
ಉಡುಪಿ: ಉಡುಪಿ ಕೃಷ್ಣಮಠದ ಪರ್ಯಾಯದ ಮೆರವಣಿಗೆಗೆ ಚಾಲನೆ ನೀಡುವ ವೇಳೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ಕೇಸರಿ ಧ್ವಜವನ್ನು ಪ್ರದರ್ಶಿಸಿದ್ದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ –ವಿರೋಧ ಚರ್ಚೆ ನಡೆದಿವೆ.
‘ಆರ್‌ಎಸ್‌ಎಸ್ ಧ್ವಜ ಪ್ರದರ್ಶಿಸಿದ ಜಿಲ್ಲಾಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷ ಹರೀಶ್ ಶೆಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ.
‘ಜ.18ರಂದು ಮುಂಜಾನೆ 3 ಗಂಟೆಗೆ ಉಡುಪಿ ನಗರದ ಜೋಡುಕಟ್ಟೆಯಿಂದ ಶ್ರೀಕೃಷ್ಣ ಮಠದವರೆಗೆ ಪರ್ಯಾಯ ಮೆರವಣಿಗೆ ನಡೆದಿದ್ದು, ಮೆರವಣಿಗೆ ಆರಂಭಕ್ಕೂ ಮೊದಲು ಶಾಸಕ ಯಶ್‌ಪಾಲ್ ಸುವರ್ಣ ಅವರು ಆರ್‌ಎಸ್‌ಎಸ್ ಧ್ವಜವನ್ನು ಜಿಲ್ಲಾಧಿಕಾರಿ ಕೈಗೆ ನೀಡಿದ್ದಾರೆ. ಜಿಲ್ಲಾಧಿಕಾರಿ ಅವರು ಆ ಧ್ವಜವನ್ನು ಕೈಯಲ್ಲಿ ಹಿಡಿದು ಮೇಲಕ್ಕೆ ಎತ್ತಿ, ಸಾರ್ವಜನಿಕವಾಗಿ ಪ್ರದರ್ಶಿಸಿದ್ದರು. ಅವರ ನಡೆ ಸರ್ಕಾರಿ ಸೇವಾ ನಿಯಮಗಳು ಮತ್ತು ಸಂವಿಧಾನದ ಧರ್ಮ ನಿರಪೇಕ್ಷ ತತ್ವಗಳಿಗೆ ವಿರುದ್ಧವಾಗಿದ್ದು, ಈ ನಡೆ ಅತ್ಯಂತ ಆಕ್ಷೇಪಾರ್ಹವಾಗಿದೆ. ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ‘ನಾನು ಪ್ರದರ್ಶಿಸಿದ್ದು ಭಗವಾಧ್ವಜವಾಗಿದ್ದು, ಕೃಷ್ಣಮಠದ ಕಾರ್ಯಕ್ರಮಗಳಲ್ಲಿ ಅಂತಹ ಧ್ವಜವನ್ನು ಬಳಸುತ್ತಾರೆ. ಯಾವುದೇ ರಾಜಕೀಯ ಪ್ರೇರಿತವಾಗಿ ನಾನು ಭಾಗವಹಿಸಿಲ್ಲ’ ಎಂದು ಹೇಳಿದ್ದಾರೆ.
‘ಪರ್ಯಾಯ ಮೆರವಣಿಗೆಗೆ ಸಾಮಾನ್ಯವಾಗಿ ಉಡುಪಿ ನಗರಸಭೆಯ ಅಧ್ಯಕ್ಷರು ಚಾಲನೆ ನೀಡುತ್ತಾರೆ. ಈಗ ನಗರಸಭೆಗೆ ಆಡಳಿತ ಮಂಡಳಿ ಇಲ್ಲ. ನಗರಸಭೆಯ ಆಡಳಿತಾಧಿಕಾರಿಯಾಗಿ ನಾನು ಚಾಲನೆ ನೀಡಿದ್ದೇನೆ’ ಎಂದು ಹೇಳಿದ್ದಾರೆ.
‘ಜಿಲ್ಲಾಧಿಕಾರಿ ಭಗವಾಧ್ವಜ ಹಿಡಿದು ಚಾಲನೆ ಕೊಟ್ಟಿದ್ದಾರೆ. ಹಿಂದೆಯೂ ಹೀಗೇ ನೀಡಲಾಗುತ್ತಿತ್ತು. ಒಂದು ವೇಳೆ ಅವರಿಗೆ ಪಾಕಿಸ್ತಾನ ಧ್ವಜ ಕೊಟ್ಟಿದ್ದರೆ ಟೀಕೆ ಮಾಡಬಹುದಿತ್ತು’ ಎಂದು ಶಾಸಕ ಯಶ್‌ಪಾಲ್ ಸುವರ್ಣ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂದವರ ಮೇಲೆ ಕ್ರಮಕೈಗೊಂಡಿಲ್ಲ. ಪರ್ಯಾಯದ ಯಶಸ್ಸನ್ನು ಸಹಿಸಲು ಆಗದೆ ಈಗ ಟೀಕೆ ಮಾಡಲಾಗುತ್ತಿದೆ’ ಎಂದರು.
‘ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅನಿವಾರ್ಯ ಕಾರಣದಿಂದ ಪರ್ಯಾಯಕ್ಕೆ ಬರಲಿಲ್ಲ. ಆದರೆ ಕನಿಷ್ಠ ಮಾಧ್ಯಮದ ಮೂಲಕವಾದರೂ ಪರ್ಯಾಯಕ್ಕೆ ಅವರು ಶುಭ ಹಾರೈಸಿಲ್ಲ. ನಾನು ದುರುದ್ದೇಶದಿಂದ ಜಿಲ್ಲಾಧಿಕಾರಿ ಕೈಗೆ ಧ್ವಜ ಕೊಟ್ಟಿದ್ದಲ್ಲ’ ಎಂದೂ ಹೇಳಿದರು.
ಜಿಲ್ಲಾಡಳಿತದ ಪರವಾಗಿ ಭಾಗವಹಿಸಿದಾಗ ಸಂವಿಧಾನಿಕ ನಿಯಮಗಳನ್ನು ಪಾಲಿಸಬೇಕು ಎಂಬ ಜಾಗೃತಿ ಜಿಲ್ಲಾಧಿಕಾರಿ ಅವರಿಗೆ ಇರಬೇಕಿತ್ತು. ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು-ಕೆ.ಫಣಿರಾಜ್, ಪ್ರಧಾನ ಸಂಚಾಲಕ, ಸಹಬಾಳ್ವೆ ಸಂಘಟನೆ
ಉಡುಪಿ ಪರ್ಯಾಯದ ಮೆರವಣಿಗೆಯಲ್ಲಿ ಕೇಸರಿ ಧ್ವಜ ಹಾರಿಸದೇ ಕಾಂಗ್ರೆಸ್ ಬಾವುಟ ಪ್ರದರ್ಶನ ಮಾಡಬೇಕಿತ್ತೇ?-ವಿ. ಸುನಿಲ್ ಕುಮಾರ್, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.