ADVERTISEMENT

ಅಧಿಕ ದರಕ್ಕೆ ಪಡಿತರ ಅಕ್ಕಿ ಮಾರಾಟ ಮಾಡಿದರೆ ಕಠಿಣ ಕ್ರಮ: ಸಚಿವ ಗೋಪಾಲಯ್ಯ

ಸಚಿವ ಗೋಪಾಲಯ್ಯ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 11 ಮೇ 2020, 20:00 IST
Last Updated 11 ಮೇ 2020, 20:00 IST
   

ಬೆಂಗಳೂರು: ‘ಸರ್ಕಾರ ನೀಡುತ್ತಿರುವ ಪಡಿತರ ಅಕ್ಕಿಯನ್ನು ಕೆ.ಜಿಗೆ ₹12ರಿಂದ ₹15ಕ್ಕೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ’ ಎಂದು ಹೇಳಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ, ಇದನ್ನು ತಡೆಗಟ್ಟುವುದಕ್ಕಾಗಿ ಕಾನೂನು ರೂಪಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

‘ಸರ್ಕಾರ ಕೋಟ್ಯಂತರ ಹಣ ಖರ್ಚು ಮಾಡಿ ಬಡವರಿಗೆ ಪಡಿತರ ಒದಗಿಸುತ್ತಿದೆ. ಇದನ್ನು ದುರ್ಬಳಕೆ ಮಾಡಿಕೊಳ್ಳುವುದು ತಪ್ಪು. ಇದಕ್ಕೆ ಸಂಬಂಧಿಸಿ ಕಠಿಣ ಕಾನೂನು ತರಲು ಅಧಿಕಾರಿಗಳು ಮತ್ತು ಮುಖ್ಯಮಂತ್ರಿಗಳ ಜತೆ ಮಾತನಾಡುತ್ತೇನೆ’ ಎಂದು ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯ ಮತ್ತು ಕೇಂದ್ರದ ನಾನಾ ಯೋಜನೆ ಅಡಿ ನೀಡುತ್ತಿರುವ ಪಡಿತರವನ್ನು ಮಾರಾಟ ಮಾಡಲು ಯಾರೇ ಯತ್ನಿಸಿದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತ. ಎಷ್ಟೇ ಪ್ರಭಾವಿಗಳಾದರೂ ಅವರನ್ನು ಕ್ಷಮಿಸುವುದಿಲ್ಲ’ ಎಂದು ಎಚ್ಚರಿಸಿದರು.

ADVERTISEMENT

‘ಜನರಿಗೆ ಪಡಿತರ ಧಾನ್ಯ ಬೇಡ ಎಂದಾದರೆ ಅದು ನ್ಯಾಯಬೆಲೆ ಅಂಗಡಿಯಲ್ಲೇ ಇರಲಿ. ಅಗತ್ಯ ಇರುವ ಇತರ ಅದೆಷ್ಟೋ ಮಂದಿಗೆ ಅನುಕೂಲವಾಗುತ್ತದೆ. ಅದನ್ನು ಬಿಟ್ಟು ಯೋಜನೆಯನ್ನು ದುರ್ಬಳಕೆ ಮಾಡುವುದು ಸರಿಯಲ್ಲ’ ಎಂದರು.

499 ಅಂಗಡಿಗಳಿಗೆ ನೋಟಿಸ್‌: 'ಮೇಲ್ನೋಟಕ್ಕೆ ಪಡಿತರ ದುರ್ಬಳಕೆ ಮಾಡಿಕೊಂಡಿರುವುದು ಕಂಡುಬಂದಿರುವ 499 ನ್ಯಾಯಬೆಲೆ ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. 33 ಪರವಾನಗಿಗಳನ್ನು ರದ್ದುಪಡಿಸಲಾಗಿದೆ. ಕಲಬುರ್ಗಿ, ಮೈಸೂರು ಮತ್ತು ದಾವಣಗೆರೆಗಳ ಖಾಸಗಿ ಗೋದಾಮುಗಳ ಮೇಲೆ ನಮ್ಮ ಅಧಿಕಾರಿಗಳು ದಾಳಿ ನಡೆಸಿ ಸಾವಿರಾರು ಕ್ವಿಂಟಲ್ ಅಕ್ಕಿ ವಶಕ್ಕೆ ಪಡೆದಿದ್ದಾರೆ. ಇದು ಪಡಿತರ ಅಕ್ಕಿ ಹೌದೇ, ಅಲ್ಲವೇ ಎಂಬುದನ್ನು ತನಿಖೆ ನಡೆಸಿ ವರದಿ ನೀಡಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.