
ಬೆಂಗಳೂರು: ‘ರಾಜ್ಯದ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ಹಲವು ವರ್ಷಗಳಿಂದ ಬಾಕಿಯಾಗಿದ್ದ 60,000ಕ್ಕೂ ಹೆಚ್ಚು ವ್ಯಾಜ್ಯಗಳನ್ನು ಎರಡೂವರೆ ವರ್ಷದಲ್ಲಿ ವಿಲೇವಾರಿ ಮಾಡಿದ್ದೇವೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಸೋಮವಾರ ವಿಡಿಯೊ ಸಂವಾದದ ಮೂಲಕ ಉಪ ವಿಭಾಗಾಧಿಕಾರಿಗಳ ಜತೆಗಿನ ತಿಂಗಳ ಪ್ರಗತಿ ಪರಿಶೀಲನಾ ಸಭೆಯ ಕುರಿತು ಮಾಹಿತಿ ನೀಡಿರುವ ಅವರು, ‘2023ಕ್ಕೂ ಮೊದಲು ಎಲ್ಲ ಉಪ ವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿ 62,857 ತಕರಾರು ಪ್ರಕರಣಗಳು ಉಳಿದುಕೊಂಡಿದ್ದವು. ಅಲ್ಲದೆ, 11,000ದಷ್ಟು ಪ್ರಕರಣಗಳು ದಾಖಲಾತಿ ಹಂತದಲ್ಲಿದ್ದವು. ಎಲ್ಲವೂ ಸೇರಿ 73,000ಕ್ಕೂ ಹೆಚ್ಚು ಪ್ರಕರಣಗಳು ಬಾಕಿಯಾಗಿದ್ದವು. ಜನ ಸಾಮಾನ್ಯರು ಪ್ರತಿ ದಿನವೂ ಅಲೆಯುವ ಪರಿಸ್ಥಿತಿ ಇತ್ತು’ ಎಂದಿದ್ದಾರೆ.
‘ನಮ್ಮ ಸರ್ಕಾರ ಬಂದ ನಂತರ ಈ ಎಲ್ಲ ಪ್ರಕರಣಗಳ ತ್ವರಿತ ವಿಲೇವಾರಿಗೆ ಕ್ರಮ ತೆಗೆದುಕೊಂಡಿದ್ದು, ಈಗ 10,656 ಪ್ರಕರಣಗಳಷ್ಟೇ ಬಾಕಿಯಾಗಿವೆ. ಈ ಪೈಕಿ ಬೆಂಗಳೂರು ಮತ್ತು ಸುತ್ತುಮುತ್ತಲ ಜಿಲ್ಲೆಗಳ ಪ್ರಕರಣಗಳ ಸಂಖ್ಯೆಯೇ ಹೆಚ್ಚು. ಅವುಗಳನ್ನು ಮಾರ್ಚ್ ಅಂತ್ಯದೊಳಗೆ ವಿಲೇವಾರಿ ಮಾಡಲು ಸೂಚಿಸಲಾಗಿದೆ’ ಎಂದು ವಿವರಿಸಿದ್ದಾರೆ.
‘ಈ ಹಿಂದೆ ಉಪ ವಿಭಾಗಾಧಿಕಾರಿ ನ್ಯಾಯಾಲಯಗಳ ಆದೇಶವನ್ನು ಆರ್‌ಸಿಸಿಎಂಎಸ್ ತಂತ್ರಾಂಶದಲ್ಲಿ ದಾಖಲಿಸುವ ರೂಢಿ ಇರಲಿಲ್ಲ. ಇದರಿಂದ ಕೆಲ ಅಧಿಕಾರಿಗಳು ತಮ್ಮಿಚ್ಛೆಯಂತೆ ಆದೇಶ ನೀಡುತ್ತಿದ್ದರು. ಉಪ ವಿಭಾಗಾಧಿಕಾರಿ ನ್ಯಾಯಾಲಯಗಳ ಆದೇಶಗಳನ್ನು ನ್ಯಾಯಬದ್ಧಗೊಳಿಸುವ ಸಲುವಾಗಿ, ಈ ಹಿಂದಿನ ಎಲ್ಲ ಅನುಮಾನಿತ ಆದೇಶಗಳನ್ನೂ ಮರು ಪರಿಶೀಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.