ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: ಅಮ್ರಿತ್ ಪೌಲ್‌ ಸೂಚಿಸಿದ ಖಾತೆಗಳಿಗೆ ₹ 1.36 ಕೋಟಿ

ಪಿಎಸ್‌ಐ ನೇಮಕಾತಿ ಅಕ್ರಮ: ಮತ್ತೆ ಮೂರು ದಿನ ಸಿಐಡಿ ವಶಕ್ಕೆ ಅಮ್ರಿತ್‌

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 19:30 IST
Last Updated 13 ಜುಲೈ 2022, 19:30 IST
ಅಮ್ರಿತ್‌ ಪೌಲ್‌
ಅಮ್ರಿತ್‌ ಪೌಲ್‌   

ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದ ಆರೋಪದಡಿ ಬಂಧನದಲ್ಲಿರುವ ನೇ ಮಕಾತಿ ವಿಭಾಗದ ಹಿಂದಿನ ಎಡಿಜಿಪಿ ಅಮ್ರಿತ್‌ ಪೌಲ್‌ ಸೂಚಿಸಿದ್ದ ಖಾತೆಗಳಿಗೆ ಅವರ ಅಧೀನದಲ್ಲಿ ಡಿವೈಎಸ್‌ಪಿಯಾಗಿದ್ದ ಶಾಂತಕುಮಾರ್‌ ಒಟ್ಟು ₹ 1.36 ಕೋಟಿ ಸಂದಾಯ ಮಾಡಿರು ವುದು ಸಿಐಡಿ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

ನೇಮಕಾತಿ ಪರೀಕ್ಷೆಯ ಒಎಂಆರ್‌ ಪ್ರತಿಗಳನ್ನು ಇರಿಸಿದ್ದ ಭದ್ರತಾ ಕೊಠಡಿಯ ಬೀಗದ ಕೀಯನ್ನು ತನ್ನ ಕೈಕೆಳಗಿನ ನೌಕರರಿಗೆ ನೀಡಿ, ಅವರ ಮೂಲಕವೇ ಉತ್ತರ ಪತ್ರಿಕೆಗಳನ್ನು ತಿದ್ದಿಸಿದ್ದ ಕೃತ್ಯವು ದೃಢಪಟ್ಟ ಬಳಿಕ ಪೌಲ್‌ ಅವರನ್ನು ಬಂಧಿಸಲಾಗಿತ್ತು. ಈ ಬೆಳವಣಿಗೆಗಳು ನಡೆದಿರುವಾಗಲೇ ದೊಡ್ಡ ಮೊತ್ತದ ಹಣವೂ ವರ್ಗಾವಣೆ ಆಗಿರುವುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ಧಾರೆ. ಪೌಲ್‌ ಸೂಚಿಸಿದ್ದ ವ್ಯಕ್ತಿಗಳ ವಿವಿಧ ಬ್ಯಾಂಕ್‌ ಖಾತೆಗಳಿಗೆ ಶಾಂತಕುಮಾರ್‌ ಹಣ ಸಂದಾಯ ಮಾಡಿರುವುದಕ್ಕೆ ತನಿಖಾ ತಂಡಕ್ಕೆ ಸಾಕ್ಷ್ಯಗಳು ಲಭಿಸಿವೆ.

ಪೌಲ್‌ಗೆ ಸೇರಿದ್ದ ಮೊಬೈಲ್‌ ಅನ್ನು ವಶಕ್ಕೆ ಪಡೆಯಲಾಗಿತ್ತು. ಅದರಲ್ಲಿದ್ದ ಎಲ್ಲ ದತ್ತಾಂಶ ನಾಶಪಡಿಸಲಾಗಿದ್ದು, ಇದರಿಂದ ತನಿಖೆಗೆ ಹಿನ್ನಡೆಯಾಗಿದೆ. ಮೊಬೈಲ್‌ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ರವಾನಿಸ
ಲಾಗಿದೆ. ಮೊಬೈಲ್‌ನಲ್ಲಿದ್ದ ದತ್ತಾಂಶವನ್ನು ತಾಂತ್ರಿಕ ಪರಿಣಿತರ ಮೂಲಕ ಹೊರ ತೆಗೆಯಲಾಗುವುದು ಎಂದು ಮೂಲಗಳು ತಿಳಿಸಿವೆ.

ADVERTISEMENT

ಮತ್ತೆ ಮೂರು ದಿನ ಕಸ್ಟಡಿಗೆ: ಸಿಐಡಿ ಮನವಿ ಮೇರೆಗೆ ಪೌಲ್‌ ಅವರನ್ನು ಮತ್ತೆ ಮೂರು ದಿನಗಳ ಕಾಲ ತನಿಖಾಧಿಕಾರಿಗಳ ವಶಕ್ಕೆ ನೀಡಿ ಒಂದನೇ ಎಸಿಎಂಎಂ ನ್ಯಾಯಾಲಯವು ಬುಧವಾರ ಆದೇಶಿಸಿತು. ‌ಜುಲೈ 4ರಂದು ಪೌಲ್‌ ಅವರನ್ನು ಬಂಧಿಸಿದ್ದ ಸಿಐಡಿ, 10 ದಿನಗಳ ಕಾಲ ವಿಚಾರಣೆಗಾಗಿ ವಶಕ್ಕೆ ಪಡೆದಿತ್ತು. ಅವಧಿ ಮುಗಿದ ಕಾರಣದಿಂದ ಬುಧವಾರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

‘ಪೌಲ್‌ ತನಿಖೆಗೆ ಸಹಕರಿಸುತ್ತಿಲ್ಲ. ವರ್ಗಾವಣೆಯಾಗಿರುವ ಹಣ ವಶಕ್ಕೆ ಪಡೆಯಲು, ಮೊಬೈಲ್‌ನಲ್ಲಿದ್ದ ಮಾಹಿತಿ ಸಂಗ್ರಹಿಸಲು ಕಾಲಾವಕಾಶಬೇಕಿದೆ. ಮೊಬೈಲ್‌ ಪಾಸ್‌ವರ್ಡ್‌ ಸಹ ಕೊಟ್ಟಿರಲಿಲ್ಲ. ಬುಧವಾರವಷ್ಟೇ ಪಾಸ್‌ವರ್ಡ್‌ ಸಿಕ್ಕಿದೆ. ತನಿಖೆಗೆ ಇನ್ನಷ್ಟು ಅವಕಾಶ ಬೇಕಿದ್ದು, 5 ದಿನಗಳ ಕಾಲ ಕಸ್ಟಡಿಗೆ ನೀಡಬೇಕು’ ಎಂದು ಸಿಐಡಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಅದಕ್ಕೆ ಆಕ್ಷೇಪಿಸಿದ ಆರೋಪಿ ಪರ ವಕೀಲರು, ‘ಪೌಲ್‌ ಅವರು ಸ್ವಇಚ್ಛೆಯಿಂದಲೇ ಜುಲೈ 4ರಂದು ಬೆಳಿಗ್ಗೆ ಸಿಐಡಿ ಎದುರು ವಿಚಾರಣೆಗೆ ಹಾಜರಾಗಿದ್ದರು. ಸಿಐಡಿ ದಾಖಲೆಯಲ್ಲೂ ಈ ಅಂಶ ಉಲ್ಲೇಖವಿದೆ. ಅಂದು ಮಧ್ಯಾಹ್ನ ಸಿಐಡಿಯವರು ಬಂಧಿಸಿದ್ದರು. ಅಂದೇ ಮೊಬೈಲ್‌ ವಶಕ್ಕೆ ಪಡೆದಿದ್ದಾರೆ. ಯಾವ ಪುರುಷಾರ್ಥಕ್ಕೆ ಮತ್ತಷ್ಟು ಸಮಯ ಕೇಳುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

‘ಸಿಐಡಿಯವರು ಏನಾದರೂ ತೊಂದರೆ ನೀಡುತ್ತಿದ್ದಾರೆಯೇ’ ಎಂದು ಪೌಲ್‌ ಅವರನ್ನು ನ್ಯಾಯಾಧೀಶರು ಪ್ರಶ್ನಿಸಿದರು. ‘ತೊಂದರೆ ಕೊಡುತ್ತಿಲ್ಲ’ ಎಂದು ಆರೋಪಿ ಅಧಿಕಾರಿ ಹೇಳಿದರು.

ಸಿಐಡಿ ಕಸ್ಟಡಿ ಅವಧಿಯಲ್ಲಿ ಪ್ರತಿ ದಿನ 30 ನಿಮಿಷ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಲು ಹಾಗೂ ಆರೋಗ್ಯ ತಪಾಸಣೆಗೆ ವೈದ್ಯರ ಭೇಟಿಗೆ ನ್ಯಾಯಾಲಯವು ಅವಕಾಶ ನೀಡಿತು.

ಇದೇ ಪ್ರಕರಣದಲ್ಲಿ ಬಂಧಿತರಾಗಿ ಸಿಐಡಿ ವಶದಲ್ಲಿದ್ದ ಶಾಂತಕುಮಾರ್‌, ಶ್ರೀನಿವಾಸ್‌, ಶ್ರೀಧರ್‌, ಹರ್ಷ ಅವರನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.