ADVERTISEMENT

ವಿಜಯೇಂದ್ರ ನನ್ನ ವಿರುದ್ಧ ಮಾತನಾಡಲು ಕೆಲವರನ್ನು ಬಿಟ್ಟಿದ್ದಾನೆ: ಯತ್ನಾಳ ಆರೋಪ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2023, 15:26 IST
Last Updated 16 ಡಿಸೆಂಬರ್ 2023, 15:26 IST
<div class="paragraphs"><p>ಬಸನಗೌಡ ಪಾಟೀಲ ಯತ್ನಾಳ</p></div>

ಬಸನಗೌಡ ಪಾಟೀಲ ಯತ್ನಾಳ

   

ವಿಜಯಪುರ: ‘ನನ್ನ ವಿರುದ್ಧವಾಗಿ ಮಾತನಾಡಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಕೆಲವರನ್ನು ಬಿಟ್ಟಿದ್ದಾನೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ ಮಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ವಿರುದ್ಧ ಕೆಲವು ಹಂದಿ, ಬೀದಿನಾಯಿಗಳು ಬೊಗಳುತ್ತವೆ. ಅದಕ್ಕೆಲ್ಲ ಉತ್ತರ ಕೊಡುವುದಿಲ್ಲ‘ ಎಂದು ಪರೋಕ್ಷವಾಗಿ ಮಾಜಿ ಸಚಿವ ಮುರುಗೇಶ ನಿರಾಣಿ ವಿರುದ್ಧ ಹರಿಹಾಯ್ದರು. 

ADVERTISEMENT

‘ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕನಂತೆ, ಬಿಜೆಪಿ ಅಧ್ಯಕ್ಷನಂತೆ  ನಾನು ಹೆಚ್ಚು ಪ್ರೋ ಆ್ಯಕ್ಟೀವ್ ಆಗಿ ಕೆಲಸ ಮಾಡಿದ್ದೇನೆ. ಉತ್ತರ ಕರ್ನಾಟಕದಲ್ಲೂ ಸಮರ್ಥ ನಾಯಕರಿದ್ದಾರೆ ಎಂಬುದನ್ನು ತೋರಿಸಿದ್ದೇನೆ’ ಎಂದರು.

‘ಬೆಳಗಾವಿಯಲ್ಲಿ ನಡೆದ ಮಹಿಳೆ ಬೆತ್ತಲೆ ಪ್ರಕರಣ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭ್ರಷ್ಟಾಚಾರ ಪ್ರಕರಣ ರಾಜ್ಯ ಸರ್ಕಾರ ಕೈಬಿಟ್ಟಿರುವ ಕುರಿತು ಉಗ್ರ ಹೋರಾಟ ಮಾಡೋದಾಗಿ ಬಿಜೆಪಿಯ ಜೋಡೆತ್ತುಗಳು ಹೇಳಿದ್ದವು. ಆದರೆ, ಉಗ್ರ ಹೋರಾಟ ಮಾಡಿಲಿಲ್ಲ. ಬರೀ ಖಂಡನೆಗೆ, ಟ್ವೀಟ್‌ಗೆ ಸೀಮಿತವಾದವು. ಆದರೆ, ನಾನು ಡಿಕೆಶಿ ವಿಚಾರಕ್ಕೆ ನ್ಯಾಯಾಲಯಕ್ಕೆ ಹೋಗಿದ್ದೇನೆ’ ಎಂದು ಹೇಳಿದರು.

‘ಕಳೆದ 11 ವಿಧಾನಮಂಡಲ ಅಧಿವೇಶನಗಳಲ್ಲಿ ಕೊನೆಗೆ ಒಂದು ದಿನ ಕಾಟಾಚಾರಕ್ಕೆ ಎಂಬಂತೆ ಉತ್ತರ ಕರ್ನಾಟಕ ಬಗ್ಗೆ ಚರ್ಚಿಸಲಾಗುತ್ತಿತ್ತು. ಆದರೆ,  ಈ ಬಾರಿ ಮೊದಲ ದಿನವೇ ನಾನು ಗಟ್ಟಿ ಧ್ವನಿ ಎತ್ತಿದ್ದರಿಂದ ಮೊದಲ ವಾರದಲ್ಲೇ ಸಮಗ್ರವಾಗಿ ಚರ್ಚಿಸಲು ಅವಕಾಶ ದೊರಕಿತು’ ಎಂದು ಯತ್ನಾಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.