ADVERTISEMENT

RR ನಗರದಲ್ಲಿ ಅವ್ಯವಹಾರ: ‘ಅಕ್ರಮ’ಗಳೆಲ್ಲ ಸಕ್ರಮವೆಂದ ಕೆಆರ್‌ಐಡಿಎಲ್‌!

ಆರ್‌.ಆರ್‌. ನಗರದಲ್ಲಿ ₹ 118.26 ಕೋಟಿ ಅಕ್ರಮ

ರಾಜೇಶ್ ರೈ ಚಟ್ಲ
Published 12 ಫೆಬ್ರುವರಿ 2022, 20:50 IST
Last Updated 12 ಫೆಬ್ರುವರಿ 2022, 20:50 IST
   

ಬೆಂಗಳೂರು: ರಾಜರಾಜೇಶ್ವರಿನಗರ (ಆರ್‌.ಆರ್‌. ನಗರ) ವಿಧಾನಸಭಾ ಕ್ಷೇತ್ರದಲ್ಲಿ ಅನುಷ್ಠಾನಗೊಳ್ಳದ ಕಾಮಗಾರಿಗೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ಬಿಬಿಎಂಪಿ ₹ 118.26 ಕೋಟಿ ಬಿಡುಗಡೆ ಮಾಡಿ ಅಕ್ರಮ ಎಸಗಿದ ಪ್ರಕರಣವನ್ನು ಲೋಕಾಯುಕ್ತ ತಾಂತ್ರಿಕ ಲೆಕ್ಕಪರಿಶೋಧನಾ ಕೋಶ ಬಿಚ್ಚಿಟ್ಟಿದ್ದರೂ, ‘ಯಾವುದೇ ಅಕ್ರಮ ನಡೆದಿಲ್ಲ. ಹಣ ದುರ್ಬಳಕೆ ಆಗಿಲ್ಲ’ ಎಂದು ಕೆಐಆರ್‌ಡಿಎಲ್‌ ಸಮರ್ಥಿಸಿಕೊಂಡಿದೆ!

ದೂರು ಸಲ್ಲಿಕೆಯಾಗಿರುವ ಒಟ್ಟು 126 ಕಾಮಗಾರಿಗಳಲ್ಲಿ 11 ಕಾಮಗಾರಿಗಳು ಪುನರಾವರ್ತನೆ ಆಗಿವೆ. ಒಂದು ಕಾಮಗಾರಿಯ ಗುತ್ತಿಗೆಯನ್ನು ಕೆಆರ್‌ಐಡಿಎಲ್‌ಗೆ ವಹಿಸಿಲ್ಲ. ಇನ್ನೊಂದು ಕಾಮಗಾರಿಯಲ್ಲಿ ಜಾಬ್‌ ಕೋಡ್‌ ಸರಿಯಾಗಿ ಉಲ್ಲೇಖಿಸಿಲ್ಲ. ಉಳಿದ 113 ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮತ್ತು ಕೆಆರ್‌ಐಡಿಎಲ್‌ ಮಧ್ಯೆ ಒಪ್ಪಂದ ಆಗಿತ್ತು. ಅಷ್ಟೂ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಲೋಕಾಯಕ್ತಕ್ಕೆ ಕೆಆರ್‌ಐಡಿಎಲ್‌ನ ಸೂಪರಿಟೆಂಡಿಂಗ್‌ ಎಂಜಿನಿಯರ್‌ (ಎಸ್‌ಇ) ವಿವರಣೆ ನೀಡಿದ್ದಾರೆ.

‘ಬಿಬಿಎಂಪಿ ಕಾರ್ಯಾದೇಶ ಮತ್ತು ಕರಾರು ಪತ್ರದಂತೆ 28 ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಆದರೆ, ಈ ಕಾಮಗಾರಿಗಳ ಅನುದಾನವನ್ನು ಬಿಬಿಎಂಪಿ ಬಿಡುಗಡೆ ಮಾಡಿಲ್ಲ. ಬಿಬಿಎಂಪಿ ಆಯುಕ್ತರು 2020ರ ಜುಲೈ 7ರಂದು ಪತ್ರ ಬರೆದು, ತಾಂತ್ರಿಕ ಮತ್ತು ಜಾಗೃತ ಕೋಶದಿಂದ ವರದಿ ಪಡೆದ ಬಳಿಕ ಬಿಲ್‌ ಪಾವತಿಗೆ ಸೂಚಿಸಿದ್ದರು. ಈ ಕಾರಣಕ್ಕೆ ಐದು ಕಾಮಗಾರಿಗಳಿಗೆ ಬಿಬಿಎಂಪಿ ವತಿಯಿಂದ ಕೆಆರ್‌ಐಡಿಎಲ್‌ಗೆ ಅನುದಾನ ಬಿಡುಗಡೆ ಆಗಿದ್ದರೂ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಿಲ್ಲ. 80 ಕಾಮಗಾರಿಗಳಿಗೆ ಮಾತ್ರ ಬಿಲ್‌ ಪಾವತಿ ಆಗಿದೆ’ ಎಂದೂ ಕೆಆರ್‌ಐಡಿಎಲ್‌ನ ಎಸ್‌ಇ ನೀಡಿರುವ ಮಾಹಿತಿ ಲೋಕಾಯುಕ್ತ ವರದಿಯಲ್ಲಿದೆ.

ADVERTISEMENT

‘ಈ 80 ಕಾಮಗಾರಿಗಳ ಅಂದಾಜು ಮೊತ್ತ ₹ 154.97 ಕೋಟಿ. ಅದರಲ್ಲಿ ₹ 6.98 ಕೋಟಿಯನ್ನು ಎಫ್‌ಎಸ್‌ಡಿ (ಭದ್ರತಾ ಠೇವಣಿ) ಎಂದು ಬಿಬಿಎಂಪಿ ಕಡಿತ ಮಾಡಿದೆ. ಉಳಿದ ₹ 133.95 ಕೋಟಿಯನ್ನು ಕೆಆರ್‌ಐಡಿಎಲ್‌ಗೆ ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ಗುಂಪಿನ ನಾಯಕರಿಗೆ ಪಾವತಿಸಲಾಗಿದೆ. ಆದರೆ, ಈ 88 ಕಾಮಗಾರಿಗಳಲ್ಲಿ ಮೂರು ಕಾಮಗಾರಿಗಳಿಗೆ ಬಿಬಿಎಂಪಿ ಸಂಪೂರ್ಣ ಹಣ ಪಾವತಿಸಿದೆ. ಉಳಿದ 77 ಕಾಮಗಾರಿಗಳಿಗೆ ಕೆಐಆರ್‌ಡಿಎಲ್‌ ಕಾರ್ಯಪಾಲಕ ಎಂಜಿನಿಯರ್‌ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳ ಪತ್ರದಂತೆ ಬಿಬಿಎಂಪಿಯು ಮೊದಲ ಬಿಲ್ ಮತ್ತು ನಂತರದ ಬಿಲ್‌ಗಳ ಭಾಗಶಃ ಮೊತ್ತವನ್ನು ಮಾತ್ರ ಪಾವತಿಸಿದೆ. ಯಾವುದೇ ಕಾಮಗಾರಿಗಳಲ್ಲಿ ಹಣ ದುರ್ಬಳಕೆ ಆಗಿಲ್ಲ’ ಎಂದೂ ಅವರು ಸಮರ್ಥಿಸಿಕೊಂಡಿರುವ ಅಂಶವೂ ವರದಿಯಲ್ಲಿದೆ.

ಆದರೆ, ದೂರಿನಲ್ಲಿ ಉಲ್ಲೇಖಿಸಿರುವ 126 ಕಾಮಗಾರಿಗಳ ಪೈಕಿ, 10 ಕಾಮಗಾರಿಗಳು ಪುನರಾವರ್ತನೆಯಾಗಿವೆ. ಹೀಗಾಗಿ, 116 ಕಾಮಗಾರಿಗಳಿಗೆ ಸಂಬಂಧಿಸಿ ಕಡತಗಳನ್ನು ರಾಜರಾಜೇಶ್ವರಿ ನಗರ ವಾರ್ಡ್‌ನ ಬಿಬಿಎಂಪಿ ಅಧಿಕಾರಿಗಳು ಲೋಕಾಯುಕ್ತಕ್ಕೆ ನೀಡಿದ್ದರು.

‘ಕಾಮಗಾರಿಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ತಟಸ್ಥ ಸಂಸ್ಥೆಯಿಂದ (ಸಿವಿಲ್‌ ಸ್ಕ್ವೇರ್‌ ಕನ್ಸಲ್ಟಂಟ್ಸ್‌) ವರದಿ ಪಡೆಯಲಾಗಿದೆ. ಎಲ್ಲ ಬಿಲ್‌ಗಳನ್ನು ಬಿಬಿಎಂಪಿಯ ಲೆಕ್ಕಪರಿಶೋಧನಾ ವಿಭಾಗ ಪರಿಶೀಲನೆ ನಡೆಸಿದೆ. ಸಹಾಯಕ ಎಂಜಿನಿಯರ್‌ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮತ್ತು ಕಾರ್ಯಪಾಲಕ ಎಂಜಿನಿಯರ್‌ಗಳು ಪರಿಶೀಲಿಸಿ, ಅಳತೆ ಪುಸ್ತಕದಲ್ಲಿ (ಎಂ.ಬಿ) ದಾಖಲಿಸಿ, ಅನುಷ್ಠಾನಗೊಂಡಿರುವ ಕಾಮಗಾರಿ ತೃಪ್ತಿಕರವಾಗಿದೆ ಎಂದು ವರದಿ ನೀಡಿದ ಬಳಿಕ ಬಿಬಿಎಂಪಿಯಿಂದ ಕೆಆರ್‌ಐಡಿಎಲ್‌ಗೆ ಹಣ ಪಾವತಿಯಾಗಿದೆ. ಹೀಗಾಗಿ, ನನ್ನಿಂದ ಯಾವುದೇ ದುರ್ನಡತೆ ಆಗಿಲ್ಲ’ ಎಂದು ಲೋಕಾಯುಕ್ತ ಆಪಾದಿತರ ಪಟ್ಟಿಯಲ್ಲಿ 12ನೇ ಆರೋಪಿ ಕೆಐಆರ್‌ಡಿಎಲ್‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಚಂದ್ರನಾಥ್‌ ಸಮರ್ಥಿಸಿಕೊಂಡಿದ್ದಾರೆ.

ಪ್ರಕರಣದ 13ನೇ ಆರೋಪಿಯಾಗಿರುವ ಕೆಆರ್‌ಐಡಿಎಲ್‌ನ ಕಾರ್ಯಪಾಲಕ ಎಂಜಿನಿಯರ್‌ ಶ್ರೀನಿವಾಸ್‌ ಕೂಡಾ ತಮ್ಮಿಂದ ಪ್ರಮಾದ ಆಗಿಲ್ಲ ಎಂದಿದ್ದಾರೆ. ‘ತನಿಖಾಧಿಕಾರಿ ಸ್ಥಳ ಮಹಜರು ನಡೆಸಿಲ್ಲ. ಯಾವುದೇ ಅಧಿಕಾರಿಗಳನ್ನು ವಿಚಾರಣೆ ನಡೆಸಿಲ್ಲ. ಕಾಮಗಾರಿಗಳಲ್ಲಿ ಆಗಿರುವ ಲೋಪಗಳ ಬಗ್ಗೆಯೂ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಉನ್ನತ ಅಧಿಕಾರಿಗಳ ಸೂಚನೆಯಂತೆ ಕಾಮಗಾರಿಗಳ ಮೇಲುಸ್ತುವಾರಿ ನೋಡಿಕೊಂಡಿದ್ದೇನೆ. ಕಾಮಗಾರಿ ಅನುಷ್ಠಾನಗೊಂಡ ಬಳಿಕವಷ್ಟೆ ಹಣ ಪಾವತಿ ಮಾಡಲಾಗಿದೆ’ ಎಂದು ಶ್ರೀನಿವಾಸ್‌ ಹೇಳಿಕೆ ನೀಡಿದ್ದರು ಎಂದೂ ವರದಿಯಲ್ಲಿ ಲೋಕಾಯುಕ್ತರು ತಿಳಿಸಿದ್ದಾರೆ. ಆದರೆ, ಈ ವಿವರಣೆಗಳಿಗೆ ಲೋಕಾಯುಕ್ತ ಸೊಪ್ಪುಹಾಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.