ADVERTISEMENT

ಆರ್‌ಎಸ್‌ಎಸ್‌ ನಿಷೇಧಿಸಬೇಕು: ದೇವೇಗೌಡರ ಮಾತು ನೆನಪಿಸಿದ ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 8:03 IST
Last Updated 18 ಅಕ್ಟೋಬರ್ 2025, 8:03 IST
   

ಬೆಂಗಳೂರು: ‘ಆರ್‌ಎಸ್‌ಎಸ್‌ ನಿಷೇಧಿಸುವಂತೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಆಗ್ರಹಿಸಿದ್ದರು. ಈ ಮಾತುಗಳನ್ನು ಇಂದು ಮರೆತಿದ್ದಾರೆಯೇ ಅಥವಾ ಮರೆಯಲು ಪ್ರಯತ್ನಿಸುತ್ತಿದ್ದಾರೆಯೇ?’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ, ಜೆಡಿಎಸ್‌ಗೆ ತಿರುಗೇಟು ನೀಡಿದ್ದಾರೆ.

ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧಿಸಬೇಕು ಮತ್ತು ಆರ್‌ಎಸ್‌ಎಸ್‌ ಚಟುವಟಿಕೆಯಲ್ಲಿ ಸರ್ಕಾರಿ ನೌಕರರು ಪಾಲ್ಗೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಿಯಾಂಕ್‌ ಖರ್ಗೆ ಅವರು ಎರಡು ಪತ್ರ ಬರೆದಿದ್ದರು.

ಈ ವಿಚಾರವಾಗಿ ಪ್ರಿಯಾಂಕ್‌ ಖರ್ಗೆ ಅವರನ್ನು ಗುರಿಯಾಗಿಸಿ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಜೆಡಿಎಸ್‌ ವರಿಷ್ಠ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು, ಆರ್‌ಎಸ್‌ಎಸ್‌ ನಿಷೇಧಿಸಲಾಗುದು ಎಂದು ಹೇಳಿದ್ದರು.

ADVERTISEMENT

ಇದಕ್ಕೆ ತಿರುಗೇಟು ನೀಡಿರುವ ಪ್ರಿಯಾಂಕ್‌ ಖರ್ಗೆ, ಆರ್‌ಎಸ್‌ಎಸ್‌ ನಿಷೇಧಿಸುವಂತೆ ಸ್ವತಃ ದೇವೇಗೌಡರೇ ಆಗ್ರಹಿಸಿರುವುದನ್ನು ನೆನಪಿಸಿದ್ದಾರೆ. ಈ ಕುರಿತು 2024ರ ಜ. 8ರಂದು ಅಭಿಮತ ಪುಟದಲ್ಲಿ ಪ್ರಜಾವಾಣಿ ‘25 ವರ್ಷಗಳ ಹಿಂದೆ’ ವಿಭಾಗದಲ್ಲಿ ಪ್ರಕಟವಾದ ವರದಿಯನ್ನು ಪ್ರಿಯಾಂಕ್‌ ಹಂಚಿಕೊಂಡಿದ್ದಾರೆ.

‘‘ಆರ್‌ಎಸ್‌ಎಸ್‌ ನಿಷೇಧವಾಗಬೇಕು’ ಇದು ಜೆಡಿಎಸ್‌ನವರ ಮನ್ ಕಿ ಬಾತ್. ಈ ಮನದಾಳದ ಮಾತುಗಳನ್ನು ಇಂದು ಮರೆತಿದ್ದಾರೆಯೇ ಅಥವಾ ಮರೆಯಲು ಪ್ರಯತ್ನಿಸುತ್ತಿದ್ದಾರೆಯೇ?’ ಎಂದು ಪ್ರಿಯಾಂಕ್‌ ಪ್ರಶ್ನಿಸಿದ್ದಾರೆ.

‘ಈ ಹಳೆಯ ಪಳೆಯುಳಿಕೆಯಂತಹ ಮಾತುಗಳನ್ನು ಈ ಸಂದರ್ಭದಲ್ಲಿ ಬಿಜೆಪಿಯವರಿಗೆ ನೆನಪು ಮಾಡಲು ಬಯಸುತ್ತೇನೆ’ ಎಂದಿದ್ದಾರೆ.

ಸುಮಾರು 25 ವರ್ಷಗಳ ಹಿಂದೆ, ದಕ್ಷಿಣ ಗುಜರಾತ್‌ನಲ್ಲಿ ಕ್ರೈಸ್ತರ ಮೇಲೆ ನಡೆದ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದ ದೇವೇಗೌಡರು, ಆರ್‌ಎಸ್ಎಸ್, ವಿಎಚ್‌ಪಿ, ಬಜರಂಗದಳ ಮತ್ತು ಶಿವಸೇನೆಯಂಥ ಕೋಮು ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.