ADVERTISEMENT

ಸಾರಂಗಪಾಣಿ ಗಣಿಗಾರಿಕೆಗೆ ಅಸ್ತು: ಅಂದಾಜು ಹದಿನೇಳು ಸಾವಿರ ಮರಗಳ ಹನನ ಸಾಧ್ಯತೆ

ಯತೀಶ್ ಕುಮಾರ್ ಜಿ.ಡಿ
Published 14 ಜೂನ್ 2025, 0:04 IST
Last Updated 14 ಜೂನ್ 2025, 0:04 IST
<div class="paragraphs"><p>ಅರಣ್ಯ ಪ್ರದೇಶ ( ಸಾಂಕೇತಿಕ ಚಿತ್ರ)</p></div>

ಅರಣ್ಯ ಪ್ರದೇಶ ( ಸಾಂಕೇತಿಕ ಚಿತ್ರ)

   

ಬೆಂಗಳೂರು: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಅಂದಾಜು 120 ಎಕರೆ ಅರಣ್ಯ ಪ್ರದೇಶದ ಭೂ ಪರಿವರ್ತನೆಗಾಗಿ ಶಿಫಾರಸು ಮಾಡಿರುವ ರಾಜ್ಯ ಅರಣ್ಯ ಪಡೆಯ ಮುಖ್ಯಸ್ಥರು, ಗಣಿಗಾರಿಕೆ ಪ್ರಸ್ತಾವನೆಗೆ ಕೇಂದ್ರ ಸರ್ಕಾರದ ಮೊದಲನೇ ಹಂತದ ಅನುಮತಿ ಪಡೆಯುವಂತೆಯೂ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

ಅರಣ್ಯ ಪ್ರದೇಶದ ವ್ಯಾಪ್ತಿ ಕುಸಿತದಲ್ಲಿ ದೇಶದಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ ಎಂದು ಭಾರತೀಯ ಅರಣ್ಯ ಸಮೀಕ್ಷೆಯ ವರದಿ ಹೇಳಿರುವ ಹೊತ್ತಿನಲ್ಲೇ ರಾಜ್ಯದ ಅರಣ್ಯಗಳಿಗೆ ಮತ್ತೊಂದು ಆಪತ್ತು ಬರುವ ಸಾಧ್ಯತೆಯಿದೆ. ಅರಣ್ಯದಲ್ಲಿ ಒಂದು ಮರ ಕಡಿದರೂ ಶಿಕ್ಷೆ ಖಚಿತ ಎಂದು ಅರಣ್ಯ ಸಚಿವರು ಹೇಳಿರುವ ಬೆನ್ನಲ್ಲೇ ಅರಣ್ಯ ಇಲಾಖೆಯಿಂದಲೇ ಈ ಅನುಮೋದನೆ ದೊರಕಿದೆ.

ADVERTISEMENT

ಮಿನರಲ್ ಎಂಟರ್‌ಪ್ರೈಸಸ್‌ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯು ಮ್ಯಾಂಗನೀಸ್ ಮತ್ತು ಕಬ್ಬಿಣದ ಅದಿರು ಗಣಿಗಾರಿಕೆ ಯೋಜನೆಗಾಗಿ ತುಮಕೂರು ಜಿಲ್ಲೆಯ ಗೊಲ್ಲರಹಳ್ಳಿ, ಲಕ್ಮೇನಹಳ್ಳಿ, ಕೋಡಿಹಳ್ಳಿ, ಹೊಸಹಳ್ಳಿ, ತೋನಲಾಪುರ ಗ್ರಾಮಗಳಲ್ಲಿ ಅಂದಾಜು 48 ಹೆಕ್ಟೇರ್ ಅರಣ್ಯ ಭೂಮಿ ಪರಿವರ್ತನೆ ಕೋರಿ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ತುಮಕೂರು ವಿಭಾಗದ ಡಿಸಿಎಫ್ ಮತ್ತು ಹಾಸನ ವೃತ್ತದ ಸಿಸಿಎಫ್ ಪ್ರಸ್ತಾವನೆಯನ್ನು ಶಿಫಾರಸು ಮಾಡಿದ್ದರು. ಪ್ರಸ್ತಾಪಿತ ಪ್ರದೇಶವು ಬುಕ್ಕಾಪಟ್ಟಣ ಚಿಂಕಾರಾ ಅಭಯಾರಣ್ಯದ ಪರಿಭಾವಿತ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿದೆ.

ಉದ್ದೇಶಿತ ಗಣಿ ಯೋಜನೆಯಿಂದ 17,000ಕ್ಕೂ ಹೆಚ್ಚು ಮರಗಳು ನಾಶವಾಗಲಿದ್ದು ಮಾನವ- ವನ್ಯಜೀವಿ ಸಂಘರ್ಷ ಹೆಚ್ಚಾಗಿ, ಸ್ಥಳೀಯ ಜನಜೀವನದ ಮೇಲೆ ಪರಿಣಾಮ ಬೀರಲಿದ್ದು ಪ್ರಸ್ತಾವನೆಯನ್ನು ತಿರಸ್ಕರಿಸು ವಂತೆ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಅವರು ಅರಣ್ಯ ಸಚಿವರಿಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಪತ್ರ ಬರೆದು ಮನವಿ ಮಾಡಿದ್ದರು. ಸಾಮಾಜಿಕ ಹೋರಾಟಗಾರರಾದ ಎಸ್.ಆರ್.ಹಿರೇಮಠ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಹ ಯೋಜನೆಗೆ ಅನುಮತಿ ನೀಡದಂತೆ ಒತ್ತಾಯ ಮಾಡಿದ್ದರು. ಈ ಎಲ್ಲಾ ವಿರೋಧಗಳ ಮಧ್ಯೆಯೂ ಅರಣ್ಯ ಇಲಾಖೆಯು ಪ್ರಸ್ತಾವನೆಗೆ ಹಸಿರು ನಿಶಾನೆ ನೀಡಿದೆ.

ಇದೇ ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡಂತಿರುವ ಗಣಿಗಾರಿಕೆಯ ಎರಡು ಪ್ರಸ್ತಾಪಗಳಿಗೆ ಕೇಂದ್ರ
ಪರಿಸರ ಹಾಗೂ ಅರಣ್ಯ ಸಚಿವಾಲಯ ಅನುಮತಿ ನೀಡುವುದು ಬೇಡ ಎಂದು 2017 ರಲ್ಲಿ ಶಿಫಾರಸು ಮಾಡಿತ್ತು. ಈ ಅಂಶವನ್ನು ಪ್ರಸ್ತಾಪಿಸಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಜೂನ್ ಆರರಂದು ಗಿರಿಧರ ಕುಲಕರ್ಣಿ ಪತ್ರ ಬರೆದಿದ್ದರು.

ಗೋವಾ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯುಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯರೆಕಟ್ಟೆ ಹಾಗೂ ಹೊಂಬಳಘಟ್ಟ ಎಂಬ ಗ್ರಾಮಗಳಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಲು ಅಂದಾಜು 117 ಹೆಕ್ಟೇರ್ ಅರಣ್ಯ ಪ್ರದೇಶದ ಪರಿವರ್ತನೆ ಕೋರಿ ಕೆಲ ವರ್ಷದ ಹಿಂದೆ ಪ್ರಸ್ತಾವನೆ ಸಲ್ಲಿಸಿತ್ತು.

ರಾಜ್ಯ ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರಗಳೆರಡೂ ಪ್ರಸ್ತಾವನೆಗೆ ಶಿಫಾರಸ್ಸು ಮಾಡಿದ್ದವು. ಆದರೆ ಸ್ಥಳ ಪರಿಶೀಲನೆ ನಡೆಸಿದ್ದ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯ ಅಂದಿನ ಡಿಸಿಎಫ್ ಆರ್.ಪದ್ಮಾವತೆ ಅವರು ಯೋಜನೆಗೆ ಅನುಮತಿ ನೀಡುವುದು ಬೇಡ ಅಂದು 2017ರಲ್ಲಿ ಶಿಫಾರಸು ಮಾಡಿದ್ದರು.

ಗುತ್ತಿಗೆಗೆ ಪ್ರಸ್ತಾಪಿಸಲಾದ ಅರಣ್ಯ ಭೂಮಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ, ಕರಡಿ, ಮೊಲ, ಜಿಂಕೆ, ಕಾಡುಕುರಿ, ಕಾಡುಹಂದಿ, ಮುಳ್ಳುಹಂದಿ, ನವಿಲು, ನರಿ, ಸೇರಿದಂತೆ ಅನೇಕ ವನ್ಯಜೀವಿಗಳು ಕಂಡುಬಂದಿವೆ. ಈ ಪ್ರದೇಶದಲ್ಲಿ ಲಭ್ಯವಿರುವ ಕಬ್ಬಿಣದ ಅದಿರು ಕಡಿಮೆ ದರ್ಜೆಯ ಹೆಮಟೈಟ್ ಆಗಿದೆ. ಪ್ರಶ್ನೆಯಲ್ಲಿರುವ ಭೂಮಿಯು ದೊಡ್ಡ ಗುಡ್ಡದ ಭಾಗವಾಗಿದ್ದು, ಅಲ್ಲಿ 1952ರಿಂದ ಗಣಿಗಾರಿಕೆ ಈಗಾಗಲೇ ನಡೆಸಲಾಗುತ್ತಿತ್ತು. ಒಟ್ಟು 25 ಗಣಿಗಳು ಈ ಪ್ರದೇಶದಿಂದ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರನ್ನು ಹೊರತೆಗೆದಿವೆ. ಈ ಪ್ರದೇಶದಲ್ಲಿ ಆರಂಭದಲ್ಲಿ ಸಾರಂಗಪಾಣಿ ಮುದಲಿಯಾರ್ ಅವರು 1952ರಿಂದ 1998ರವರೆಗೆ ಗಣಿಗಾರಿಕೆ ನಡೆಸುತ್ತಿದ್ದರು. 1999ರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಬದಿಗೊತ್ತಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಮೂಲ ಗುತ್ತಿಗೆಯನ್ನು ಅನೇಕ ಗಣಿಗಾರಿಕಾ ಕಂಪನಿಗಳಿಗೆ ವಿಭಜಿಸಿತ್ತು.

ಬೆಂಗಳೂರಿನ ಬಾಬಣ್ಣ ಎಂಬುವವರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅರವಟ್ಟಿಗೆ ಹಾಗೂ ಹೊಸಹಳ್ಳಿ ಎಂಬ ಗ್ರಾಮಗಳಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಲು ಅಂದಾಜು 155 ಹೆಕ್ಟೇರ್ ಅರಣ್ಯ ಪ್ರದೇಶದ ಪರಿವರ್ತನೆ ಕೋರಿ ಪ್ರಸ್ತಾವನೆ ಸಲ್ಲಿಸಿದ್ದರು. ರಾಜ್ಯ ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರಗಳೆರಡೂ ಪ್ರಸ್ತಾವನೆಗೆ ಶಿಫಾರಸು ಮಾಡಿದ್ದವು. ಆದರೆ ಸ್ಥಳ ಪರಿಶೀಲನೆ ನಡೆಸಿದ್ದ ಪದ್ಮಾವತೆ ಅವರು ಗೋವಾ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಯೋಜನೆ ಕುರಿತು ಮಾಡಿದ ಪ್ರಸ್ತಾಪ ಮಾಡಿದ ಬಹುತೇಕ ಅಂಶಗಳನ್ನೇ ಈ ಯೋಜನೆಯ ಸ್ಥಳ ಪರಿಶೀಲನಾ ವರದಿಯಲ್ಲೂ ಸಹ ಉಲ್ಲೇಖಿಸಿ ಯೋಜನೆಗೆ ಅನುಮತಿ ನೀಡುವುದು ಬೇಡ ಅಂದು 2017ರಲ್ಲಿ ಶಿಫಾರಸುಮಾಡಿದ್ದರು.

ಇದೀಗ ಇದೇ ಪ್ರದೇಶದಲ್ಲಿ ರಾಜ್ಯ ಅರಣ್ಯ ಇಲಾಖೆಯು ಇಂತಹುದೇ ಮತ್ತೊಂದು ಪ್ರಸ್ತಾವನೆಗೆ ಅಸ್ತು ಎನ್ನುವ ಮೂಲಕ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯದಶಿಫಾರಸುಗಳನ್ನು ಮೂಲೆಗೆ ತಳ್ಳಿದೆ ಎಂಬ ಆರೋಪ ಕೇಳಿ ಬಂದಿದೆ.

ಡಿಸಿಎಫ್‌ ಶಿಫಾರಸು ಏನಾಗಿತ್ತು?

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಈ ಅರಣ್ಯ ಪ್ರದೇಶವು ತುಮಕೂರು ಅರಣ್ಯ ವಿಭಾಗದ ತೀರ್ಥರಂಪುರ ಮೀಸಲು ಅರಣ್ಯಗಳಲ್ಲಿ ಬರುತ್ತದೆ. ಪ್ರಸ್ತುತ ಈ ಕಾಡುಗಳು ಉತ್ತಮ ಪುನರುತ್ಪಾದನೆಯನ್ನು ತೋರಿಸುತ್ತಿವೆ. ಸ್ಥಳಕ್ಕೆ ಭೇಟಿ ನೀಡಿದ ಸಮಯದಲ್ಲಿ ಜಿಂಕೆ ಮತ್ತು ಮೊಲಗಳು ಕಂಡವು. ಜೊತೆಗೆ ಕರಡಿ ಮತ್ತು ಚಿರತೆಗಳ ಪರೋಕ್ಷ ಇರುವಿಕೆ ಕಂಡುಬಂದಿರುತ್ತದೆ.

ಈ ಪ್ರದೇಶವು ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಭದ್ರಾಗೆ ವಲಸೆ ಬರುವ ಆನೆಗಳ ಗುಂಪಿಗೆ ಆಶ್ರಯ ನೀಡುತ್ತದೆ. ಚಿಕ್ಕನಾಯಕನಹಳ್ಳಿಯ ವಲಯ ಅರಣ್ಯ ಅಧಿಕಾರಿಯಿಂದ ಪಡೆದ ಮಾಹಿತಿಯ ಪ್ರಕಾರ, 2015-16ರಲ್ಲಿ ಬೆಟ್ಟದ ಸುತ್ತಮುತ್ತಲಿನ ಹಳ್ಳಿಗಳಲ್ಲಿ 1,01,430 ರೂಪಾಯಿ ಮಾನವ- ವನ್ಯಜೀವಿ ಸಂಘರ್ಷಕ್ಕಾಗಿ ಪರಿಹಾರವನ್ನು ನೀಡಲಾಗಿದೆ. ಆದ್ದರಿಂದ, ಈ ಪ್ರದೇಶದಲ್ಲಿ ಗಣಿಗಾರಿಕೆಯು ಈಗಾಗಲೇ ಅಸ್ತಿತ್ವದಲ್ಲಿರುವ ಸಂಘರ್ಷವನ್ನು ಹೆಚ್ಚಿಸುತ್ತದೆ. ಇದಲ್ಲದೆ, ತುಮಕೂರು ಜಿಲ್ಲೆಯ ಬರಪೀಡಿತ ಪ್ರದೇಶವಾದ ಚಿಕ್ಕನಾಯಕನಹಳ್ಳಿ ಸುತ್ತಮುತ್ತಲಿನ ಹಳ್ಳಿಗಳಿಗೆ ಇದು ಏಕೈಕ ಜಲಾನಯನ ಪ್ರದೇಶವಾಗಿದೆ. ಈ ಕಾರಣಗಳನ್ನು ಹೊರತುಪಡಿಸಿ, ಜಲಾನಯನ ದೃಷ್ಟಿಕೋನವನ್ನು ಇಟ್ಟುಕೊಂಡು ಈ ಪ್ರದೇಶವನ್ನು ಗಣಿಗಾರಿಕೆಗೆ ತಿರುಗಿಸುವ ಅಗತ್ಯವಿಲ್ಲ. ಇದು ಈಗಾಗಲೇ ಗಣಿಗಾರಿಕೆ ಮಾಡಿದ ಪ್ರದೇಶವಾಗಿರುವುದರಿಂದ ಪರಿಸರ ಮರುಸ್ಥಾಪನೆಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರದೇಶವನ್ನು ಹಾಗೆಯೇ ಬಿಡುವುದು ಸೂಕ್ತ ಎಂದು ಅಂದಿನ ಡಿಸಿಎಫ್ಆರ್.ಪದ್ಮಾವತೆ ಶಿಫಾರಸು ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.