ADVERTISEMENT

ಮಾಸಾಶನ ಪಡೆಯಲು ಆಧಾರ್‌ ಕಡ್ಡಾಯ

ಬೋಗಸ್‌ ಫಲಾನುಭವಿಗಳಿಗೆ ಕಡಿವಾಣ: ₹600 ಕೋಟಿ ಉಳಿತಾಯ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 20:00 IST
Last Updated 27 ಸೆಪ್ಟೆಂಬರ್ 2019, 20:00 IST
   

ಬೆಂಗಳೂರು: ಸಂಧ್ಯಾ ಸುರಕ್ಷಾ, ವಿಧವಾ ವೇತನ, ವಿಕಲ ಚೇತನರ ಮಾಸಾಶನ ಸೇರಿದಂತೆ ಎಲ್ಲ ಬಗೆಯ ಮಾಸಾಶನಗಳನ್ನು ಪಡೆಯಲು ಫಲಾನುಭವಿಗಳಿಗೆ ಇನ್ನು ಮುಂದೆ ಆಧಾರ್‌ ಕಡ್ಡಾಯ.

ಬೋಗಸ್ ಫಲಾನುಭವಿಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಸಂಖ್ಯೆ ಜೋಡಿಸಲು ತೀರ್ಮಾನಿಸಲಾಗಿದ್ದು, ಇದರಿಂದ ಸರ್ಕಾರಕ್ಕೆ ಸುಮಾರು ₹ 600 ಕೋಟಿ ಉಳಿತಾಯವಾಗಲಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಆಧಾರ್‌ ಸಂಖ್ಯೆಗಳನ್ನು ಬ್ಯಾಂಕ್‌ ಖಾತೆಗಳಿಗೆ ಜೋಡಣೆ ಮಾಡುವ ಕಾರ್ಯವನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ಆ ಬಳಿಕ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ಅಶೋಕ್‌ ತಿಳಿಸಿದರು.

ADVERTISEMENT

ಬೋಗಸ್‌ ಫಲಾನುಭವಿಗಳಿಗೆ ಕಡಿವಾಣ ಹಾಕುವುದರಿಂದ ಉಳಿತಾಯ ಆಗುವ ಹಣವನ್ನು ಬಡ ವರ್ಗದವರಿಗೆ ಸೇರಿದ ಇತರ ಯೋಜನೆಗಳಿಗೆ ಬಳಕೆ ಮಾಡಬಹುದೆಂದು ಅವರು ಹೇಳಿದರು.

ಸರ್ಕಾರವು ಅಸಹಾಯಕ ವೃದ್ಧರಿಗೆ, ನಿರ್ಗತಿಕ ವಿಧವೆಯರಿಗೆ, ಅಂಗವಿಕಲರಿಗೆ, ತೃತೀಯ ಲಿಂಗಿಗಳು, ವಿಚ್ಛೇದಿತ ಮತ್ತು ಅವಿವಾಹಿತ ಮಹಿಳೆಯರಿಗೆ ಮಾಸಾಶನ ನೀಡುತ್ತಿದೆ. ವೃದ್ಧಾಪ್ಯ ವೇತನ, ನಿರ್ಗತಿಕ ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ ಮತ್ತು ಮೈತ್ರಿ ಯೋಜನೆಗಳ ಪಿಂಚಣಿಯ ಮೊತ್ತವನ್ನು 2018 ರಲ್ಲಿ ಹೆಚ್ಚಿಸಲಾಗಿದೆ.

ಈ ಯೋಜನೆಗಳ ಫಲಾನುಭವಿಗಳಲ್ಲಿ ಬಹುತೇಕರು ಆಧಾರ್‌ ಹೊಂದಿರುವ ಸಾಧ್ಯತೆ ಕಡಿಮೆ ಎಂಬ ಪ್ರಶ್ನೆಗೆ, ‘ಸಾಕಷ್ಟು ಜನ ಆಧಾರ್‌ ಹೊಂದಿದ್ದು, ಇಲ್ಲದವರು ಆದಷ್ಟು ಬೇಗ ಮಾಡಿಸಿಕೊಳ್ಳುತ್ತಾರೆ. ಇದಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

ಬಡ ವರ್ಗಕ್ಕೆ ಸೇರಿದ ವ್ಯಕ್ತಿಗಳು ಮೃತಪಟ್ಟಾಗ ಶವ ಸಂಸ್ಕಾರಕ್ಕೆ ಹಣ ನೀಡುವ ಯೋಜನೆ ರಾಜ್ಯ ಸರ್ಕಾರ ಜಾರಿಗೆ ತಂದಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ ಮೃತ ಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಹಣ ನೀಡಿಲ್ಲ. ಇದರಿಂದಾಗಿ ₹72.74 ಕೋಟಿ ಬಳಕೆಯಾಗದೇ ಉಳಿದಿದೆ. ಆರಂಭದಲ್ಲಿ ₹1 ಸಾವಿರ ನೀಡಲಾಗುತ್ತಿತ್ತು, ಬಳಿಕ ₹5 ಸಾವಿರಕ್ಕೆ ಹೆಚ್ಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಆ ಮೊತ್ತ ಹೆಚ್ಚಿಸಲು ಉದ್ದೇಶಿಸಲಾಗಿದೆ. ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಉಳಿಯುವ ಹಣದಲ್ಲಿ ಸ್ವಲ್ಪ ಭಾಗ ಇದಕ್ಕೂ ಬಳಸಲಾಗುವುದು ಎಂದು ಅಶೋಕ್‌ ತಿಳಿಸಿದರು.

ನೆರೆ ಪೀಡಿತ ಪ್ರದೇಶಕ್ಕೆ ₹500 ಕೋಟಿ: ನೆರೆ ಪ್ರದೇಶದಲ್ಲಿ ರಸ್ತೆ, ಸೇತುವೆ ಮತ್ತು ಸರ್ಕಾರಿ ಕಟ್ಟಡಗಳ ದುರಸ್ತಿ ಕಾರ್ಯಕ್ಕೆ ತಕ್ಷಣವೇ ₹500 ಕೋಟಿ ಬಿಡುಗಡೆ ಮಾಡಲಾಗುವುದು ಎಂದರು.

ನೆರೆ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ತಲಾ ₹3 ಕೋಟಿ ಯಿಂದ ₹ 8 ಕೋಟಿಯಷ್ಟು ಹಣವಿದೆ. ಇಷ್ಟು ಹಣ ಸಾಕಾಗುವುದಿಲ್ಲ. ಆದ್ದರಿಂದ ₹500 ಕೋಟಿ ಬಿಡುಗಡೆಗೆ ಆದೇಶ ಹೊರಡಿಸಲಾಗುತ್ತದೆ ಎಂದು ಅವರು ಹೇಳಿದರು.

ಬೆಳಗಾವಿಗೆ ₹200 ಕೋಟಿ, ಬಾಗಲಕೋಟೆ ₹50ಕೋಟಿ, ಹಾವೇರಿ ₹35 ಕೋಟಿ, ಹಾಸನ ₹15 ಕೋಟಿ, ಮೈಸೂರು ₹30 ಕೋಟಿ, ಚಿಕ್ಕಮಗಳೂರು ₹30 ಕೋಟಿ, ಶಿವಮೊಗ್ಗ ₹10 ಕೋಟಿ, ಧಾರವಾಡ ₹40 ಕೋಟಿ ಮತ್ತು ಕೊಡಗು ಜಿಲ್ಲೆಗೆ ₹10 ಕೋಟಿ ಬಿಡುಗಡೆ ಮಾಡಲಾಗಿದೆ.

ತೋಟ ಕಳೆದುಕೊಂಡವರಿಗೆ ಪರ್ಯಾಯ ಜಮೀನು
ಪ್ರವಾಹ ಮತ್ತು ಭೂಕುಸಿತದಿಂದ ತೋಟ ನಾಶವಾಗಿದ್ದರೆ, ತೋಟದ ಮಾಲೀಕರಿಗೆ ಅಷ್ಟೇ ಪ್ರಮಾಣದ ಜಮೀನು ನೀಡಲು ತೀರ್ಮಾನಿಸಲಾಗಿದೆ ಎಂದು ಅಶೋಕ್‌ ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಇದಕ್ಕಾಗಿ 354 ಎಕರೆ ಭೂಮಿ ಗುರುತಿಸಲಾಗಿದ್ದು, ಎಷ್ಟು ಪ್ರಮಾಣದ ಜಮೀನು ಕಳೆದುಕೊಂಡಿದ್ದಾರೋ ಅಷ್ಟೇ ಭೂಮಿ ನೀಡಲಾಗುತ್ತದೆ. ನಾಶವಾದ ತೋಟದ ಭೂಮಿಯನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆಯುತ್ತದೆ. ಇವರಿಗೆ ತೋಟದ ಜತೆ ಮನೆ ಕಟ್ಟಿಕೊಳ್ಳಲೂ ಭೂಮಿ ನೀಡಲಾಗುತ್ತದೆ.

ಈ ವರ್ಷ ಕೊಡಗಿನಲ್ಲಿ ತೋಟ ನಾಶವಾಗಿದ್ದರೆ ಅವರಿಗೂ ಭೂಮಿ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು. ಕೊಡಗಿನಲ್ಲಿ ಭೂಮಿ ಗುರುತಿಸಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಬಾರಿ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಡುವುದಿಲ್ಲ. ಬದಲಿಗೆ ಅವರಿಗೆ ಹಣ ನೀಡಲಾಗುತ್ತದೆ. ಅವರೇ ಕಟ್ಟಿಸಿಕೊಳ್ಳಬೇಕು. ಈ ಹಿಂದೆ ಸರ್ಕಾರ ಕಟ್ಟಿಸಿ ಮನೆ ಕಳಪೆಯಾಗಿತ್ತು ಎಂಬ ದೂರು ಬಂದ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.

ಅಂಕಿ– ಅಂಶ
ಒಟ್ಟು 60 ಲಕ್ಷ:ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳು
₹7,000 ಕೋಟಿ:ಬಳಕೆ ಆಗುತ್ತಿರುವ ಮೊತ್ತ
₹600 ಕೋಟಿ:ಉಳಿತಾಯ ನಿರೀಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.