ADVERTISEMENT

ಗೌಡರ ಬಾಹುಬಲದಿಂದ ಮೋದಿ ತಡೆ ಸಾಧ್ಯವೇ: ಕೃಷ್ಣ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 17:35 IST
Last Updated 16 ಏಪ್ರಿಲ್ 2019, 17:35 IST
ಎಸ್‌.ಎಂ.ಕೃಷ್ಣ
ಎಸ್‌.ಎಂ.ಕೃಷ್ಣ   

ಬೆಂಗಳೂರು: ‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ತಮ್ಮ ಬಾಹುಬಲದಿಂದ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗದಂತೆ ತಡೆಯಲು ಸಾಧ್ಯವೇ’ ಎಂದು ಬಿಜೆಪಿಯ ಹಿರಿಯ ನಾಯಕ ಎಸ್‌.ಎಂ.ಕೃಷ್ಣ ಪ್ರಶ್ನಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗೌಡರದ್ದು ಹಾಸ್ಯಾಸ್ಪದ ಹೇಳಿಕೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದರು.

ಪ್ರಚಾರದ ವೇಳೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಣ್ಣೀರು ಹಾಕಿದ್ದನ್ನು ಪ್ರಸ್ತಾಪಿಸಿದ ಅವರು, ‘ನಾನೂ ಕೂಡ ಕಣ್ಣೀರು ಹಾಕಬೇಕು ಎಂದು ಪ್ರಯತ್ನಿಸುತ್ತೇನೆ. ಆದರೆ, ಕಣ್ಣೀರು ಬರುವುದೇ ಇಲ್ಲ. ಕೆಲವರಿಗೆ ಸಲೀಸಾಗಿ ಕಣ್ಣೀರು ಬರುತ್ತದೆ. ಹಾಗಾಗಿ ಅವರು ಸಿಕ್ಕಾಗ ಕಣ್ಣೀರಿನ ರಹಸ್ಯ ಏನು ಎಂದು ತಿಳಿದುಕೊಳ್ಳಬೇಕು ಎಂದುಕೊಂಡಿದ್ದೇನೆ. ಬಹುಶಃ ಅವರ ಹೃದಯ ಮಿಡಿಯುತ್ತದೆ. ಒಬ್ಬ ತಂದೆಯ ಹೃದಯ ಮಕ್ಕಳಿಗಾಗಿ ಅಷ್ಟೂ ಮಿಡಿಯದಿದ್ದರೆ ಹೇಗೆ. ಹಾಗಾಗಿ ಅವರಿಗೆ ಕಣ್ಣೀರು ಸಲೀಸಾಗಿ ಬರುತ್ತದೆ’ ಎಂದು ಅವರು ಲೇವಡಿ ಮಾಡಿದರು.

ADVERTISEMENT

‘ಕಾಂಗ್ರೆಸ್‌ನವರು ನ್ಯಾಯ್‌ ಯೋಜನೆ ಅನುಷ್ಠಾನಕ್ಕೆ ಸಂಪನ್ಮೂಲ ಕ್ರೋಡೀಕರಣ ಹೇಗೆ ಮಾಡುತ್ತಾರೆ ಎಂಬುದೇ ಪ್ರಶ್ನೆ. ಅಧಿಕಾರಕ್ಕೆ ಬರುವ ವಿಶ್ವಾಸ ಇಲ್ಲದ ಕಾರಣಕ್ಕೆ ಕಾಂಗ್ರೆಸ್‌ ಈ ಯೋಜನೆ ಘೋಷಿಸಿದೆ. ಅನುಷ್ಠಾನ ಮಾಡುವ ಪ್ರಮೇಯವೇ ಎದುರಾಗುವುದಿಲ್ಲ ಅಲ್ಲವೇ’ ಎಂದು ಕೃಷ್ಣ ವ್ಯಂಗ್ಯವಾಡಿದರು.

ರಾಹುಲ್‌ ಅಪ್ರಬುದ್ಧ: ‘ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅಪ್ರಬುದ್ಧರಾಗಿದ್ದು, ಯಾವುದೇ ವಿಷಯಗಳನ್ನು ವಿಮರ್ಶಿಸದೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆ ಪಕ್ಷದಲ್ಲಿರುವ ಪ್ರಬುದ್ಧರು ರಾಹುಲ್‌ಗೆ ಬುದ್ಧಿ ಹೇಳುತ್ತಿಲ್ಲ’ ಎಂದರು.

‘125 ವರ್ಷ ಇತಿಹಾಸವಿರುವ ಪಕ್ಷದ ಅಧ್ಯಕ್ಷರಾಗಿರುವ ರಾಹುಲ್‌, ಯಾವುದೇ ಹೇಳಿಕೆ ನೀಡುವ ಮೊದಲು ಅದರ ಬಗ್ಗೆ ವಿಮರ್ಶೆ ಮಾಡುತ್ತಿಲ್ಲ. ಇಂತಹ ಹೇಳಿಕೆ ನೀಡುವ ಮೂಲಕ ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿಯಾಗಿ ನ್ಯಾಯಾಲಯದಲ್ಲಿ ನಿಲ್ಲಬೇಕಾದ ಸಂಕಷ್ಟದ ‍ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ರಾಷ್ಟ್ರೀಯ ಪಕ್ಷವೊಂದು ಯಾವ ಸ್ಥಿತಿಗೆ ಇಳಿದಿದೆ ಎಂಬುದಕ್ಕೆ ಇದು ದ್ಯೋತಕ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.