ADVERTISEMENT

ತ್ವರಿತ ಸರ್ವೆ ಕಾರ್ಯಕ್ಕೆ ‘ರೋವರ್‌’ ಬಲ: ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 15:41 IST
Last Updated 13 ಮಾರ್ಚ್ 2024, 15:41 IST
<div class="paragraphs"><p>ಸಚಿವ ಕೃಷ್ಣ ಬೈರೇಗೌಡ</p></div>

ಸಚಿವ ಕೃಷ್ಣ ಬೈರೇಗೌಡ

   

ಬೆಂಗಳೂರು: ಸರ್ವೆ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಪ್ರತಿ ತಾಲ್ಲೂಕಿಗೂ ತಲಾ ಮೂರು ರೋವರ್‌ ಯಂತ್ರಗಳನ್ನು ನೀಡಲಾಗುತ್ತಿದ್ದು, ಈಗಾಗಲೇ ಟೆಂಡರ್‌ ಕರೆಯಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ವಿಧಾನಸೌಧದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೊಸದಾಗಿ ಆಯ್ಕೆಯಾದ ಒಂದು ಸಾವಿರ ಪರವಾನಗಿ ಭೂಮಾಪಕರಿಗೆ ಕಾರ್ಯನಿರ್ವಹಣಾ ಅನುಮತಿ ಪತ್ರ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಿ ಅವರು ಮಾತನಾಡಿದರು.

ADVERTISEMENT

ಉಪಗ್ರಹದ ಸಹಾಯದಿಂದ ಭೂ ದತ್ತಾಂಶ ಬಳಸಿಕೊಂಡು ಅಳತೆ ಮಾಡಬೇಕಿರುವ ನಿರ್ದಿಷ್ಟ ಸರ್ವೆ ನಂಬರ್‌ನ ನಕಾಶೆಯನ್ನು ಖಚಿತವಾಗಿ ನಿಗದಿಪಡಿಸುವಲ್ಲಿ ಡಿಜಿಟಲ್‌ ರೋವರ್‌ಗಳು ಸಹಾಯ ಮಾಡುತ್ತವೆ. ಕೆಲಸದ ವೇಗ ಮೂರರಿಂದ ಐದು ಪಟ್ಟು ಹೆಚ್ಚಾಗುತ್ತದೆ. ಒಬ್ಬ ಭೂಮಾಪಕ ಒಂದೇ ದಿನಕ್ಕೆ ಐದಕ್ಕೂ ಹೆಚ್ಚು ಸರ್ವೆ ಕಾರ್ಯ ನಡೆಸಬಹುದು ಎಂದರು.

ಕೆಲ ಸರ್ವೇ ನಂಬರ್‌ಗಳಲ್ಲಿ ಕಂದಾಯ, ಅರಣ್ಯ ಇಲಾಖೆ ಹಾಗೂ ರೈತರ ಹೆಸರು ಇರುತ್ತವೆ. ಜಂಟಿ ಸರ್ವೆ ನಡೆಸಿ ಎಲ್ಲರಿಗೂ ನೂತನ ಹಿಸ್ಸಾ ಸಂಖ್ಯೆ ನೀಡಬೇಕಿದೆ. ಅದಕ್ಕಾಗಿ ಸರ್ವೆ ಕಾರ್ಯ ಚುರುಕುಗೊಳ್ಳಬೇಕಿದೆ. ಮುಂದಿನ ಎರಡು ತಿಂಗಳಲ್ಲಿ ಎಲ್ಲಾ ಆಕಾರ್‌ ಬಂದ್‌ಗಳನ್ನೂ ಡಿಜಿಟಲೀಕರಣಗೊಳಿಸಲಾಗುವುದು. ಪಹಣಿ ಕಾಲಂ 3-9 ವಿಸ್ತೀರ್ಣ ಹೊಂದಾಣಿಕೆ ಬಗೆಹರಿಸಿ, ಹೊಸ ಸರ್ವೆ ಸಂಖ್ಯೆ ನೀಡಲಾಗುವುದು ಎಂದು ಹೇಳಿದರು.

ಈಗಾಗಲೇ 364 ಸರ್ಕಾರಿ ಭೂ ಮಾಪಕರು ಹಾಗೂ 27 ಸಹಾಯಕ ಭೂಮಾಪಕ ಅಧಿಕಾರಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಸರ್ವೆ ಇಲಾಖೆಯಲ್ಲಿ ಖಾಲಿ ಇರುವ ಎಲ್ಲ 541 ಹುದ್ದೆಗಳ ನೇರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲ ಪ್ರಕ್ರಿಯೆ ಪೂರ್ಣಗೊಂಡರೆ ಸರ್ವೆ ಇಲಾಖೆಗೆ ಹೆಚ್ಚುವರಿ 2,500 ನೌಕರರು ದೊರೆಯುತ್ತಾರೆ ಎಂದು ಹೇಳಿದರು.

ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಸಹ ಇ-ಆಫೀಸ್‌ ಬಳಕೆ ಮಾಡಬೇಕು. ಜನರಿಗೆ ಕಾಗದರಹಿತ ಪಾರದರ್ಶಕ ಸೇವೆ ನೀಡಬೇಕು ಎಂದು ಸೂಚಿಸಿದರು.

ಶಾಸಕ ರಿಜ್ವಾನ್ ಅರ್ಷದ್‌, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಆಯುಕ್ತ ಸುನಿಲ್‌ ಕುಮಾರ್‌, ಸರ್ವೆ ಇಲಾಖೆಯ ಆಯುಕ್ತ ಮಂಜುನಾಥ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.