೆ, ಕೊರೊನಾ ಕಾರಣಕ್ಕೆ ಆ ಯೋಜನೆ ಕೈಬಿಟ್ಟು ಮದುವೆಯನ್ನು ಸರಳವಾಗಿ ನೆರವೇರಿಸುವುದು ಅನಿವಾರ್ಯವಾಗಿದೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ವಿವಾಹ ಕಾರ್ಯಕ್ರಮವನ್ನು ಸದ್ಯ ಬೆಂಗಳೂರು ನಗರ ಕೊರೊನಾ ಹಾಟ್‌ಸ್ಪಾಟ್‌ ಆಗಿ ಗುರುತಿಸಿಕೊಂಡಿರುವ ಕಾರಣ ಕೇತಗಾನಹಳ್ಳಿಯ ತೋಟದ ಮನೆಗೆ ಸ್ಥಳಾಂತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.