ADVERTISEMENT

ಸಾಹಿತಿ ಬರಗೂರು ರಾಮಚಂದ್ರಪ್ಪ ಮನೆ ಈಗ ಮಿನಿ‌ ಮ್ಯೂಸಿಯಂ

ರಾಮಚಂದ್ರಪ್ಪ ಪೂರ್ವಿಕರ ಮನೆ ನವೀಕರಣ l ‘ತೊಟ್ಟಿಲು’ ತುಂಬಿದ ಪುಸ್ತಕ, ಪ್ರಶಸ್ತಿ, ಫಲಕ,

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 2:55 IST
Last Updated 16 ಫೆಬ್ರುವರಿ 2023, 2:55 IST
ಮ್ಯೂಸಿಯಂ ಒಳನೋಟ
ಮ್ಯೂಸಿಯಂ ಒಳನೋಟ   

ಶಿರಾ: ತಾಲ್ಲೂಕಿನ ಬರಗೂರು ಗ್ರಾಮದಲ್ಲಿರುವ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಹುಟ್ಟಿ ಬೆಳೆದ ಹಳೆಯ ಮನೆಯನ್ನು ಮಿನಿ‌ ಮ್ಯೂಸಿಯಂ ಆಗಿ ಮಾರ್ಪಾಡು ಮಾಡಲಾಗಿದ್ದು, ಅದಕ್ಕೆ ‘ತೊಟ್ಟಿಲು’ ಎಂದು ನಾಮಕರಣ ಮಾಡಲಾಗಿದೆ.

ನಾಡೋಜ ಡಾ.ಬರಗೂರು ಪ್ರತಿಷ್ಠಾನ ಬುಧವಾರ ಹಮ್ಮಿಕೊಂಡಿದ್ದ ಮ್ಯೂಜಿಯಂ ಉದ್ಘಾಟನೆ ಕಾರ್ಯಕ್ರಮದಿಂದ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಚಿತ್ರನಟರಾದ ಸುಂದರರಾಜ್, ಕುಮಾರ್ ಗೋವಿಂದ್, ನಟಿ ರೇಖಾ, ಸಾಹಿತಿ ಡಾ.ರಾಜಪ್ಪ ದಳವಾಯಿ, ಗಾಯಕಿ ಡಾ.ಶಮಿತಾ ಮಲ್ನಾಡ್ ಬಂದು ಶುಭ ಕೋರಿದರು.

ರಾಮಚಂದ್ರಪ್ಪ ಅವರ ಪೂರ್ವಿಕರ ಮನೆಯನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ ಪ್ರತಿಷ್ಠಾನವು ಹಳೆಯ ಕಟ್ಟಡವನ್ನು ಸಂಪೂರ್ಣ ನವೀಕರಣಗೊಳಿಸಿ ಹೊಸ ರೂಪ ನೀಡಿದೆ. ಇದು ಗ್ರಾಮಸ್ಥರು ಹಾಗೂ ಸಾಹಿತ್ಯಾಸಕ್ತರಲ್ಲಿ ಸಂತಸ ಮೂಡಿಸಿದೆ.

ADVERTISEMENT

ಬರಗೂರು ಅವರ ಬದುಕು, ಬರಹ ಮತ್ತು ಸಾಧನೆ ಬಿಂಬಿಸುವ ಜೊತೆಗೆ ಸಾಂಸ್ಕೃತಿಕ ಪರಿಕಲ್ಪನೆಯ ಪ್ರಯೋಗಾಲಯವನ್ನಾಗಿ ಈ ಮ್ಯೂಸಿಯಂ ರೂಪಿಸಲಾಗಿದೆ. ಅವರಿಗೆ ದೊರೆತ ಪ್ರಶಸ್ತಿ, ಪಾರಿತೋಷಕ, ಗಣ್ಯ ವ್ಯಕ್ತಿಗಳ ಒಡನಾಟದ ಅಪರೂಪದ ಫೋಟೊಗಳು, ರಚಿಸಿರುವ ಪುಸ್ತಕ, ಚಲನಚಿತ್ರಗಳಿಗೆ ದೊರೆತ ಪ್ರಶಸ್ತಿ, ಫಲಕಗಳು ತೊಟ್ಟಿಲನ್ನು ಅಲಂಕರಿಸಿವೆ.

‘ಮುಂದಿನ ದಿನಗಳಲ್ಲಿ ಬರಗೂರು ಅವರಿಗೆ ಸಂಬಂಧಿಸಿದ ಅಪರೂಪದ ವಸ್ತುಗಳ ಜೊತೆಗೆ ಅವರ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿ ದೊರೆಯುವಂತೆ ಮಾಡುವ ಯೋಚನೆ ಇದೆ. ಸಾಹಿತ್ಯ ಚಟುವಟಿಕೆಯ ಕೇಂದ್ರವನ್ನಾಗಿ ಈ ಮ್ಯೂಸಿಯಂ ಅನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ಪ್ರತಿಷ್ಠಾನ ಹೇಳಿದೆ.

ಮತ್ತೆ ಬರಗೂರು ಅಸ್ವಸ್ಥ– ಚೇತರಿಕೆ
ಬರಗೂರು ಗ್ರಾಮದಲ್ಲಿ ನಡೆದ ಮ್ಯೂಸಿಯಂ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಬರಗೂರು ರಾಮಚಂದ್ರಪ್ಪ ಅಸ್ವಸ್ಥಗೊಂಡರು.

ಊಟದ ನಂತರ ಅವರಲ್ಲಿ ಸುಸ್ತು ಕಾಣಿಸಿಕೊಂಡು, ನಿತ್ರಾಣಗೊಂಡರು. ತಕ್ಷಣ ಕುಟುಂಬದ ಸದಸ್ಯರು ಹಾಗೂ ಇತರರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಚಿಕಿತ್ಸೆ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತು. ಹರಿಹರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಅವರು ಇದೇ ರೀತಿ ಹಠಾತ್‌ ಅಸ್ವಸ್ಥಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.