ADVERTISEMENT

ಅಕ್ರಮವಾಗಿ ಅದಿರು ಸಾಗಣೆ ಆರೋಪ: ಶಾಸಕ ಸತೀಶ್‌ ಸೈಲ್‌ ಮಧ್ಯಂತರ ಜಾಮೀನು ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 0:30 IST
Last Updated 11 ನವೆಂಬರ್ 2025, 0:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಬೇಲೇಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿರುವ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಅವರಿಗೆ ಈ ಮೊದಲು ನೀಡಲಾಗಿದ್ದ ಮಧ್ಯಂತರ ವೈದ್ಯಕೀಯ ಜಾಮೀನಿನ ಅವಧಿಯನ್ನು ಹೈಕೋರ್ಟ್‌ ಇದೇ 13ರವರೆಗೆ ವಿಸ್ತರಿಸಿದೆ.

ಜಾರಿ ನಿರ್ದೇಶನಾಲಯ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣದಲ್ಲಿ ಮಧ್ಯಂತರ ವೈದ್ಯಕೀಯ ಜಾಮೀನು ಮಂಜೂರು ಮಾಡಿದ್ದನ್ನು ರದ್ದುಪಡಿಸಿ ಜನಪ್ರತಿನಿಧಿಗಳ ವಿಶೇಷ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರ ಆದೇಶವನ್ನು ಪ್ರಶ್ನಿಸಿ ಸತೀಶ್‌ ಸೈಲ್‌ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆಯಲ್ಲಿ ಸೈಲ್‌ ಪರ ಹಾಜರಾಗಿದ್ದ ಪದಾಂಕಿತ ಹಿರಿಯ ವಕೀಲ ಸಂದೇಶ್‌ ಜೆ.ಚೌಟ ಅವರ ವಾದವನ್ನು ಆಲಿಸಿದ ನ್ಯಾಯಪೀಠ, ‘ಅರ್ಜಿದಾರರಿಗೆ ಮಂಜೂರು ಮಾಡಲಾಗಿರುವ ವೈದ್ಯಕೀಯ ಮಧ್ಯಂತರ ಜಾಮೀನನ್ನು ಇದೇ 13ವರೆಗೆ ವಿಸ್ತರಿಸಲಾಗಿದೆ. ಏತನ್ಮಧ್ಯೆ, ಸೈಲ್‌ ಅವರ ಆರೋಗ್ಯ ಪರಿಸ್ಥಿತಿಗೆ ಸಂಬಂಧಿಸಿದ ದಾಖಲೆಯನ್ನು ಪರಿಶೀಲಿಸಿ ಅದನ್ನು ಖಾತರಿಪಡಿಸಲು ಯಾವ ವೈದ್ಯರನ್ನು ನೇಮಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸಲಹೆ ನೀಡಬೇಕು’ ಎಂದು ಆದೇಶಿಸಿತು.

ADVERTISEMENT

‘ಸತೀಶ್‌ ಸೈಲ್‌ ಅನಾರೋಗ್ಯ ಪೀಡಿತರಾಗಿದ್ದಾರೆ ಎಂಬ ಬಗೆಗಿನ ವೈದ್ಯಕೀಯ ದಾಖಲೆಯನ್ನು ಖಾತರಿಪಡಿಸಬೇಕು’ ಎಂದು ಇ.ಡಿ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಅರವಿಂದ ಕಾಮತ್‌ ಅವರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 13ಕ್ಕೆ ಮುಂದೂಡಿತು. ಸೈಲ್‌ ಪರ ಹೈಕೋರ್ಟ್‌ ವಕೀಲ ಎಸ್‌.ಸುನಿಲ್ ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.