ADVERTISEMENT

ಗ್ರಾಹಕರು, ಬ್ಯಾಂಕುಗಳಿಗೆ 20 ಕೋಟಿಗೂ ಹೆಚ್ಚು ಹಣ ವಂಚನೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 5:17 IST
Last Updated 9 ಜನವರಿ 2020, 5:17 IST
   

ಬೆಂಗಳೂರು: ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ಸಂಬಂಧಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ
ಗ್ರಾಹಕರು ಮತ್ತು ಬ್ಯಾಂಕುಗಳಿಗೆ 20 ಕೋಟಿಗೂ ಹೆಚ್ಚು ಹಣ ವಂಚಿಸಿ ತಲೆಮರೆಸಿಕೊಂಡಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸದ್ಯ ಮೈಸೂರಿನ ಕುವೆಂಪು ನಗರದಲ್ಲಿ ನೆಲೆಸಿರುವ, ಬಸವೇಶ್ವರ ನಗರದ ಮಂಜುನಾಥ್ (34) ಮತ್ತು ಕೆಂಗೇರಿಯ ದೊಡ್ಡಬೆಲೆ ನಿವಾಸಿ ರಂಗನಾಥ್ (37) ಬಂಧಿತರು.

ಅಪಾರ್ಟ್ ಮೆಂಟ್ ಗಳನ್ನು ನಿರ್ಮಿಸುವ ನೆಪದಲ್ಲಿ, ಗ್ರಾಹಕರು ಫ್ಲ್ಯಾಟ್ ಗಳನ್ನು ಖರೀದಿಸುವಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ನಗರದ ವಿವಿಧ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳಿಂದ 20 ಕೋಟಿ ಸಾಲ ಪಡೆದಿದ್ದ ಇವರಿಬ್ಬರೂ ಆ ಹಣದಲ್ಲಿ ಐಷಾರಾಮಿ ಜೀವನ ಸಾಗಿಸುತ್ತಿದ್ದರು.

ADVERTISEMENT

ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಒಂದು ಆಡಿ ಕಾರು, ಒಂದು ಜೀಪು, ಲ್ಯಾಪ್ ಟಾಪ್ ವಶಪಡಿಸಿಕೊಂಡಿದ್ದಾರೆ. ಬಂಧಿತರ ವಿರುದ್ಧ ಹೈ ಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆರೋಪಿಗಳು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಗ್ರಾಹಕರಿಗೆ ತೋರಿಸಿ, ನಾವೇ ಅದರ ಮಾಲೀಕರೆಂದು ನಂಬಿಸುತ್ತಿದ್ದರು. ಬಳಿಕ ಗ್ರಾಹಕರಿಂದ ಕೆ.ವೈ.ಸಿ ದಾಖಲೆಗಳನ್ನು ಪಡೆದು, ಬಿಲ್ಡರ್ ಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು, ಗ್ರಾಹಕರ ಹೆಸರಿನಲ್ಲಿ ಬ್ಯಾಂಕ್ ಸಾಲ ಪಡೆದು ತಮ್ಮ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.