
ಬೆಂಗಳೂರು: ‘ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್ ಎಸ್) ಉದ್ದೇಶಿತ ಪಥಸಂಚಲನವೂ ಸೇರಿದಂತೆ ಮೆರವಣಿಗೆ ನಡೆಸಲು ಕೋರಿರುವ ವಿವಿಧ ಸಂಘಟನೆಗಳಿಗೆ ಬೇರೆ–ಬೇರೆ ದಿನಾಂಕಗಳಲ್ಲಿ ಅನುಮತಿ ನೀಡುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.
‘ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿ ಕೋರಿರುವ ಮನವಿ ಪರಿಗಣಿಸಲು ಜಿಲ್ಲಾಡಳಿತಕ್ಕೆ ನಿರ್ದೇಶಿಸಬೇಕು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಲಬುರಗಿ ಜಿಲ್ಲಾ ಸಂಚಾಲಕ ಅಶೋಕ್ ಪಾಟೀಲ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ (ಕಲಬುರಗಿ) ಶುಕ್ರವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಾಜರಾಗಿದ್ದ ಪದಾಂಕಿತ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, ‘ನ್ಯಾಯಪೀಠ ಈ ಹಿಂದಿನ ವಿಚಾರಣೆ ವೇಳೆ ನೀಡಿದ್ದ ಸಲಹೆಯ ಅನುಸಾರ ನವೆಂಬರ್ 5ರಂದು ಬೆಂಗಳೂರಿನ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ಶಾಂತಿಸಭೆ ನಡೆದಿದೆ. ನಾವು ಈ ಸಭೆಯಲ್ಲಿ ಭಾಗಿಯಾಗಿ ನಮ್ಮ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರ ತನ್ನ ನಿರ್ಧಾರ ಪ್ರಕಟಿಸಬೇಕಿದೆಯಷ್ಟೇ’ ಎಂದರು.
ಇದಕ್ಕೆ ಉತ್ತರಿಸಿದ ಶಶಿಕಿರಣ್ ಶೆಟ್ಟಿ, ‘ಮನವಿ ಸಲ್ಲಿಸಿರುವ ಎಲ್ಲ ಸಂಘಟನೆಗಳಿಗೂ ಒಂದು ವಾರದೊಳಗೆ ಅನುಮತಿ ನೀಡಲಾಗುವುದು. ಯಾವ್ಯಾವ ದಿನ ಅವರಿಗೆ ಅವಕಾಶ ನೀಡಲಾಗುವುದು ಎಂಬುದನ್ನು ಲಿಖಿತವಾಗಿ ತಿಳಿಸಲಾಗುವುದು. ಅದಕ್ಕಾಗಿ ಒಂದು ವಾರ ಕಾಲಾವಕಾಶ ನೀಡಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದಕ್ಕೆ ಅರುಣ್ ಶ್ಯಾಮ್, ‘ನಮಗೆ ನವೆಂಬರ್ 13 ಅಥವಾ 16ರಂದು ಅನುಮತಿ ನೀಡಿದರೆ ಅನುಕೂಲವಾಗುತ್ತದೆ. ಸಭೆ ನಡೆಸಲು ಕಲ್ಯಾಣ ಮಂಟಪವನ್ನು ಈಗಾಗಲೇ ಕಾಯ್ದಿರಿಸಲಾಗಿದ್ದು, ನಾವು ಕೇಳಿರುವ ಎರಡು ದಿನಗಳಲ್ಲಿ ಮಾತ್ರವೇ ಕಲ್ಯಾಣ ಮಂಟಪ ಬಳಕೆಗೆ ಲಭ್ಯವಿದೆ’ ಎಂದರು.
‘ದೇಶದಲ್ಲಿ ಎಲ್ಲ ಕಡೆ ಪಥಸಂಚಲನ ನಡೆಸಲಾಗಿದೆ. ಎಲ್ಲೂ ಸಮಸ್ಯೆ ಆಗಿಲ್ಲ. ಕರ್ನಾಟಕದಲ್ಲೂ ಸರಿಸುಮಾರು 500 ಕಡೆಗಳಲ್ಲಿ ನಡೆಸಲಾಗಿದೆ. ಚಿತ್ತಾಪುರ ಒಂದು ಮಾತ್ರವೇ ಬಾಕಿ ಇದೆ. ಒಂದು ವೇಳೆ ಅನುಮತಿ ನೀಡುವ ನಿಟ್ಟಿನಲ್ಲಿ ನ್ಯಾಯಪೀಠವೇ ನ್ಯಾಯಾಂಗ ತೀರ್ಮಾನ ಪ್ರಕಟಿಸುವುದಾದರೆ ಉಲ್ಲೇಖಿಸಬಹುದಾದ ಇತ್ತೀಚಿನ ಮೂರು ಹೈಕೋರ್ಟ್ ತೀರ್ಪುಗಳಿವೆ’ ಎಂದು ಅವುಗಳ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಉದ್ದೇಶಿತ ಪಥಸಂಚಲನಕ್ಕೆ ಅನುಮತಿ ನೀಡುವ ಬಗ್ಗೆ ಸರ್ಕಾರ ತನ್ನ ನಿರ್ಧಾರವನ್ನು ಇದೇ 13ರ ಮಧ್ಯಾಹ್ನ 2.30ಕ್ಕೆ ತಿಳಿಸಬೇಕು’ ಎಂದು ಆದೇಶಿಸಿ ವಿಚಾರಣೆ ಮುಂದೂಡಿತು.
ಒಂದು ಹಂತದಲ್ಲಿ ನ್ಯಾಯಪೀಠ, ‘ಇದೇ 13ರ ಒಳಗಾಗಿ ನೀವೇ ಸೂಕ್ತ ಆದೇಶ ಮಾಡುತ್ತೀರೋ ಅಥವಾ ಅಥವಾ ನಾವೇ ನ್ಯಾಯಾಂಗ ಆದೇಶ ಹೊರಡಿಸಬೇಕಾ’ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು. ಇದಕ್ಕೆ ಅಡ್ವೊಕೇಟ್ ಜನರಲ್, ‘ಸರ್ಕಾರವೇ ಸೂಕ್ತ ತೀರ್ಮಾನ ಕೈಗೊಳ್ಳಲಿದೆ’ ಎಂದು ಭರವಸೆ ನೀಡಿದರು.
ಪಥಸಂಚಲನ ಮತ್ತು ಮೆರವಣಿಗೆಗೆ ಅನುಮತಿ ಕೋರಿರುವ ಎಲ್ಲ ಸಂಘಟನೆಗಳ ಜತೆ ನವೆಂಬರ್ 5ರಂದು ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ನಡೆಸಲಾಗಿರುವ ಶಾಂತಿಸಭೆ ಫಲಪ್ರದವಾಗಿದೆ.ನ್ಯಾ.ಎಂ.ಜಿ.ಎಸ್.ಕಮಲ್
ಅರ್ಜಿಯಲ್ಲಿ ಏನಿದೆ?
‘2025ರ ಅಕ್ಟೋಬರ್ 19ರಂದು ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದಿಂದ ಶುರುವಾಗಿ ಪುನಃ ಅಲ್ಲಿಗೇ ಮರಳುವಂತೆ ಪಥಸಂಚಲನ ಮತ್ತು ಆನಂತರದ ಸಾರ್ವಜನಿಕ ಸಮಾವೇಶ ನಡೆಸಲು ಅನುಮತಿ ನೀಡಬೇಕು’ ಎಂದು ಕೋರಿ ಅಶೋಕ್ ಪಾಟೀಲ್ ಅಕ್ಟೋಬರ್ 13ರಂದು ತಹಶಿಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಅಕ್ಟೋಬರ್ 18ರಂದು ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಆರ್‌ಎಸ್‌ಎಸ್ ಹೈಕೋರ್ಟ್ ಮೆಟ್ಟಿಲೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.