ಬೆಂಗಳೂರು: ಖಾಸಗಿ ಒಡೆತನದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು ರೋಬೊಟಿಕ್ ಸರ್ಜರಿ ಮೂಲಕ ದಾಪುಗಾಲಿಡುತ್ತಿರುವ ಈ ಸಂದರ್ಭದಲ್ಲಿ ಸರ್ಕಾರಿ ವಲಯದ ಪ್ರಮುಖ ಆಸ್ಪತ್ರೆಗಳು ಅವುಗಳಿಗೆ ಪೈಪೋಟಿ ನೀಡಲು ಸಜ್ಜಾಗಿವೆ.
ಖಾಸಗಿ ಒಡೆತನದ ಆಸ್ಪತ್ರೆಗಳು ಉಳ್ಳವರ ಅಗತ್ಯವನ್ನು ಪೂರೈಸಿದರೆ, ಸರ್ಕಾರಿ ಆಸ್ಪತ್ರೆಗಳು ಬಡ ಮತ್ತು ಮಧ್ಯಮ ವರ್ಗದವರ ಅಗತ್ಯ ಪೂರೈಸಲಿವೆ. ಹೀಗಾಗಿ ರಾಜ್ಯದ ಪ್ರಮುಖ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ರೋಗಿಗಳ ಶಸ್ತ್ರಚಿಕಿತ್ಸೆಗಾಗಿ ರೋಬೊಗಳನ್ನು ಖರೀದಿಸಲು ಸರ್ಕಾರ ಮುಂದಾಗಿದೆ.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಈಗಾಗಲೇ ರೋಬೊ ಖರೀದಿಸಲಾಗಿದೆ. ನೆಪ್ರೊ ಯೂರಾಲಜಿ ಸಂಸ್ಥೆ, ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೊಎಂಟ್ರಾಲಜಿ ಸೈನ್ಸಸ್ ಅಂಡ್ ಟ್ರಾನ್ಸ್‌ಪ್ಲಾಂಟ್ ಸಂಸ್ಥೆ ಮತ್ತು ಜಯದೇವ ಹೃದ್ರೋಗ ಸಂಸ್ಥೆಗಳಿಗೂ ರೋಬೊ ಖರೀದಿಸಲು ಸರ್ಕಾರ ನಿರ್ಧರಿಸಿದೆ.
‘ನೆಪ್ರೊ ಯೂರಾಲಜಿ ಸಂಸ್ಥೆಗೆ ರೋಬೊ ಖರೀದಿಗೆ ಟೆಂಡರ್ ಕರೆಯಲಾಗಿದ್ದು, ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೊಎಂಟ್ರಾಲಜಿ ಸೈನ್ಸಸ್ ಆ್ಯಂಡ್ ಟ್ರಾನ್ಸ್‌ಪ್ಲಾಂಟ್ ಸಂಸ್ಥೆಗೆ ರೋಬೊ ಖರೀದಿಗೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಜಯದೇವ ಹೃದ್ರೋಗ ಸಂಸ್ಥೆಗೂ ಖರೀದಿಸಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
ರೋಬೊವನ್ನು ಸ್ರ್ತೀರೋಗಶಾಸ್ತ್ರ, ಮೂತ್ರರೋಗ ಶಾಸ್ತ್ರ, ಜನರಲ್ ಸರ್ಜರಿ, ಮೂಳೆ ಚಿಕಿತ್ಸೆ, ಹೃದಯ, ಯಕೃತ್, ನರಶಸ್ತ್ರ ಚಿಕಿತ್ಸೆಯಂತಹ ಹಲವು ವಿಶೇಷ ಮತ್ತು ಸಂಕೀರ್ಣ ಶಸ್ತ್ರಚಿಕಿತ್ಸೆಗಾಗಿ ಬಳಸಲಾಗುತ್ತದೆ. ಇದರಿಂದ ಸಂಕೀರ್ಣ ಕಾರ್ಯವಿಧಾನಗಳನ್ನು ಹೆಚ್ಚು ನಿಖರವಾಗಿ ಮತ್ತು ನಿಯಂತ್ರಿತವಾಗಿ ನಡೆಸಬಹುದಾಗಿದೆ. ಉದಾಹರಣೆಗೆ ಮಿದುಳು, ಎದೆ, ಹೊಟ್ಟೆ ಮತ್ತು ಅಸ್ಥಿ ಕುಹರದ ಕ್ಯಾನ್ಸರ್‌ಗಳಿಗೆ ಚಿಕಿತ್ಸೆಯನ್ನು ನಿಖರವಾಗಿ ನೀಡಬಹುದು. ಬೆನ್ನು ಹುರಿ, ಗರ್ಭಕಂಠ ಶಸ್ತ್ರಚಿಕಿತ್ಸೆಯಂತಹ ಅತಿ ನಾಜೂಕಿನ ಶಸ್ತ್ರ ಚಿಕಿತ್ಸೆಗಳನ್ನು ರೋಬೊ ಮೂಲಕ ಮಾಡಬಹುದು ಎಂದು ತಜ್ಞರು ವಿವರಿಸಿದ್ದಾರೆ.
ರೋಬೊ ಮೂಲಕ ನಡೆಸುವ ಸರ್ಜರಿಯಿಂದ ರಕ್ತ ಸ್ರಾವದ ಪ್ರಮಾಣ ಕಡಿಮೆ ಇರುತ್ತದೆ. ನೋವು ಕೂಡ ಅತ್ಯಲ್ಪವಾಗಿದ್ದು, ಬೇಗನೆ ಗುಣಮುಖರಾಗಬಹುದು. ಆಸ್ಪತ್ರೆಯಲ್ಲಿ ಇರಬೇಕಾದ ಅವಧಿಯೂ ಅಲ್ಪಕಾಲದ್ದು. ರೋಬೊ ಬಳಸಿ ಸರ್ಜರಿ ಮಾಡುವಾಗ ಶಸ್ತ್ರಚಿಕಿತ್ಸಕರು ಹೆಚ್ಚಿನ ವ್ಯಾಪ್ತಿಯ ಚಲನೆ ಮತ್ತು ಸ್ಥಿರತೆ ಸಾಧಿಸಬಹುದು. ಕೈನಡುಕದಿಂದ ಆಗುವ ಲೋಪಗಳಿಗೆ ಶಾಶ್ವತ ಮುಕ್ತಿ ಸಿಗಲಿದೆ. ರೋಬೊ ಹೈ– ಡೆಫಿನಿಷನ್ ಮತ್ತು ಹೆಚ್ಚು ಸ್ಪಷ್ಟವಾಗಿ ದೃಶ್ಯವನ್ನು ನೋಡಬಹುದಾದ ತ್ರಿಡಿ ಕ್ಯಾಮೆರಾಗಳನ್ನು ಹೊಂದಿರುವುದರಿಂದ ಶಸ್ತ್ರ ಚಿಕಿತ್ಸೆ ನಡೆಸಬೇಕಾದ ಜಾಗದ ನೋಟ ವಿಸ್ತೃತವಾಗಿರುತ್ತದೆ. ಎಲ್ಲವೂ ಸ್ವಯಂಚಾಲಿತವಾಗಿ ಆಗುವುದರಿಂದ ಮಾನವ ಹಸ್ತಕ್ಷೇಪ ತೀರಾ ಕಡಿಮೆ ಎಂಬುದು ತಜ್ಞರ ವಿವರಣೆ.
ಅಲ್ಲದೇ, ರೋಬೊ ಬಳಸಿ ದೇಹದ ಭಾಗವನ್ನು ಛೇದನ ಮಾಡಿದ ಬಳಿಕ ಉಳಿಯುವ ಗಾಯದ ಗುರುತು ಗೌಣವಾಗಿರುತ್ತದೆ. ತೆರೆದ ಶಸ್ತ್ರಚಿಕಿತ್ಸೆಗೆ ಹೋಲಿಸಿದಾಗ ಸೋಂಕು ತಗಲುವ ಅಪಾಯವೂ ಕಡಿಮೆ ಎನ್ನುತ್ತಾರೆ ಅವರು.
ಸಂಸ್ಥೆಗೆ ಅತ್ಯಾಧುನಿಕ ತಂತ್ರಜ್ಞಾನದ ರೋಬೊ ಸಿಗುವುದರಿಂದ ಬಡರೋಗಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಮುಂದಿದ ವರ್ಷಗಳಲ್ಲಿ ಇದರ ಮೂಲಕ ಯಕೃತ್ ಕಸಿ ಮಾಡಬಹುದುಡಾ.ನಾಗೇಶ್ ಎಸ್.ಎನ್ ನಿರ್ದೇಶಕ ಐಜಿಒಟಿ
ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಅತ್ಯಾಧುನಿಕ ತಂತ್ರಜ್ಞಾನ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲೂ ಸಿಗಬೇಕು. ಇದರ ಪ್ರಯೋಜನ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗಬೇಕುಡಾ.ಶರಣಪ್ರಕಾಶ್ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ
ಗ್ಯಾಸ್ಟ್ರೊಎಂಟ್ರಾಲಜಿ ಸಂಸ್ಥೆಗೆ ₹20 ಕೋಟಿ
ರೋಬೊ ಯಕೃತ್ ಕರುಳು ಮತ್ತು ಉದರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದೇಶದ ಮೊದಲ ಗ್ಯಾಸ್ಟ್ರೊ ಎಂಟ್ರಾಲಜಿ ಆಸ್ಪತ್ರೆ ಬೆಂಗಳೂರಿನ ‘ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೊಎಂಟ್ರಾಲಜಿ ಸೈನ್ಸಸ್ ಅಂಡ್ ಟ್ರಾನ್ಸ್‌ಪ್ಲಾಂಟ್ ಸಂಸ್ಥೆ’ಗೆ (ಐಜಿಒಟಿ) ₹20 ಕೋಟಿ ವೆಚ್ಚದಲ್ಲಿ ರೋಬೊ ಖರೀದಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಇದಕ್ಕೆ ರಾಜ್ಯ ಸರ್ಕಾರ ₹10 ಕೋಟಿ ನೀಡಲಿದ್ದು ಐಜಿಒಟಿ ಆಂತರಿಕ ಸಂಪನ್ಮೂಲದಿಂದ ₹10 ಕೋಟಿ ಭರಿಸಬೇಕಾಗಿದೆ. ಸಂಸ್ಥೆಯ ನಿರ್ದೇಶಕ ಡಾ.ನಾಗೇಶ್ ಎನ್.ಎಸ್ ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿ ರೋಬೊ ಯಕೃತ್ ಮತ್ತು ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಅನುಕೂಲವಾಗುತ್ತದೆ. ಈ ಆಸ್ಪತ್ರೆ ಆರಂಭವಾಗಿ 4 ವರ್ಷ ಆಗಿದ್ದು ಸುಮಾರು 2 ಲಕ್ಷ ರೋಗಿಗಳು ಬಂದು ಹೋಗಿದ್ದಾರೆ. ಗ್ಯಾಸ್ಟ್ರೊಎಂಟ್ರಾಲಜಿ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ 2000 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮತ್ತು ಕಿಮೋಥೆರಪಿ ನೀಡಿದ್ದೇವೆ’ ಎಂದು ಅವರು ಹೇಳಿದರು.
ಸರ್ಕಾರದ ಷರತ್ತುಗಳು:
* ಸಂಸ್ಥೆಯ ಎಲ್ಲ ವೈದ್ಯರಿಗೂ ಈ ಉಪಕರಣದ ಬಗ್ಗೆ ತರಬೇತಿಯನ್ನು ಕಡ್ಡಾಯವಾಗಿ ನೀಡಬೇಕು.
*ರಾಜ್ಯ ಮತ್ತು ದೇಶದ ಇತರೆ ವೈದ್ಯರೂ ಕೂಡ ತರಬೇತಿ ಪಡೆಯುವಂತೆ ಮಾದರಿ ವ್ಯವಸ್ಥೆ ಅಳವಡಿಸಿಕೊಳ್ಳಬೇಕು
* ರೋಬೊ ಬಳಸಿ ಮಾಡುವ ಶಸ್ತ್ರಚಿಕಿತ್ಸೆಗಳಿಗೆ ಬಳಕೆ ಶುಲ್ಕವನ್ನು ಸಾಮಾನ್ಯ ಶಸ್ತ್ರಚಿಕಿತ್ಸೆಗಿಂತ ಹೆಚ್ಚಾಗಿ ನಿಗದಿಗೊಳಿಸಬೇಕು
*ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಜತೆಗೆ ಖಾಸಗಿ ಆರೋಗ್ಯ ವಿಮೆಗಳನ್ನೂ ಅಳವಡಿಸಿಕೊಳ್ಳಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.