ಸಂತೋಷ್ ಲಾಡ್, ಪ್ರತಾಪ ಸಿಂಹ
ಮೈಸೂರು: ಮಾಜಿ ಸಂಸದ ಪ್ರತಾಪ ಸಿಂಹ ಅವರು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಜಾತಿ ಪ್ರಸ್ತಾಪಿಸಿ ಟೀಕಾಪ್ರಹಾರ ನಡೆಸಿದರು.
ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮಾತನಾಡುವ ಬಗ್ಗೆ ಜ್ಞಾನವಿದೆಯೇ ಲಾಡ್? ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡದಿದ್ದರೆ ತಿಂದಿದ್ದು ಜೀರ್ಣವಾಗುವುದಿಲ್ಲವೇ? ಮರಾಠಾ ಸಮುದಾಯದ ಅವರ ಬಾಯಲ್ಲಿ ಶಿವಾಜಿ ರೀತಿ ಮಾತು ಬರುತ್ತಿಲ್ಲ. ಅಬ್ದುಲ್ ಖಾನ್ ರೀತಿ ಮಾತು ಬರುತ್ತಿದೆ. ಅವರೊಬ್ಬ ತಿಳಿಗೇಡಿ’ ಎಂದು ಟೀಕಿಸಿದರು.
‘ನೇಹಾ ಹತ್ಯೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಮೋದಿ ಕೇಳ್ರಿ ಅಂತಾರೆ. ಹತ್ಯೆ ಮಾಡಿದವನ ಎನ್‌ಕೌಂಟರ್‌ಗೆ ಮೋದಿ ಅನುಮತಿ ಏಕೆ ಬೇಕು? ಒಂದು ವರ್ಷವಾಯ್ತಲ್ಲಾ, ನೇಹಾಗೆ ನ್ಯಾಯ ಕೊಡಿಸಿದ್ರಾ? ಕಾರ್ಮಿಕ ಇಲಾಖೆಯ ಹೆಲ್ತ್ ಕಿಟ್ ಹಗರಣದ ಕಥೆ ಏನಾಯ್ತು? ಮೋದಿಗೆ ಹೇಳಿಕೊಡುವಷ್ಟು ಬುದ್ಧಿವಂತರಾ ನೀವು?’ ಎಂದು ಕೇಳಿದರು.
‘1971ರಲ್ಲಿ ಇಂದಿರಾ ಗಾಂಧಿ ಏನ್ ಕಡಿದು ಕಟ್ಟೆ ಹಾಕಿದ್ರು? ಅವತ್ತಿನ ಯುದ್ಧದ ಗೆಲುವನ್ನು ಹಾಳು ಮಾಡಿದ್ದೇ ಇಂದಿರಾಗಾಂಧಿ ಎಂಬುದು ನೆನಪಿರಲಿ. ಕಾಶ್ಮೀರದಿಂದ ಕನ್ನಡಿಗರನ್ನು ಕರೆತರಲು ಅವಕಾಶ ಕಲ್ಪಸಿದ್ದು ಮೋದಿ. ಅದರಲ್ಲಿ ನಿಮ್ಮ ಸಾಧನೆ ಏನಿದೆ? ನಿಮ್ಮ ಅನಿಷ್ಟಕ್ಕೆಲ್ಲ ಮೋದಿ ಕಾರಣ ಎಂಬಂತೆ ಏಕೆ ಮಾತನಾಡುತ್ತೀರಿ’ ಎಂದು ಪ್ರಶ್ನಿಸಿದರು.
ಟೈಂ ಬಾಂಬ್ ಥರ
‘ಪಾಕಿಸ್ತಾನ ಮಾತ್ರ ಶತ್ರುವಲ್ಲ. ನಮ್ಮ ಜೊತೆಯಲ್ಲೇ ಇಂತಹ ಹಿತಶತ್ರುಗಳು ಟೈಂ ಬಾಂಬ್ ಥರ ಇದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.
‘ಸಂತೋಷ್ ಲಾಡ್‌ಗೆ ಮೈ ತುಂಬಾ ಗಣಿಗಾರಿಕೆ ದುಡ್ಡು ಮೆತ್ತಿಕೊಂಡಿದೆ. ಒಳ್ಳೆಯವರಂತೆ ಪೋಸ್ ಕೊಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಅಕ್ರಮದ ಆರೋಪ ಕೇಳಿಬಂದಿದ್ದರಿಂದಾಗಿ, ಕಾರ್ಮಿಕ ಕಿಟ್ ಹಗರಣದಿಂದ ಸಂತೋಷ್ ಬಚಾವಾದರು. ಇಲ್ಲದಿದ್ದರೆ ರಾಜೀನಾಮೆ ಕೊಡಬೇಕಾಗುತ್ತಿತ್ತು’ ಎಂದರು.
‘ದುಡ್ಡಿನ ಕೊಬ್ಬಿನಿಂದ ಲಾಡ್ ಆ ರೀತಿ ಮಾತನಾಡುತ್ತಿದ್ದಾರೆ. ನಿಮ್ಮ ಬಳಿ ದುಡ್ಡಿರಬಹುದು, ಪತ್ರಕರ್ತರಿಗೆ ನೈತಿಕತೆ ಇದೆ, ಮರೆಯಬೇಡಿ’ ಎಂದು ಹೇಳಿದರು.
‘ತನ್ನ ಮೇಲೆ ದಾಳಿ ಆಗಿರುವುದಕ್ಕೆ ಪಾಕಿಸ್ತಾನವೇ ಸಾಕ್ಷಿ ಕೊಟ್ಟಿದೆ. ಆದರೂ ಭಾರತದಲ್ಲಿ ಕೆಲವರ ತಕರಾರು ನಿಲ್ಲುತ್ತಿಲ್ಲ. ಕಾಂಗ್ರೆಸ್‌ಗೆ ಪಾಕಿಸ್ತಾನದ ಮೇಲೆ ಸದಾ ಪ್ರೀತಿ’ ಎಂದು ಆರೋಪಿಸಿದರು.
‘ಅಂಬೇಡ್ಕರ್ ಪ್ರಧಾನಿ ಆಗಿದಿದ್ದರೆ, ದೇಶಕ್ಕೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲ. ಅವರಿಗೆ ಮುಸ್ಲಿಮರ ಮನಸ್ಥಿತಿ ಬಹಳ ಚೆನ್ನಾಗಿ ಅರ್ಥವಾಗಿತ್ತು’ ಎಂದರು.
‘ನೋಟುಗಳಲ್ಲಿ ಗಾಂಧೀಜಿ ಫೋಟೊ ಜೊತೆ ಅಂಬೇಡ್ಕರ್ ಫೋಟೊ ಕೂಡ ಮುದ್ರಿಸಬೇಕು. ಮೀಸಲಾತಿ ದೃಷ್ಟಿಕೋನದಿಂದಷ್ಟೆ ಅವರನ್ನು ನೋಡುವುದನ್ನು ಬಿಡಬೇಕು. ಅವರ ವಿಶಾಲವಾದ ದೃಷ್ಟಿಕೋನ ಈಗ ಎಲ್ಲರಿಗೂ ಅರ್ಥವಾಗುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.