ADVERTISEMENT

ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಹತ್ಯೆ: ತನಿಖೆಗೆ ವಿಶೇಷ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 10:20 IST
Last Updated 5 ಜುಲೈ 2022, 10:20 IST
ಕೊಲೆಯಾದ ಚಂದ್ರಶೇಖರ್ ಗುರೂಜಿ
ಕೊಲೆಯಾದ ಚಂದ್ರಶೇಖರ್ ಗುರೂಜಿ   

ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಅವರ ಹತ್ಯೆ ಪ್ರಕರಣದ ತನಿಖೆಗೆ ಡಿಸಿಪಿ ಸಾಹಿಲ್ ಬಾಗ್ಲಾ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.

ವಿಶೇಷ ತಂಡ ನಗರದ ರೈಲು ನಿಲ್ದಾ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಕೆಲವು ಪ್ರದೇಶಗಳಲ್ಲಿ ಬ್ಯಾರಿಕೇಡ್ ಹಾಕಿ ಅನುಮಾನಾಸ್ಪದ ವಾಹನ ಸವಾರರನ್ನು‌ ಪರಿಶೀಲನೆ ನಡೆಸುತ್ತಿದ್ದಾರೆ.

ಗುರೂಜಿ ಶವ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್'ಗೆ ರವಾನಿಸಲಾಗಿದೆ‌. ಮೂಲತಃ ಬಾಗಲಕೋಟೆಯವರಾದ ಚಂದ್ರಶೇಖರ್ ಗುರೂಜಿ ಹುಬ್ಬಳ್ಳಿ ವಿದ್ಯಾನಗದಲ್ಲಿ ವಾಸವಾಗಿದ್ದರು.

ADVERTISEMENT

'ವಾಸ್ತು ಕುರಿತು ಸಲಹೆ, ಸೂಚನೆ ನೀಡಲು ಜುಲೈ 2ರಂದು ಪ್ರೆಸಿಡೆಂಟ್ ಹೋಟೆಲ್'ನ ಕೊಠಡಿ ನಂ. 220 ರಲ್ಲಿ ವಾಸವಾಗಿದ್ದರು. ಬುಧವಾರ ಕೊಠಡಿ ತೆರವುಗೊಳಿಸುವುದಾಗಿ ಹೇಳಿದ್ದರು. ಹೋಟೆಲ್'ಗೆ ಬಂದಿದ್ದ ದುಷ್ಕರ್ಮಿಗಳು ಗುರೂಜಿಗೆ ದೂರವಾಣಿ ಕರೆ ಮಾಡಿ, ಸ್ವಾಗತಕಾರರ ಕೌಂಟರ್'ನಲ್ಲಿ ಕಾಯುತ್ತಿರುವುದಾಗಿ ತಿಳಿಸಿದ್ದರು' ಎಂದು ಹೋಟೆಲ್ ಸಿಬ್ಬಂದಿ ಹೇಳಿದರು.

ಸ್ವಾಗತಕಾರರ ಕೌಂಟರ್'ಗೆ ಬಂದ ಗುರೂಜಿ, ದುಷ್ಕರ್ಮಿಗಳ ಬಳಿ ಕೂತು ಕುಷಲೋಪರಿ ವಿಚಾರಿಸಿದ್ದಾರೆ. ಅವರಲ್ಲಿ ಒಬ್ಬ ಗುರೂಜಿ ಕಾಲಿಗೆ ನಮಸ್ಕರಿಸಿದ ಹಾಗೆ ಮಾಡಿದ್ದಾನೆ. ಅದೇ ವೇಳೆ ಮತ್ತೊಬ್ಬ ಚಾಕುವಿನಿಂದ ಇರಿದಿದ್ದಾನೆ. ಹತ್ಯೆ ಕೃತ್ಯ ನಡೆಯುತ್ತಿದ್ದಂತೆ ಸಿಬ್ಬಂದಿ ಭಯದಿಂದ ಹೊರಗೆ ಓಡಿ ಬಂದಿದ್ದಾರೆ. ಈ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗುರೂಜಿ ಯಾರು?

ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಮೂಲತಃ ಬಾಗಲಕೋಟೆ ನಗರದ ಮೋಟಗಿ ಗಲ್ಲಿಯ ನಿವಾಸಿಯಾಗಿದ್ದರು.ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡಿದ್ದರು. ಹುಬ್ಬಳ್ಳಿಯ ವಿದ್ಯಾನಗರದಲ್ಲಿ ನಿವಾಸ ಹೊಂದಿದ್ದರು.

ಮೋಟಗಿ ಗಲ್ಲಿಯ ವಿರೂಪಾಕ್ಷಪ್ಪ ಅಂಗಡಿ, ನೀಲವ್ವ‌ ಅಂಗಡಿಯವರ ಪುತ್ರನಾಗಿದ್ದ ಗುರೂಜಿ, ಆರು ಮಂದಿ ಮಕ್ಕಳಲ್ಲಿ ಚಂದ್ರಶೇಖರ ಮೂರನೇಯವರಾಗಿದ್ದರು.

ಸಿವಿಲ್ ಎಂಜಿನಿಯರಿಂಗ್ ವ್ಯಾಸಂಗ ಮುಗಿಸಿನೌಕರಿ ಅರಸಿ ಅವರು ಮೂರೂವರೆ ದಶಕಗಳ ಹಿಂದೆ ಮುಂಬಯಿಗೆ ತೆರಳಿದ್ದರು. ಆರಂಭದಲ್ಲಿ ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಅವರು, ನಂತರ ಸರಳ ವಾಸ್ತು ಆರಂಭಿಸಿದ್ದರು. ಮುಂಬಯಿ, ಬೆಂಗಳೂರು, ಹುಬ್ಬಳ್ಳಿಯಲ್ಲಿ ವಾಸಿಸುತ್ತಿದ್ದರು.

ಸರಳ ವಾಸ್ತು ಪ್ರವರ್ಧಮಾನಕ್ಕೆ ಬಂದ ನಂತರ ವಾಸ್ತುಪ್ರಿಯರಲ್ಲಿ ಜನಪ್ರಿಯತೆ ಗಳಿಸಿದ್ದ ಇವರು, ಒಬ್ಬ ಸ್ಟಾರ್ ವಾಸ್ತು ತಜ್ಞ ಎನ್ನಲಾಗುತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.