ADVERTISEMENT

ಪಂಚಮಸಾಲಿಗಳಿಗೆ ಆರ್‌ಎಸ್‌ಎಸ್‌ ಮೀಸಲು ಕೊಡಿಸಲಿ: ಜಯಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 11:48 IST
Last Updated 21 ಜನವರಿ 2021, 11:48 IST
ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧಿಪತಿ ಜಯಮೃತ್ಯುಂಜಯ ಸ್ವಾಮೀಜಿ
ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧಿಪತಿ ಜಯಮೃತ್ಯುಂಜಯ ಸ್ವಾಮೀಜಿ   

ಹೊಸಪೇಟೆ: ‘ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯದ ಬೆಂಬಲಕ್ಕೆ ನಿಂತು ಅವರಿಗೆ ಮೀಸಲಾತಿ ಕೊಡಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು (ಆರ್‌ಎಸ್‌ಎಸ್‌) ರಾಜ್ಯದಲ್ಲಿ ಪಂಚಮಸಾಲಿ ಸಮಾಜದವರಿಗೆ 2ಎ ಮೀಸಲು ಒದಗಿಸಿಕೊಡಲು ಶ್ರಮಿಸಬೇಕು’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸುವಂತೆ ಒತ್ತಾಯಿಸಿ ಅವರು ಕೈಗೊಂಡಿರುವ ಪಾದಯಾತ್ರೆ ಗುರುವಾರ ನಗರ ಹೊರವಲಯ ತಲುಪಿತು. ಈ ವೇಳೆ ಸುದ್ದಿಗೋಷ್ಠಿ ನಡೆಸಿದ ಅವರು, ‘ನಮ್ಮ ಹೋರಾಟವನ್ನು ಬೆಂಬಲಿಸುವಂತೆ ಈಗಾಗಲೇ ಆರ್‌ಎಸ್‌ಎಸ್‌ನವರಿಗೆ ಮನವಿ ಮಾಡಲಾಗಿದೆ. ಅದಕ್ಕವರು ಸ್ಪಂದಿಸಿ ಸರ್ಕಾರದ ಮೂಲಕ ಮೀಸಲು ಸೌಲಭ್ಯ ಕೊಡಿಸಬೇಕು’ ಎಂದು ಹೇಳಿದರು.

‘ನಮ್ಮ ಹೋರಾಟದಲ್ಲಿ ಯಾವುದೇ ಗೊಂದಲವಿಲ್ಲ. ಬರಲಿರುವ ಜನಗಣತಿಯಲ್ಲಿ ಲಿಂಗಾಯತರೆಲ್ಲರೂ ಧರ್ಮದ ಕಾಲಂನಲ್ಲಿ ಲಿಂಗಾಯತ, ಜಾತಿ ಕಾಲಂನಲ್ಲಿ ಅವರ ಉಪಪಂಗಡಗಳ ಹೆಸರು ಬರೆಸಬೇಕು. ಈ ಪಾದಯಾತ್ರೆ ತಾರ್ಕಿಕ ಅಂತ್ಯ ಕಂಡ ನಂತರ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಮುಂದುವರೆಯಲಿದೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಪಾದಯಾತ್ರೆಯು ಜ. 28ರಂದು ಹರಿಹರ ತಲುಪಲಿದೆ. ಅಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪಂಚಮಸಾಲಿ ಸಮಾಜದ ಎಲ್ಲ ಶಾಸಕರು ಕಡ್ಡಾಯವಾಗಿ ಆ ಸಭೆಗೆ ಬಂದು ಅವರ ನಿಲುವು ತಿಳಿಸಬೇಕೆಂದು ಕೋರಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.