ADVERTISEMENT

ಆರ್‌.ಆರ್‌.ನಗರದಲ್ಲಿ ನಕಲಿ ಮತದಾರರ ನೋಂದಣಿ: ಮುನಿರತ್ನ ವಿರುದ್ಧ ಡಿಕೆಶಿ ಆರೋಪ

ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 17:01 IST
Last Updated 2 ನವೆಂಬರ್ 2020, 17:01 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ, ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡು 42,000ಕ್ಕೂ ಹೆಚ್ಚು ನಕಲಿ ಮತದಾರರ ಹೆಸರನ್ನು ನೋಂದಣಿ ಮಾಡಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಂದು ತಿಂಗಳಿನಿಂದ ನಮ್ಮ ಪಕ್ಷದ ಕಾರ್ಯಕರ್ತರು ಸಮೀಕ್ಷೆ ನಡೆಸಿದ್ದಾರೆ. ಖಾಲಿ ನಿವೇ ಶನಗಳ ವಿಳಾಸದಲ್ಲಿ ಹೆಚ್ಚಿನ ನಕಲಿ ಮತದಾರರನ್ನು ನೋಂದಣಿ ಮಾಡಿಸಲಾಗಿದೆ. ಕೆಲವು ಕಡೆಗಳಲ್ಲಿ ಕುಟುಂಬದವರಿಗೆ ತಿಳಿಯದಂತೆ ಹೊರ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಂದ ಬಂದವರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಿದ್ದಾರೆ’ ಎಂದರು.

ಕೊಟ್ಟಿಗೆಪಾಳ್ಯ ಧೋಬಿ ಘಾಟ್‌ನಲ್ಲಿ ಮನೆ ಸಂಖ್ಯೆ 130ರ ಒಂದೇ ವಿಳಾಸದಲ್ಲಿ 56 ಮತದಾರರನ್ನು ನೋಂದಣಿ ಮಾಡಲಾಗಿದೆ. ರಾಜರಾಜೇಶ್ವರಿ ವಾರ್ಡ್‌ನಲ್ಲಿ ಖಾಲಿ ನಿವೇಶನಗಳ ವಿಳಾಸದಲ್ಲಿ ನೋಂದಣಿ ಮಾಡಲಾಗಿದೆ. ನಾರಾಯಣಲಾಲ್‌ ಬಡಾವಣೆ, ಬಾಲ್ಡ್‌ವಿನ್ ಶಾಲೆ ಸೇರಿದಂತೆ ಹಲವು ಕಡೆಗಳಲ್ಲಿ ಅಕ್ರಮವಾಗಿ ನಕಲಿ ಮತದಾರರ ನೋಂದಣಿ ಮಾಡಿ ರುವುದು ಪತ್ತೆಯಾಗಿದೆ. ಈ ರೀತಿ ಅಕ್ರಮ ನೋಂದಣಿ ಆಗಿರುವ ಎಲ್ಲ ವಿಳಾಸಗಳನ್ನು ಪತ್ತೆಮಾಡಿ, ವಿಡಿಯೊ ಚಿತ್ರೀಕರಣ ಮಾಡಿಸಲಾಗಿದೆ ಎಂದು ಮತದಾರರ ಪಟ್ಟಿಯ ಪುಟಗಳನ್ನು
ಪ್ರದರ್ಶಿಸಿದರು.

ADVERTISEMENT

ಬಂಧನಕ್ಕೆ ಆಗ್ರಹ: ಅಕ್ರಮ ನೋಂದಣಿ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು. ನಕಲಿ ಮತದಾರರ ನೋಂದಣಿಯಲ್ಲಿ ಬಿಜೆಪಿ ಅಭ್ಯರ್ಥಿ, ಮತಗಟ್ಟೆ ಹಂತದ ಅಧಿಕಾರಿಗಳು ಮತ್ತು ಹಿರಿಯ ಅಧಿ ಕಾರಿಗಳು ಶಾಮೀಲಾಗಿದ್ದಾರೆ. ಎಲ್ಲರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಬಂಧಿಸಬೇಕು. ನಕಲಿ ಮತದಾರರು ಮತ ಚಲಾಯಿಸದಂತೆ ತಡೆಯಬೇಕು ಎಂದು ಶಿವಕುಮಾರ್‌ ಆಗ್ರಹಿಸಿದರು.

ಕ್ಷೇತ್ರದ ಮತದಾರರಾಗಿರುವ ಜನರು ಎಚ್ಚರಿಕೆ ವಹಿಸಬೇಕು. ತಮ್ಮ ಕುಟುಂಬದ ವಿಳಾಸದಲ್ಲಿ ಆಗಿರುವ ನಕಲಿ ಮತದಾರರ ನೋಂದಣಿ ಕುರಿತು ವಿಚಾರಿಸಿ, ಆಕ್ಷೇಪ ದಾಖಲಿಸಬೇಕು. ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು ಕಾಂಗ್ರೆಸ್‌ ಕಾರ್ಯಕರ್ತರಿಗೆ ದೂರವಾಣಿ ಕರೆಮಾಡಿ ಬಿಜೆಪಿ ಪರ ಕೆಲಸ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಅವರ ವಿರುದ್ಧವೂ ದೂರು ನೀಡಲಾಗುವುದು ಎಂದರು.

ಅನರ್ಹಗೊಳಿಸಲು ಒತ್ತಾಯ: ಕ್ಷೇತ್ರದಲ್ಲಿ 34,000 ಮನೆಗಳಿಗೆ ಉಚಿತವಾಗಿ ಸೆಟ್‌ ಟಾಪ್‌ ಬಾಕ್ಸ್‌ ವಿತರಿಸಿರುವುದಾಗಿ ಮುನಿರತ್ನ ಸ್ವತಃ ಒಪ್ಪಿಕೊಂಡಿ
ದ್ದಾರೆ. ಒಟ್ಟು ₹ 3.40 ಕೋಟಿ ಮೌಲ್ಯದ ಸೆಟ್‌ ಟಾಪ್‌ ಬಾಕ್ಸ್‌ ಹಂಚಿದ್ದಾರೆ. ಈ ಬಾಕ್ಸ್‌ಗಳ ಮುಖಾಂತರ ಡಿಜಿಟಲ್‌ ಜಾಹೀರಾತು ಪ್ರದರ್ಶಿಸಲಾಗು
ತ್ತಿದೆ. ಇದೆಲ್ಲವನ್ನೂ ಮುನಿರತ್ನ ಅವರ ಚುನಾವಣಾ ವೆಚ್ಚವಾಗಿ ಪರಿಗಣಿಸ ಬೇಕು. ಚುನಾವಣಾ ಆಯೋಗ ತಕ್ಷಣವೇ ಅವರನ್ನು ಚುನಾವಣೆಯಿಂದ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರಕರಣ ದಾಖಲಿಸಲಿ: ‘ಮತದಾರರಿಗೆ ಆಮಿಷ ಒಡ್ಡಿರುವುದು, ನಕಲಿ ಮತದಾರರ ನೋಂದಣಿಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪ್ರಜಾಪ್ರತಿ
ನಿಧಿ ಕಾಯ್ದೆಯಡಿ ಮುನಿರತ್ನ ವಿರುದ್ಧ ಚುನಾವಣಾ ಆಯೋಗ ಪ್ರಕರಣ ದಾಖಲಿಸಬೇಕು. ಉನ್ನತಮಟ್ಟದ ತನಿಖೆಗೆ ಆದೇಶಿಸಬೇಕು’ ಎಂದು ಶಿವಕುಮಾರ್ ಒತ್ತಾಯಿಸಿದರು.

ಸಿಬಿಐ ತನಿಖೆಗೆ ಆಗ್ರಹ

‘ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ₹ 78 ಕೋಟಿ ಆಸ್ತಿ ಹೊಂದಿರುವುದಾಗಿ ಮುನಿರತ್ನ ಪ್ರಮಾಣಪತ್ರ ಸಲ್ಲಿಸಿದ್ದರು. ಒಂದೇ ವರ್ಷದ ಅವಧಿಯಲ್ಲಿ ₹ 40 ಕೋಟಿಯಷ್ಟು ಆಸ್ತಿ ಸಂಪಾದಿಸಿರುವ ಮಾಹಿತಿ ಈಗ ಸಲ್ಲಿಸಿರುವ ಪ್ರಮಾಣಪತ್ರದಲ್ಲಿದೆ. ನನ್ನ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮುನಿರತ್ನ ಆಸ್ತಿಯ ಬಗ್ಗೆಯೂ ಸಿಬಿಐ ತನಿಖೆಗೆ ಆದೇಶಿಸಬೇಕು’ ಎಂದು ಡಿ.ಕೆ. ಶಿವಕುಮಾರ್‌ ಆಗ್ರಹಿಸಿದರು.

ಶಿರಾ, ಆರ್‌.ಆರ್‌.ನಗರ: ಸಾರ್ವತ್ರಿಕ ರಜೆ

ಶಿರಾ ಮತ್ತು ಆರ್‌.ಆರ್‌.ನಗರ ವಿಧಾನಸಭೆ ಉಪಚುನಾವಣೆ ಕಾರಣ ಈ ಕ್ಷೇತ್ರಗಳ ವ್ಯಾಪ್ತಿಯ ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ– ಕಾಲೇಜುಗಳು, ಸರ್ಕಾರಿ ಮತ್ತು ಖಾಸಗಿ ಉದ್ಯಮಗಳಿಗೆ ಮಂಗಳವಾರ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

ಕ್ಷೇತ್ರಗಳ ವ್ಯಾಪ್ತಿಯ ಹೊರಗಡೆ ಕೆಲಸ ನಿರ್ವಹಿಸುತ್ತಿದ್ದು, ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ನೋಂದಾಯಿತ ಮತದಾರರಾಗಿದ್ದರೆ ಅಂಥ ವರಿಗೆ ಮತದಾನಕ್ಕೆ ವೇತನ ಸಹಿತ ರಜೆ ನೀಡಬೇಕು. ಈ ಎರಡೂ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಎಲ್ಲ ಕೈಗಾರಿಕೆ, ಸಂಸ್ಥೆಗಳು ಕಾಯಂ, ದಿನಗೂಲಿ ನೌಕರರಿಗೆ ಮತದಾನಕ್ಕೆ ಅವಕಾಶ ನೀಡಬೇಕು ಎಂದು ಸರ್ಕಾರ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.