ADVERTISEMENT

ಪ್ರೊ. ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2024, 15:48 IST
Last Updated 18 ಡಿಸೆಂಬರ್ 2024, 15:48 IST
<div class="paragraphs"><p>ಕೆ.ವಿ.ನಾರಾಯಣ</p></div>

ಕೆ.ವಿ.ನಾರಾಯಣ

   

ನವದೆಹಲಿ: ಹಿರಿಯ ಭಾಷಾ ವಿದ್ವಾಂಸ ಹಾಗೂ ಸಂಶೋಧಕ ಪ್ರೊ.ಕೆ.ವಿ.ನಾರಾಯಣ ಅವರ ‘ನುಡಿಗಳ ಅಳಿವು’ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ 2024ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದೆ. 

ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಾಧವ್‌ ಕೌಶಿಕ್ ಅವರು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿ 21 ಭಾಷೆಗಳ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಪ್ರಕಟಿಸಿದರು. ಪ್ರಶಸ್ತಿಯು ₹1 ಲಕ್ಷ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ನವದೆಹಲಿಯಲ್ಲಿ ಮಾರ್ಚ್‌ 8ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 

ADVERTISEMENT

ಕನ್ನಡ ವಿಭಾಗಕ್ಕೆ ವಿದ್ವಾಂಸ ಓ.ಎಲ್‌.ನಾಗಭೂಷಣಸ್ವಾಮಿ, ಹಳೆಮನೆ ರಾಜಶೇಖರ್ ಹಾಗೂ ಸರಜೂ ಕಾಟ್ಕರ್‌ ಜ್ಯೂರಿಗಳಾಗಿದ್ದರು. 

ಪ್ರೊ.ಕೆ.ವಿ.ನಾರಾಯಣ ಅವರು ಮೂಲತಃ ಪಿರಿಯಾಪಟ್ಟಣದ ಕಂಪಲಾಪುರದವರು. ಆರಂಭಿಕ ಶಿಕ್ಷಣವನ್ನು ತಮ್ಮ ಊರಿನಲ್ಲಿ ಪಡೆದರು. ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿನತ್ತ ಹೊರಟರು. ಆ ಹೊತ್ತಿಗೆ ಸಾಹಿತ್ಯದ ಗೀಳು ಅಂಟಿಸಿಕೊಂಡು ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದ ಕೆವಿಎನ್ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಎಂ.ಎ.ಗೆ ಸೇರಿದರು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪನ ವೃತ್ತಿ ಆರಂಭಿಸಿದ ಅವರು ನಂತರ ಬೆಂಗಳೂರು ವಿಶ್ವವಿದ್ಯಾಲಯದ ಜಿ.ಎಸ್. ಶಿವರುದ್ರಪ್ಪ ಅವರು ಮುಖ್ಯಸ್ಥರಾಗಿದ್ದ ಕನ್ನಡ ಅಧ್ಯಯನ ಕೇಂದ್ರಕ್ಕೆ ಬಂದರು. ಜಿ.ಎಸ್.ಎಸ್ ಮಾರ್ಗದರ್ಶನದಲ್ಲಿ ಆನಂದವರ್ಧನನ ‘ಧ್ವನ್ಯಾಲೋಕ’ವನ್ನು ಅಧ್ಯಯನ ಮಾಡಿ ಪಿಎಚ್. ಡಿ. ಪದವಿ ಪಡೆದರು.

ಬೋಧಿಸಿದ್ದು ಸಾಹಿತ್ಯ, ಸಾಹಿತ್ಯ ಮೀಮಾಂಸೆ ಮತ್ತು ಭಾಷಾವಿಜ್ಞಾನವನ್ನು. ವಿಜ್ಞಾನದ ತಾತ್ವಿಕತೆಯನ್ನು ಇರಿಸಿಕೊಂಡೇ ಕೆವಿಎನ್ ಬೆಳೆದದ್ದು ಸಾಹಿತ್ಯ ವಿಮರ್ಶಕರಾಗಿ, ಭಾಷಾವಿಜ್ಞಾನಿಯಾಗಿ, ಕನ್ನಡ ಸಂಸ್ಕೃತಿಯ ಚಿಂತಕರಾಗಿ. ತಿಳಿವಳಿಕೆ ಮತ್ತು ನಡುವಳಿಕೆ ಎರಡರಲ್ಲೂ ಸರಳವಾಗಿರುವ ಕೆವಿಎನ್‌, 1993ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದ ಶುರುವಿನಲ್ಲೇ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸಿದರು.  ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಬಳಿಕ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

‘ಕನ್ನಡ ಜಗತ್ತು–ಅರ್ಧ ಶತಮಾನ’, ‘ಭಾಷೆಯ ಸುತ್ತಮುತ್ತ’, ಸಾಹಿತ್ಯ ತತ್ವ–ಬೇಂದ್ರೆ ದೃಷ್ಟಿ’, ‘ಧ್ವನ್ಯಾಲೋಕ–ಒಂದು ಅಧ್ಯಯನ’, ‘ನಮ್ಮೊಡನೆ ನಮ್ಮ ನುಡಿ’, ‘ಬೇರು ಕಾಂಡ ಚಿಗುರು’, ‘ಕನ್ನಡ ಶೈಲಿ ಕೈಪಿಡಿ’ ಸೇರಿದಂತೆ 22ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.