ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ರಣದೀಪ್ ಸಿಂಗ್ ಸುರ್ಜೆವಾಲಾ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಚರ್ಚೆ
ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಗುದ್ದಾಟ, ಔತಣಕೂಟದ ರಾಜಕೀಯದ ವಿದ್ಯಮಾನಗಳು ಸೃಷ್ಟಿಸಿರುವ ಗೊಂದಲಗಳ ನಡುವೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ಸೋಮವಾರ ನಡೆದ ಕೆಪಿಸಿಸಿ ಸರ್ವ ಸದಸ್ಯರ ಸಭೆಗೆ ಗೃಹ ಸಚಿವ ಜಿ. ಪರಮೇಶ್ವರ ಮತ್ತು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಗೈರಾದರು. ಆ ಮೂಲಕ, ಪಕ್ಷದೊಳಗೆ ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ
ಬಹಿರಂಗವಾಗಿದೆ.
‘ಗಾಂಧಿ ಭಾರತ’ ಕಾರ್ಯಕ್ರಮದ ಅಂಗವಾಗಿ ಬೆಳಗಾವಿಯಲ್ಲಿ ಇದೇ 21ರಂದು ಎಐಸಿಸಿ ವತಿಯಿಂದ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದ ಪೂರ್ವಭಾವಿ ಸಭೆಯ ನೆಪದಲ್ಲಿ ಕೆಪಿಸಿಸಿಯ ‘ಭಾರತ್ ಜೋಡೊ’ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಪುಟ ಸಹೋದ್ಯೋಗಿಗಳ 20 ತಿಂಗಳ ಕಾರ್ಯವೈಖರಿ ವರದಿಯನ್ನು ಸುರ್ಜೇವಾಲಾಗೆ ಸಲ್ಲಿಸಿದರು.
ಪಕ್ಷದೊಳಗಿನ ‘ಆಂತರಿಕ ಸಂಘರ್ಷ’ ಬೀದಿಗೆ ಬಂದಿದ್ದರೂ ‘ನಾಯಕರ ನಡುವೆ ಯಾವುದೇ ಗೊಂದಲ ಇಲ್ಲ’ ಎನ್ನುವ ಮೂಲಕ ಪರಿಸ್ಥಿತಿ ಹೈಕಮಾಂಡ್ ಹಿಡಿತದಲ್ಲಿದೆ ಎಂದು ಸುರ್ಜೇವಾಲಾ ಘೋಷಿಸಿದರು.
‘ಪಕ್ಷದ ನಾಯಕರು ಶಿಸ್ತು ಪಾಲಿಸದಿದ್ದರೆ ಕಾರ್ಯಕರ್ತರು ಶಿಸ್ತಿನಿಂದ ಇರಲು ಹೇಗೆ ಸಾಧ್ಯ? ನಮ್ಮ ಪಕ್ಷದ ನಾಯಕರ ಪೈಕಿ ಕೆಲವರು ಶಿಸ್ತು ಪಾಲಿಸುತ್ತಿಲ್ಲ. ಯಾವ ನಾಯಕರೂ ಪಕ್ಷವನ್ನು ‘ಬುಲ್ಡೋಜ್’ ಮಾಡಬೇಡಿ. ಪಕ್ಷಕ್ಕಿಂತ ನಾವು ದೊಡ್ಡವರು ಎಂದು ಯಾರೂ ಭಾವಿಸಬೇಡಿ’ ಎಂದು ರಾಜ್ಯ ನಾಯಕರಿಗೆ ಸುರ್ಜೇವಾಲಾ ಚಾಟಿ ಬೀಸಿದರು. ‘ನಾಯಕರ ಭಾವನೆ ಅರ್ಥವಾಗುತ್ತದೆ. ಆದರೆ, ಪಕ್ಷ ತಾಯಿ ಇದ್ದಂತೆ. ಸರ್ಕಾರ ಎನ್ನುವುದು ಮಗು. ಸಚಿವರು, ಶಾಸಕರು, ನಾಯಕರು ಯಾರೂ ಶಿಸ್ತು ಮೀರಬಾರದು. ಕಾರ್ಯಕರ್ತರನ್ನು ಗೌರವದಿಂದ ಕಾಣಬೇಕು’ ಎಂದು ಸಚಿವರಿಗೆ ತಾಕೀತು ಮಾಡಿದರು’ ಎಂದು ಗೊತ್ತಾಗಿದೆ.
‘ವೈಯಕ್ತಿಕ ನೆಲೆಯಲ್ಲಿ ಜಾತಿ ಸಮಾವೇಶಗಳನ್ನು ಮಾಡಲು ಯಾರಿಗೂ ಅವಕಾಶ ಇಲ್ಲ. ಅಂತಹ ಸಮಾವೇಶಗಳನ್ನು ಪಕ್ಷದಿಂದಲೇ ಆಯೋಜಿಸಲಾಗುವುದು. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು. ರಾಜ್ಯದಲ್ಲಿ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗಳು ಕೂಡಾ ಪಕ್ಷದ ತೀರ್ಮಾನ. ಪಕ್ಷದ ತೀರ್ಮಾನಗಳ ವಿರುದ್ಧ ಧ್ವನಿ ಎತ್ತಿದವರ ಮೇಲೆ ಕ್ರಮ ಖಚಿತ’ ಎಂದು ಎಚ್ಚರಿಕೆಯನ್ನೂ ನೀಡಿದರು.
‘ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬಿಜೆಪಿಯವರು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ’ ಎಂದು ಸುರ್ಜೇವಾಲಾ ಸಮರ್ಥನೆ ನೀಡಿದರು’ ಎಂದೂ ತಿಳಿದುಬಂದಿದೆ.
ಗೈರಾದ ಸಚಿವರು:
ಡಿ.ಕೆ. ಶಿವಕುಮಾರ್ ಅವರು ವಿದೇಶ ಪ್ರವಾಸದಲ್ಲಿದ್ದಾಗ ಸಚಿವ ಸತೀಶ ಜಾರಕಿಹೊಳಿ ಜ. 2ರಂದು ಆಯೋಜಿಸಿದ್ದ ಔತಣಕೂಟ ಸಭೆಯಲ್ಲಿ ಮುಖ್ಯಮಂತ್ರಿ, ಕೆಲವು ಸಚಿವರು, ಶಾಸಕರು ಭಾಗವಹಿಸಿದ್ದರು. ಈ ಬೆನ್ನಲ್ಲೆ, ಪರಮೇಶ್ವರ ಅವರು ತಮ್ಮ ಸಮುದಾಯದ (ಎಸ್‌ಸಿ, ಎಸ್‌ಟಿ) ಸಮಸ್ಯೆಗಳ ಕುರಿತು ಚರ್ಚಿಸಲು ಔತಣಕೂಟ ಆಯೋಜಿಸಲು ಮುಂದಾಗಿದ್ದರು. ಈ ಸಭೆಯ ಬಗ್ಗೆ ಡಿ.ಕೆ. ಶಿವಕುಮಾರ್ ನೀಡಿದ ದೂರು, ಪಕ್ಷದೊಳಗೆ ಗುಂಪುಗಾರಿಕೆ ಸಾಧ್ಯತೆಯ ಮುನ್ಸೂಚನೆ ಸಿಗುತ್ತಿದ್ದಂತೆಯೇ ವರಿಷ್ಠರು ಮಧ್ಯಪ್ರವೇಶಿಸಿದ್ದರು. ಇದರಿಂದ ಬೇಸರಗೊಂಡಿದ್ದ ಪರಮೇಶ್ವರ ಮತ್ತು ಕೆ.ಎನ್. ರಾಜಣ್ಣ ಸಭೆಗೆ ಗೈರಾದರು ಎಂದು ಗೊತ್ತಾಗಿದೆ.
ಬೆಳಗಿನ ಸಭೆಗೆ ಗೈರಾಗಿದ್ದ ಜಿ. ಪರಮೇಶ್ವರ ಹಾಗೂ ಕೆ.ಎನ್. ರಾಜಣ್ಣ ಅವರು ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದರು.
ಪಕ್ಷ ಮೊದಲು, ಸರ್ಕಾರ ನಂತರ. ಪಕ್ಷ ಇದ್ದಾಗ ಎಷ್ಚು ಸರ್ಕಾರಗಳನ್ನು ಬೇಕಾದರೂ ರಚಿಸಬಹುದು ಎನ್ನುವ ಅಭಿಪ್ರಾಯವನ್ನು ಪಕ್ಷದ ಸರ್ವ ಸದಸ್ಯರ ಸಭೆಯಲ್ಲಿ ತಿಳಿಸಿದ್ದೇನೆರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ರಾಜ್ಯ ಉಸ್ತುವಾರಿ
ಸಿದ್ದರಾಮಯ್ಯ ‘ತ್ಯಾಗ’ದ ಮಾತು
ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಕಾಂಗ್ರೆಸ್‌ನ ಹಲವು ನಾಯಕರು ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿಯವರು ಅಧಿಕಾರವನ್ನೇ ತ್ಯಾಗ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ಪಕ್ಷಕ್ಕಾಗಿ ತ್ಯಾಗ ಮಾಡಿದ್ದಾರೆ. ನಾವು ಕೂಡ ಕೆಲವೊಮ್ಮೆ ತ್ಯಾಗ ಮಾಡ
ಬೇಕಾಗುತ್ತದೆ’ ಎಂದಿದ್ದಾರೆ.
ಸತೀಶ– ಲಕ್ಷ್ಮೀ ಜಟಾಪಟಿ
ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಮಧ್ಯೆ ಶಾಸಕಾಂಗ ಪಕ್ಷದ ಸಭೆಯಲ್ಲಿ
ಜಟಾಪಟಿ ನಡೆದಿದೆ.
ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ‘ಬೆಳಗಾವಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯನ್ನು ಲಕ್ಷ್ಮೀ ಹೆಬ್ಬಾಳಕರ ಕಟ್ಟಿದ್ದಾರೆ’ ಎಂದು ಹೇಳಿದಾಗ ಸಿಟ್ಟಿಗೆದ್ದು ಮೈಕ್ ಹಿಡಿದುಕೊಂಡ ಸಚಿವ ಸತೀಶ ಜಾರಕಿಹೊಳಿ, ‘ಪದೇ ಪದೇ ಲಕ್ಷ್ಮೀ ಹೆಬ್ಬಾಳಕರ ಕಟ್ಟಿದರು ಎಂದು ಹೇಳಿ ಇತರರನ್ನು ಅವಮಾನಿಸಬೇಡಿ. ಕಚೇರಿ ಕಟ್ಟಲು ನಾನೂ ₹3 ಕೋಟಿ ಕೊಟ್ಟಿದ್ದೇನೆ. ರಮೇಶ ಜಾರಕಿಹೊಳಿ ಜಾಗ ಕೊಟ್ಟಿದ್ದರು’ ಎಂದು ತಿರುಗೇಟು ನೀಡಿದರು ಎಂದು ಮೂಲಗಳು ಹೇಳಿವೆ.
ಈ ವೇಳೆ ಮಧ್ಯಪ್ರವೇಶಿಸಿದ ಲಕ್ಷ್ಮೀ ಹೆಬ್ಬಾಳಕರ, ‘ನಾನು ಅಧ್ಯಕ್ಷೆಯಾದ ನಂತರ 10 ವರ್ಷದಿಂದ ಬಾಕಿ ಇದ್ದ ವಿದ್ಯುತ್ ಬಿಲ್ ಪಾವತಿಸಿದ್ದೇನೆ’ ಎಂದರು. ಮಾತಿನ ಜಟಾಪಟಿ ನಡೆಯುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಇಬ್ಬರನ್ನೂ ಸಮಾಧಾನಪಡಿಸಿದರು ಎಂದೂ ಮೂಲಗಳು ಹೇಳಿವೆ.
ಅಧಿಕಾರ ಹಂಚಿಕೆ ಚರ್ಚೆ ಆಗಿಲ್ಲ: ಪರಮೇಶ್ವರ
ತುಮಕೂರು: ‘ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕುರಿತು ಯಾವುದೇ ಚರ್ಚೆ ಆಗಿಲ್ಲ. ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ಯಾವ ಒಪ್ಪಂದವೂ ಇಲ್ಲ: ಬೆಂಗಳೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಆರ್.ವಿ. ದೇಶಪಾಂಡೆ, ‘ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಯಾವ ಒಪ್ಪಂದವೂ ಇಲ್ಲ. ನಮ್ಮಲ್ಲಿ ಹೈಕಮಾಂಡ್ ಇದೆ. ಇಬ್ಬರೂ ಪರಸ್ಪರ ವಿಶ್ವಾಸದಲ್ಲೇ ಇದ್ದಾರೆ’ ಎಂದರು.
ಸುರ್ಜೇವಾಲಾ ಸರಿಯಾಗಿ ಹೇಳಿದ್ದಾರೆ: ಜಾರಕಿಹೊಳಿ
‘ಸಚಿವರು ಮತ್ತು ಕಾರ್ಯಕರ್ತರ ಸಮಕ್ಷಮದಲ್ಲಿ ಜವಾಬ್ದಾರಿ ಮತ್ತು ಶಿಸ್ತಿನ ಬಗ್ಗೆ ಸುರ್ಜೇವಾಲಾ ಮಾತನಾಡಿದ್ದಾರೆ. ಮೊದಲು ಪಕ್ಷ ಎಂದು ನಾವೂ ಹೇಳಿದ್ದೇವೆ. ಆ ನಂತರ ಉಳಿದ ಎಲ್ಲ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಹಾಗೆಂದು, ದಲಿತರ ಸಭೆಯ ಬಗ್ಗೆ ಸುರ್ಜೇವಾಲಾ ಹೇಳಿಲ್ಲ. ಸಚಿವರ ಜವಾಬ್ದಾರಿಗಳು, ಸಾಧನೆಗಳ ಕುರಿತು ಅವರು ಹೇಳಿದ್ದಾರೆ. ಎರಡು ತಿಂಗಳ ಒಳಗೆ ಸಚಿವರಿಗೆ ಜವಾಬ್ದಾರಿ ನೀಡುತ್ತೇವೆ ಎಂದು ಹೇಳಿದ್ದಾರೆ. ಕಾರ್ಯದಕ್ಷತೆ ನೋಡುತ್ತೇವೆ ಎಂದು ಹೇಳಿದ್ದಲ್ಲ’ ಎಂದರು.
ಹೈಕಮಾಂಡ್ ತೀರ್ಮಾನವೇ ಅಂತಿಮ: ಸಿಎಂ
‘ಯಾವುದೇ ವಿಷಯದಲ್ಲಿ ಹೈಕಮಾಂಡ್ ತೀರ್ಮಾನ ಏನೇ ಇದ್ದರೂ, ನಾನೂ ಮತ್ತು ಡಿ.ಕೆ. ಶಿವಕುಮಾರ್ ಒಪ್ಪಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ರ‍್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಸೋಮವಾರ ರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ವಿಷಯವನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು. ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು. ಮಾಧ್ಯಮಗಳಿಗೆ ಹೇಳಿಕೆ ನೀಡಿದರೆ ಪಕ್ಷ ಕ್ರಮ ತೆಗೆದುಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಪಕ್ಷಾತೀತವಾಗಿ ಎಲ್ಲ ಶಾಸಕರಿಗೆ ತಲಾ ₹10 ಕೋಟಿ ಅನುದಾನ ಕೊಡಲಾಗುವುದು ಎಂದೂ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ‘ಬೆಳಗಾವಿಯಲ್ಲಿ ಇದೇ 21ರಂದು ನಡೆಯಲಿರುವ ಸಮಾವೇಶದ ಕುರಿತು ಸಭೆಗೆ ಮಾಹಿತಿ ನೀಡಿದ ರಣದೀಪ್ ಸಿಂಗ್ ಸುರ್ಜೇವಾಲಾ, ರಾಜ್ಯದ ವಿವಿಧ ಕಡೆ ಪಕ್ಷದ 100 ಕಚೇರಿಗಳನ್ನು ನಿರ್ಮಿಸಲು ಕೆಲವು ಸಚಿವರು ನಿರಾಸಕ್ತಿ ತೋರುತ್ತಿದ್ದಾರೆ. ಈ ನಡೆಯನ್ನು ಸಹಿಸುವುದಿಲ್ಲ. ಅಲ್ಲದೆ, ಏನೇ ವಿಚಾರಗಳಿದ್ದರೂ ಪಕ್ಷದ ವೇದಿಕೆಯಲ್ಲೇ ಚರ್ಚಿಸುವಂತೆ ಸೂಚಿಸಿದರು’ ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.