ADVERTISEMENT

ಜಲಮೂಲ ನಿರ್ವಹಣೆಗೆ ಉಪಗ್ರಹ, ಎಐ ತಂತ್ರಜ್ಞಾನ: ಎನ್‌.ಎಸ್‌. ಬೋಸರಾಜು

ಸಂಗ್ರಹದಲ್ಲಾಗುತ್ತಿರುವ ವ್ಯತ್ಯಾಸ ಕಂಡುಕೊಳ್ಳಲು ‘ಡಿಜಿಟಲ್‌ ವಾಟರ್‌ ಸ್ಟಾಕ್‌’: ಬೋಸರಾಜು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 13:48 IST
Last Updated 28 ಆಗಸ್ಟ್ 2025, 13:48 IST
ಎನ್‌.ಎಸ್‌. ಬೋಸರಾಜು
ಎನ್‌.ಎಸ್‌. ಬೋಸರಾಜು   

ಬೆಂಗಳೂರು: ಜಲಮೂಲಗಳ ಸಮಗ್ರ ನಿರ್ವಹಣೆಗೆ ಉಪಗ್ರಹ ಹಾಗೂ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧರಿತ ‘ಡಿಜಿಟಲ್‌ ವಾಟರ್‌ ಸ್ಟಾಕ್‌’ ಯೋಜನೆಯನ್ನು ದೇಶದಲ್ಲಿ ಪ್ರಥಮ ಬಾರಿಗೆ ರಾಜ್ಯದಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಬೋಸರಾಜು ತಿಳಿಸಿದರು.

ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿತಗೊಂಡಿದ್ದು, ವಿವಿಧ ಇಲಾಖೆಗಳಲ್ಲಿ ಹಂಚಿಹೋಗಿರುವ ಜಲಮೂಲಗಳನ್ನು ಒಂದೇ ವೇದಿಕೆಯಡಿ ನಿರ್ವಹಿಸಿ, ನೀರಿನ ನಿರ್ವಹಣೆ ಮಾಡುವುದು ಈ ಯೋಜನೆಯ ಮೂಲ ಉದ್ದೇಶ ಎಂದು ಹೇಳಿದರು.

ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ಕೆಟಿಸಿಡಿಎ) ಈ ಯೋಜನೆಯ ನಿರ್ವಹಣೆ ಮಾಡಲಿದೆ. ಕೆರೆಗಳು ಮತ್ತು ಇನ್ನಿತರ ಜಲಮೂಲಗಳ ಸರ್ವೆ ಸೇರಿದಂತೆ ಮೇಲ್ವಿಚಾರಣೆ ಹಾಗೂ ಸಮರ್ಪಕವಾಗಿ ನಿರ್ವಹಣೆಯನ್ನು ‘ಡಿಜಿಟಲ್ ವಾಟರ್ ಸ್ಟಾಕ್’ (ಡಿಡಬ್ಲ್ಯುಎಸ್) ಖಚಿತಪಡಿಸಲಿದೆ ಎಂದರು.

ADVERTISEMENT

ಉಪಗ್ರಹ ಸೆನ್ಸರ್‌, ಇಮೇಜಿಂಗ್ ಮತ್ತು ಎಐ ತಂತ್ರಜ್ಞಾನಗಳ ಮೂಲಕ ಕೆರೆಗಳು ಮತ್ತು ಭೂಗರ್ಭದ ಜಲಧಾರೆಗಳ ಸಮಗ್ರ ನಿರ್ವಹಣೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.

41 ತಾಲ್ಲೂಕುಗಳಲ್ಲಿ ಡಿಡಬ್ಲ್ಯುಎಸ್: ಮೊದಲ ಹಂತದಲ್ಲಿ ಅಂತರ್ಜಲವನ್ನು ಅತಿಯಾಗಿ ಬಳಕೆ ಮಾಡುತ್ತಿರುವ 41 ತಾಲ್ಲೂಕುಗಳಲ್ಲಿ ಡಿಡಬ್ಲ್ಯುಎಸ್‌ ಯೋಜನೆಯನ್ನು ಜಾರಿಗೆ ತರಲಾಗುವುದು. ಜಲಮೂಲಗಳನ್ನು ‘ನೈಸರ್ಗಿಕ ಉಳಿತಾಯ ಖಾತೆ’ಗಳಂತೆ ಪರಿವರ್ತಿಸಿ, ಅವುಗಳ ಸಮರ್ಪಕ ನಿರ್ವಹಣೆಗೆ ಸರ್ಕಾರ ಬದ್ಧವಾಗಿದೆ. ಇದಕ್ಕೆ ಡಿಡಬ್ಲ್ಯುಎಸ್ ಯೋಜನೆ ಸಹಕಾರಿಯಾಗಲಿದೆ ಎಂದು ಬೋಸರಾಜು ತಿಳಿಸಿದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.