ದಾಬಸ್‌ಪೇಟೆ/ನೆಲಮಂಗಲ: ಕೇಂದ್ರದ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ, ಅವರ ಪುತ್ರ, ಭದ್ರತಾ ಸಿಬ್ಬಂದಿ, ಚಾಲಕ ಹಾಗೂ ಮತ್ತೊಂದು ಕಾರಿನ ಪ್ರಯಾಣಿಕರ ಮಧ್ಯೆ ಕಾರನ್ನು ಹಿಂದಿಕ್ಕಿದ ವಿಚಾರಕ್ಕೆ ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಹಳೇ ನಿಜಗಲ್ ಬಳಿ ಸೋಮವಾರ ಗಲಾಟೆ ನಡೆದಿದೆ.
ಅನಂತ್ ಕುಮಾರ್ ಹೆಗಡೆ ಅವರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಹೆಗಡೆ ಅವರು ಪ್ರಯಾಣಿಸುತ್ತಿದ್ದ ಕಾರನ್ನು ಮತ್ತೊಂದು ಕಾರು ಹಿಂದಿಕ್ಕಿತ್ತು ಎಂಬ ವಿಚಾರಕ್ಕೆ ಗಲಾಟೆ ಆಗಿದೆ ಎಂದು ಮೂಲಗಳು ತಿಳಿಸಿವೆ.
ಅನಂತ್ ಕುಮಾರ್ ಹೆಗಡೆ, ಕಾರು ಚಾಲಕ ಮಹೇಶ್, ಭದ್ರತಾ ಸಿಬ್ಬಂದಿ ಶ್ರೀಧರ್ ಮತ್ತು ಅನಂತ್ ಕುಮಾರ್ ಅವರ ಪುತ್ರ ಆಶುತೋಷ್ ಹಾಗೂ ಮತ್ತೊಂದು ಕಾರಿನಲ್ಲಿದ್ದ ಸಲ್ಮಾನ್, ಸೈಫ್, ಇಲಿಯಾಜ್ ಖಾನ್, ಗುಲಷಿರ್ ಉನ್ನೀಸಾ ಅವರ ಮಧ್ಯೆ ಗಲಾಟೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ದಾಬಸ್‌ಪೇಟೆ ಬಳಿ ಕಾರು ನಿಲುಗಡೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಸಲ್ಮಾನ್ ಆರೋಪಿಸಿದ್ದಾರೆ.
ಹಲ್ಲೆಯಿಂದ ಗಾಯಗೊಂಡವರನ್ನು ದಾಬಸ್‌ಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೆ ಒಳಗಾದವರು ಅನಂತ ಕುಮಾರ್ ಹೆಗಡೆ, ಕಾರು ಚಾಲಕ ಹಾಗೂ ಭದ್ರತಾ ಸಿಬ್ಬಂದಿ ವಿರುದ್ಧ ದೂರು ನೀಡಿದ್ದಾರೆ. ನೆಲಮಂಗಲ ಡಿವೈಎಸ್‌ಪಿ ಕಚೇರಿಯಲ್ಲಿ ಮೂವರನ್ನು ವಿಚಾರಣೆ ನಡೆಸಿದ್ದು ದೂರು ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ಹಲ್ಲೆ ಮಾಡಿಲ್ಲ’:
‘ಕಾರಿನಲ್ಲಿ ಬೆಂಗಳೂರಿಗೆ ಬರುತ್ತಿದ್ದೆವು. ಹಳೇ ನಿಜಗಲ್ ಬಳಿ ಇನೊವಾ ಕಾರೊಂದು ನಮ್ಮ ಕಾರನ್ನು ಹಿಂದಿಕ್ಕುವ ವೇಳೆ ತಾಗಿತ್ತು. ನಮ್ಮ ಕಾರು ಚಾಲಕ ಪ್ರಶ್ನೆ ಮಾಡಿದ್ದ. ಆಗ ವಾಗ್ವಾದ ನಡೆದಿದೆ. ಯಾರ ಮೇಲೂ ಹಲ್ಲೆ ನಡೆಸಿಲ್ಲಎಂಬುದಾಗಿ ಅನಂತ್ ಕುಮಾರ್ ಹೆಗಡೆ ಅವರು ಪೊಲೀಸರಿಗೆ ತಿಳಿಸಿದ್ದಾರೆ’ ಎಂದು ಮೂಲಗಳು ಹೇಳಿವೆ. ಹಲ್ಲೆ ನಡೆಸುತ್ತಿರುವ ಹಾಗೂ ಭದ್ರತಾ ಸಿಬ್ಬಂದಿ ರಿವಾಲ್ವರ್ ಹಿಡಿದುಕೊಂಡಿದ್ದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ಮದುವೆ ಮುಗಿಸಿಕೊಂಡು ತುಮಕೂರಿನಿಂದ ಹಾಲೇನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದೆವು. ಆಗ ಘಟನೆ ನಡೆದಿದೆ. ಹಲ್ಲೆಯಿಂದ ಹಲ್ಲು ಮುರಿದಿದೆ. ಮುಖಕ್ಕೆ ಪೆಟ್ಟು ಬಿದ್ದಿದೆ’ ಎಂದು ಹಲ್ಲೆಗೆ ಒಳಗಾದ ಸಲ್ಮಾನ್ ಖಾನ್ ಆರೋಪಿಸಿದ್ದಾರೆ.
ಠಾಣೆ ಬಳಿ ಬಂದ ಜನರು:
ಘಟನೆಯ ವಿಚಾರ ತಿಳಿಯುತ್ತಿದ್ದಂತೆಯೇ ಸಲ್ಮಾನ್ ಹಾಗೂ ಅನಂತ್‌ಕುಮಾರ್ ಹೆಗಡೆ ಬೆಂಬಲಿಗರು ಠಾಣೆಯ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಠಾಣೆಯ ಎದುರು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.