ADVERTISEMENT

RSS ಚಟುವಟಿಕೆ ನಿಷೇಧಿಸುವಂತೆ ಪತ್ರ | ಪ್ರಿಯಾಂಕ್ ಮೂರ್ಖತನ ಪ್ರದರ್ಶನ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 11:00 IST
Last Updated 12 ಅಕ್ಟೋಬರ್ 2025, 11:00 IST
<div class="paragraphs"><p>ಪ್ರಿಯಾಂಕ್ ಖರ್ಗೆ ಮತ್ತು ಬಿ.ವೈ.ವಿಜಯೇಂದ್ರ</p></div>

ಪ್ರಿಯಾಂಕ್ ಖರ್ಗೆ ಮತ್ತು ಬಿ.ವೈ.ವಿಜಯೇಂದ್ರ

   

ಬೆಂಗಳೂರು: ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಿಯಾಂಕ್ ಖರ್ಗೆಯವರು ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧದ ಕುರಿತು ಇಷ್ಟೊಂದು ಬೇಜವಾಬ್ದಾರಿಯಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದರೆ, ಇದು ಅವರ ಮೂರ್ಖತನದ ಪ್ರದರ್ಶನ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಹಿನ್ನೆಲೆ, ಕಾರ್ಯ ಚಟುವಟಿಕೆ ಕುರಿತು ಮಾಹಿತಿ ಕೊರತೆ ಇರುವವರು ಕೇವಲ ತಮ್ಮ ಪ್ರಚಾರಕ್ಕಾಗಿ ಚಟದಿಂದ ಮಾತನಾಡುವವರು ಇಂಥ ಹೇಳಿಕೆ ಕೊಡಲು ಸಾಧ್ಯ’ ಎಂದು ಪ್ರಿಯಾಂಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ಹಿಂದೆ ಎರಡು ಮೂರು ಬಾರಿ ಇದೇ ರೀತಿ ಆರ್‌ಎಸ್‌ಎಸ್‌ ಅನ್ನು ಕಾಂಗ್ರೆಸ್ ಪಕ್ಷ ನಿಷೇಧಿಸಿತ್ತು. ಅದೇ ಕಾಂಗ್ರೆಸ್ ಪಕ್ಷವು ನಿಷೇಧವನ್ನು ಹಿಂದಕ್ಕೆ ಪಡೆದ ಉದಾಹರಣೆ ದೇಶದ ಮುಂದೆ ಇದೆ. ಮತ್ತೊಮ್ಮೆ ಆರ್‌ಎಸ್‌ಎಸ್‌ ನಿಷೇಧಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ’ ಎಂದು ವಿಜಯೇಂದ್ರ ಗುಡುಗಿದ್ದಾರೆ.

‘ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಯನ್ನು ಗಮನಿಸಿ, ಶ್ಲಾಘಿಸಿ ಅಂದಿನ ರಿಪಬ್ಲಿಕ್ ಡೇ ಪರೇಡ್‍ನಲ್ಲಿ ಆರ್‌ಎಸ್‌ಎಸ್‌ಗೆ ಇದೇ ಕಾಂಗ್ರೆಸ್ ಪಕ್ಷ ಅವಕಾಶ ಮಾಡಿಕೊಟ್ಟಿತ್ತು ಎಂದು ಪ್ರಿಯಾಂಕ್ ಖರ್ಗೆಯವರಿಗೆ ನೆನಪಿಸಲು ಬಯಸುತ್ತೇನೆ’ ಎಂದು ವಿಜಯೇಂದ್ರ ಹೇಳಿದ್ದಾರೆ.

‘ಪ್ರಿಯಾಂಕ್ ಖರ್ಗೆಯವರು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಂತೆ ಕಾಣುತ್ತಿದೆ. ಗಾಂಧಿ ಕುಟುಂಬವನ್ನು ಓಲೈಸುವ ನಿಟ್ಟಿನಲ್ಲಿ ಈ ರೀತಿ ಪತ್ರ ಬರೆದಂತೆ ಕಾಣುತ್ತಿದೆ. ಆರ್‌ಎಸ್‌ಎಸ್‌ 100 ವರ್ಷ ಪೂರೈಸಿದ ಈ ಶುಭ ಘಳಿಗೆಯಲ್ಲಿ ದೇಶದಾದ್ಯಂತ ಚಟುವಟಿಕೆ, ಪಥ ಸಂಚಲನ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಪ್ರಿಯಾಂಕ್ ಪತ್ರದ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೆಲ್ಲದಕ್ಕೂ ಕಾಲ ಉತ್ತರ ಕೊಡಲಿದೆ’ ಎಂದು ವಿಜಯೇಂದ್ರ ಕುಟುಕಿದ್ದಾರೆ.

ಪ್ರಿಯಾಂಕ್ ಖರ್ಗೆಯವರೇ, ನಿಮ್ಮ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿರುವುದು, ನಿಮ್ಮ ಜಿಲ್ಲೆಯಲ್ಲಿ ಗುತ್ತಿಗೆದಾರನ ಆತ್ಮಹತ್ಯೆ ಆಗಿದೆ, ಬೆದರಿಸುವ ತಂತ್ರ ನಡೆಯುತ್ತಿದೆ, ವ್ಯಾಪಕವಾಗಿ ಮರಳು ಮಾಫಿಯಾ ನಡೆಯುತ್ತಿದ್ದು, ನೀವು ಸಚಿವರಾಗಿ ಇವೆಲ್ಲದರ ಕಡೆ ಗಮನ ಹರಿಸಿದರೆ ನಿಮ್ಮ ಜಿಲ್ಲೆಗೂ ಹೆಚ್ಚು ಅನುಕೂಲ. ರಾಜ್ಯಕ್ಕೂ ಅನುಕೂಲ ಆಗಬಹುದು ಎಂದು ವಿಜಯೇಂದ್ರ ಹೇಳಿದ್ದಾರೆ.

‌ಕಲಬುರಗಿ ಜಿಲ್ಲೆ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಕಲ್ಯಾಣ ಕರ್ನಾಟಕದಲ್ಲಿ 30-35 ಸಾವಿರ ಶಿಕ್ಷಕರ ನೇಮಕಾತಿ ಆಗಿಲ್ಲವೆಂದು ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆಯವರು ಬಹಿರಂಗವಾಗಿ ಹೇಳಿದ್ದಾರೆ. ಅದರ ಬಗ್ಗೆ ಚಿಂತಿಸಬೇಕು. ಸಚಿವರಾಗಿ ಯಾವುದನ್ನು ಗಮನಿಸಬೇಕೋ ಅದನ್ನು ಗಮನಿಸದೇ ಈ ರೀತಿ ಉಡಾಫೆಯಾಗಿ ಮಾತನಾಡುವುದು ಶೋಭೆ ತರುವುದಿಲ್ಲ ಎಂದು ಅವರು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.