ಬೆಂಗಳೂರು: ‘ಬದಲಾದ ಸನ್ನಿವೇಶದಲ್ಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್‌ಎಸ್) ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಬರುವ ನವೆಂಬರ್ 2ಕ್ಕೆ ನಡೆಸಲು ಯೋಜಿಸಿರುವ ಪಥಸಂಚಲನದ ಸ್ಥಳ ಮತ್ತು ಸಮಯಕ್ಕೆ ಸಂಬಂಧಿಸಿದಂತೆ ಕೈಗೊಳ್ಳುವ ನಿರ್ಣಯದ ವರದಿಯನ್ನು ಇದೇ 24ಕ್ಕೆ ನ್ಯಾಯಾಲಯಕ್ಕೆ ಸಲ್ಲಿಸಿ’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಚಿತ್ತಾಪುರದಲ್ಲಿ ಭಾನುವಾರ (ಅ.19) ಮಧ್ಯಾಹ್ನ 3 ಗಂಟೆಗೆ ನಡೆಯಬೇಕಿದ್ದ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ತಹಶೀಲ್ದಾರ್ ಕ್ರಮವನ್ನು ಆಕ್ಷೇಪಿಸಿ ಪಥಸಂಚಲನದ ಸಂಚಾಲಕರೂ ಆದ ಚಿಂಚೋಳಿಯ ಹಿರಿಯ ನಾಗರಿಕ ಅಶೋಕ್ ಪಾಟೀಲ (70) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ನಿಯೋಜಿತ ಏಕಸದಸ್ಯ ವಿಶೇಷ ನ್ಯಾಯಪೀಠ (ಕಲಬುರಗಿ) ಭಾನುವಾರ ಬೆಳಿಗ್ಗೆ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಾಜರಾಗಿದ್ದ ಪದಾಂಕಿತ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್, ‘ಆರ್‌ಎಸ್‌ಎಸ್‌ಗೆ 100 ವರ್ಷ ತುಂಬಿರುವ ಸಂದರ್ಭದಲ್ಲಿ ಮತ್ತು ವಿಜಯದಶಮಿ ಪ್ರಯುಕ್ತ ಎಲ್ಲೆಡೆ ಪಥಸಂಚಲನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಹಾಗೆಯೇ ಚಿತ್ತಾಪುರದಲ್ಲಿ ಇದೇ 19ರಂದು ಮಧ್ಯಾಹ್ನ 3 ಗಂಟೆಗೆ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಕಲಬುರಗಿ ಜಿಲ್ಲೆಯ ಆರ್‌ಎಸ್‌ಎಸ್ ವ್ಯವಸ್ಥಾಪಕ ಪ್ರಲ್ಹಾದ ವಿಶ್ವಕರ್ಮ ಅವರು ಸ್ಥಳೀಯ ತಹಶಿಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಆದರೆ, ಮನವಿಯನ್ನು ನಿರಾಕರಿಸಲಾಗಿದೆ’ ಎಂದರು.
‘ರಾತ್ರೋ ರಾತ್ರಿ ಅನುಮತಿ ನಿರಾಕರಿಸಿರುವುದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ. ಪಥಸಂಚಲನವನ್ನು ಹೇಗಾದರೂ ಮಾಡಿ ರದ್ದುಪಡಿಸಬೇಕೆಂದೇ ಭೀಮ್ ಆರ್ಮಿ ಮತ್ತು ದಲಿತ ಪ್ಯಾಂಥರ್ ಸಂಘಟನೆಗಳ ಮೆರವಣಿಗೆಗೂ ಅವಕಾಶ ನೀಡಲಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಲಾಗಿದೆ’ ಎಂದು ದೂರಿದರು.
‘ಆರ್‌ಎಸ್‌ಎಸ್‌ಗೆ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಅಪಾರ ಕಳಕಳಿ ಇದೆ. ರಾಜ್ಯದಾದ್ಯಂತ ಇದುವರೆಗೆ 250 ಸಮಾವೇಶಗಳನ್ನು ನಡೆಸಲಾಗಿದೆ. ಎಲ್ಲಿಯೂ ಯಾವುದೇ ರೀತಿಯ ಶಾಂತಿ ಭಂಗವಾಗುವಂತಹ ಕೃತ್ಯಗಳು ನಡೆದಿಲ್ಲ. ಸಂಘವು ಶಿಸ್ತು, ಸಂಯಮ ಮತ್ತು ದೇಶಭಕ್ತಿಗೆ ಹೆಸರಾದ ಸಂಘಟನೆ. ತನ್ನ ಕಾರ್ಯಕ್ರಮಗಳಲ್ಲಿ ನಿಯಮ ಪಾಲಿಸಲು ರಾಜ್ಯ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ’ ಎಂದರು.
‘ತಹಶೀಲ್ದಾರ್ ಕ್ರಮವು, ಅರ್ಜಿದಾರರಿಗೆ ಸಂವಿಧಾನ ಕೊಡಮಾಡಿರುವ 19(1) ಎ ಹಾಗೂ 21ನೇ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಮಾತ್ರವಲ್ಲ, ಪಥಸಂಚಲನಕ್ಕೆ ಪೂರ್ವಾನುಮತಿ ಪಡೆಯಲು ಸಂವಿಧಾನದ ಯಾವುದೇ ಭಾಗದಲ್ಲೂ ನಿಯಮ ವಿಧಿಸಿಲ್ಲ’ ಎಂದು ವಿವರಿಸಿದರು.
ಇದನ್ನು ಅಲ್ಲಗಳೆದ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ (ಎಜಿ) ಕೆ.ಶಶಿಕಿರಣ ಶೆಟ್ಟಿ, ‘ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ಉದ್ದೇಶಿಸಿದ್ದ ದಿನವೇ (ಅ.19) ಭೀಮ್ ಆರ್ಮಿ ಮತ್ತು ಭಾರತೀಯ ದಲಿತ ಪ್ಯಾಂಥರ್ ಸಂಘಟನೆಗಳೂ ಅದೇ ಸ್ಥಳದಲ್ಲಿ ಸಮಾವೇಶ ನಡೆಸಲು ಉದ್ದೇಶಿಸಿರುವ ಕಾರಣ ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ತಹಶೀಲ್ದಾರ್ ಅನುಮತಿ ನಿರಾಕರಿಸಿದ್ದಾರೆ’ ಎಂದು ಸಮರ್ಥಿಸಿಕೊಂಡರು.
ಇದಕ್ಕೆ ನ್ಯಾಯಪೀಠ, ‘ಪಥಸಂಚಲನಕ್ಕೆ ಯಾವ ಕಾನೂನಿನಡಿ ಯಾವ ಪ್ರಾಧಿಕಾರದಲ್ಲಿ ಅನುಮತಿ ಕೋರಬೇಕು ಎಂಬ ಕಾನೂನಿನ ಜಿಜ್ಞಾಸೆ ಇದರಲ್ಲಿ ಅಡಗಿದೆ. ಗುಂಪೊಂದು ಪಂಥಸಂಚಲನ ನಡೆಸಲು ಅವಕಾಶವಿದೆಯೇ? ಅದು ಪ್ರತಿಭಟನೆಯೇ ಆಗಿರಬೇಕೆಂದೇನಿಲ್ಲವಲ್ಲಾ, ಜನರಲ್ಲಿ ಜಾಗೃತಿ ಮೂಡಿಸುವ ಇಚ್ಛೆಯನ್ನೂ ಹೊಂದಿರಬಹುದಲ್ಲವೇ? ಇದಕ್ಕೆಲ್ಲಾ ಪೂರ್ವಾನುಮತಿ ಬೇಕೆ? ಹಾಗಾದರೆ ಯಾರಿಂದ ಪಡೆಯಬೇಕು? ಇದಕ್ಕೆಂದೇ ಯಾವ ಕಾನೂನು ಜಾರಿಯಲ್ಲಿದೆ’ ಎಂದು ಶಶಿಕಿರಣ ಶೆಟ್ಟಿ ಅವರನ್ನು ಪ್ರಶ್ನಿಸಿತು.
ಇದಕ್ಕೆ ಎಜಿ, ‘ಬೆಂಗಳೂರಿನಲ್ಲಿ ಪ್ರತಿಭಟನೆ, ರ್‍ಯಾಲಿ, ಸಮಾವೇಶ ನಡೆಸುವುದಕ್ಕೆ ಸಂಬಂಧಿಸಿದಂತೆ 2021ರ ಅಕ್ಟೋಬರ್ 29ರಂದು ಹೊರಡಿಸಲಾಗಿರುವ ಆದೇಶ ಜಾರಿಯಲ್ಲಿದೆ. ಇದರ ನಿಬಂಧನೆಗಳನ್ನು ರಾಜ್ಯದ ಬೇರೆಡೆಗೂ ಅನ್ವಯಿಸಬಹುದು. ಕರ್ನಾಟಕ ಪೊಲೀಸ್ ಕಾಯ್ದೆ-1963ರ ಕಲಂ 31, 35 ಮತ್ತು 64 ಇದಕ್ಕೆ ಪೂರಕವಾಗಿವೆ. ಇದನ್ನು ಹೊರತುಪಡಿಸಿ ಮನವಿ ಪರಿಗಣಿಸಲು ಯಾವುದೇ ಕಾಯ್ದೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ನ್ಯಾಯಪೀಠ, ‘ಬೇರೊಂದು ದಿನ ಪಥಸಂಚಲನ ನಡೆಸಲು ಸಾಧ್ಯವೇ’ ಎಂದು ಅರುಣ್ ಶ್ಯಾಮ್ ಅವರನ್ನು ಪ್ರಶ್ನಿಸಿತು. ಇದಕ್ಕೆ ಅರುಣ್ ಶ್ಯಾಮ್, ‘ಬರುವ ನವೆಂಬರ್ 2ರಂದು ಆಗಬಹುದು’ ಎಂದರು.
ಇದಕ್ಕೆ ಶಶಿಕಿರಣ ಶೆಟ್ಟಿ, ‘ಕಾರ್ಯಕ್ರಮ ನಡೆಸಲು ನಿರ್ದಿಷ್ಟ ಪ್ರದೇಶ ಗೊತ್ತು ಮಾಡಲಾಗುವುದು’ ಎಂದರು.
ಇದನ್ನು ಆಕ್ಷೇಪಿಸಿದ ಅರುಣ್ ಶ್ಯಾಮ್, ‘ಈಗಾಗಲೇ ಸಲ್ಲಿಸಿರುವ ನಮ್ಮ ಈ ಮೊದಲಿನ ಪಥಸಂಚಲದ ಮಾರ್ಗವನ್ನೇ ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದರು. ಶಶಿಕಿರಣ ಶೆಟ್ಟಿ, ‘ಸರ್ಕಾರ ಈ ವಿಚಾರವನ್ನು ಪರಿಶೀಲಿಸಲಿದೆ’ ಎಂದರು.
ಸುದೀರ್ಘ ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಅರ್ಜಿದಾರರು ಪಥಸಂಚಲನಕ್ಕೆ ಅನುಮತಿ ಕೋರಿ ಕಲಬುರಗಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಮತ್ತು ಸ್ಥಳೀಯ ಸಕ್ಷಮ ಠಾಣೆಯ ಪೊಲೀಸರಿಗೆ ಹೊಸದಾಗಿ ಮನವಿ ಸಲ್ಲಿಸಬೇಕು. 2025ರ ಅಕ್ಟೋಬರ್ 18ರಂದು ತಹಶೀಲ್ದಾರ್ ಎತ್ತಿರುವ ವಿಚಾರಗಳಿಗೆ ನಿರ್ದಿಷ್ಟ ಉತ್ತರ ನೀಡಬೇಕು ಮತ್ತು ರಾಜ್ಯ ಸರ್ಕಾರ ಪಥಸಂಚಲನದ ಮಾರ್ಗವನ್ನು ಪರಿಗಣಿಸಿ ಇದೇ 24ಕ್ಕೆ ನ್ಯಾಯಾಲಯಕ್ಕೆ ಈ ಕುರಿತಂತೆ ವರದಿ ಸಲ್ಲಿಸಬೇಕು. ವರದಿ ಆಧರಿಸಿ ಮುಂದಿನ ಕ್ರಮ ನಿರ್ಧರಿಸಲಾಗುವುದು’ ಎಂದು ವಿಚಾರಣೆ ಮುಂದೂಡಿತು.
ಚಿತ್ತಾಪುರ ರಿಪಬ್ಲಿಕ್‌ನ ‘ರಜಾಕ’ರಿಗೆ ಹೈಕೋರ್ಟ್ ಚಾಟಿ ಬೀಸಿದೆ. ಚಿತ್ತಾಪುರ ದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ವಿಧಿಸಿದ್ದ ನಿಷೇಧವನ್ನು ಹೈಕೋರ್ಟ್ ರದ್ದು ಮಾಡಿ, ನವೆಂಬರ್ 2 ರಂದು ನಡೆಸಲು ಅನುಮತಿ ನೀಡಿದೆ. ಜನರು ಮತಭಿಕ್ಷೆ ನೀಡಿ ಗೆಲ್ಲಿಸಿರುವ ಕ್ಷೇತ್ರವನ್ನು ತಮ್ಮದೇ ರಿಪಬ್ಲಿಕ್ ಎಂದು ಭಾವಿಸಿಕೊಂಡು, ದೇಶಭಕ್ತರ ಪಥಸಂಚಲನವನ್ನು ತಡೆಯಲು ಯತ್ನಿಸಿದ ಚಿತ್ತಾಪುರದ ‘ರಜಾಕರ’ ಇಂದು ನ್ಯಾಯದ ಮುಂದೆ ತಲೆಬಾಗಬೇಕಾಗಿದೆ.
ಆರ್.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಗಣವೇಷಧಾರಿ ಆಗಿದ್ದ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ. ಆದರೆ, ಚನ್ನಪಟ್ಟಣದಲ್ಲಿ ನಡೆದ ಕವ್ವಾಲಿಯಲ್ಲಿ ಮೈಮೇಲೆ ನೋಟುಗಳನ್ನು ಸುರಿಸಿಕೊಂಡ ಪೊಲೀಸರ ಮೇಲೇಕೆ ಕ್ರಮ ತೆಗೆದುಕೊಂಡಿಲ್ಲ? ಕಾಂಗ್ರೆಸ್ ಸರ್ಕಾರವು ಪ್ರತಿದಿನ ಆರ್‌ಎಸ್‌ಎಸ್ ಜಪ ಮಾಡುತ್ತಿದೆ. ಇದು, ಆರ್‌ಎಸ್‌ಎಸ್‌ನ ಬಗ್ಗೆ ಚರ್ಚೆ ಮಾಡುವ ಸಂದರ್ಭವೇ? ರಾಜ್ಯದಲ್ಲಿ ಎಷ್ಟೊಂದು ಸಮಸ್ಯೆಗಳಿವೆ. ಅವುಗಳನ್ನು ನಿವಾರಿಸುವುದು ಬಿಟ್ಟು, ಒಂದು ಸಂಘಟನೆ ವಿರುದ್ಧ ಚರ್ಚಿಸುತ್ತಿದ್ದರೆ ಏನು ಉಪಯೋಗ?
ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.