ಆರ್. ಆಶೋಕ, ಸಿದ್ದರಾಮಯ್ಯ
ಪ್ರಜಾವಾಣಿ ಚಿತ್ರ
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಿರುವ ಮಾತಿನ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಸಮಾಜವಾದದ ಹೆಸರಿನಲ್ಲಿ ರಾಜಕೀಯ ಆರಂಭಿಸಿ, ಅಹಿಂದ ಹೆಸರಿನಲ್ಲಿ ಅಧಿಕಾರ ಅನುಭವಿಸಿ, ಈಗ ಕುರ್ಚಿ ಉಳಿಸಿಕೊಳ್ಳಲು ನಕಲಿ ಗಾಂಧಿ ಕುಟುಂಬದ ಗುಲಾಮಗಿರಿ ಮಾಡುತ್ತಿರುವ ಸಿದ್ದರಾಮಯ್ಯನವರಂತಹ ಪಿಎಫ್‌ಐ ಏಜೆಂಟ್‌ಗಳಿಂದ ಆರ್‌ಎಸ್‌ಎಸ್ ಪಾಠ ಕಲಿಯಬೇಕಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸಿದ್ದರಾಮಯ್ಯನವರೇ, ಆರ್‌ಎಸ್‌ಎಸ್ ಅನ್ನು ದೂಷಿಸಿದರೆ ನಕಲಿ ಗಾಂಧಿಗಳನ್ನು ಮೆಚ್ಚಿಸಿ ಇನ್ನೊಂದಷ್ಟು ದಿನ ಕುರ್ಚಿಗೆ ಅಂಟಿಕೊಂಡು ಕೂತಿರಬಹುದು ಎನ್ನುವ ಭ್ರಮೆಯಿಂದ ಹೊರಗೆ ಬನ್ನಿ. ನಿಮ್ಮ ಪಕ್ಷದವರೇ ನಿಮ್ಮ ಕುರ್ಚಿಯನ್ನು ಒದ್ದು ಕಿತ್ತುಕೊಳ್ಳುವ ದಿನ ಬಹಳ ದೂರವಿಲ್ಲ’ ಎಂದು ಟೀಕಿಸಿದ್ದಾರೆ.
‘ಯಾರೋ ಕಟ್ಟಿದ ಹುತ್ತದಲ್ಲಿ ಬಂದು ಅಡಗಿ ಕುಳಿತುಕೊಳ್ಳುವ ಹಾವಿನ ರೀತಿ ರಾಜ್ಯದಲ್ಲಿ ಅಧಿಕಾರ ಅನುಭವಿಸುವುದು ದೊಡ್ಡದಲ್ಲ. ನಿಮಗೆ ತಾಕತ್ತಿದ್ದರೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕತ್ವ ವಹಿಸಿಕೊಂಡು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಿ ನೋಡೋಣ’ ಎಂದು ಅಶೋಕ ಸವಾಲು ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.