ADVERTISEMENT

ಎನ್‌ಜಿಟಿ ಆದೇಶ ರದ್ದುಗೊಳಿಸಿದ ‘ಸುಪ್ರೀಂ’

ಗೋಡ್ರೆಜ್‌ ಪ್ರಾಪರ್ಟೀಸ್‌ ಲಿ. ಹಾಗೂ ವಂಡರ್‌ ಪ್ರೊಜೆಕ್ಟ್ಸ್‌ಗೆ ಪರಿಸರ ಇಲಾಖೆ ಅನುಮತಿ ರದ್ದು ವಿಚಾರ

ಪಿಟಿಐ
Published 11 ಆಗಸ್ಟ್ 2020, 19:30 IST
Last Updated 11 ಆಗಸ್ಟ್ 2020, 19:30 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಬೆಂಗಳೂರಿನಲ್ಲಿ ಗೋಡ್ರೆಜ್‌ ಪ್ರಾಪರ್ಟೀಸ್‌ ಲಿಮಿಟೆಡ್‌ ಹಾಗೂ ವಂಡರ್‌ ಪ್ರೊಜೆಕ್ಟ್ಸ್‌ ಡೆವಲಪ್‌ಮೆಂಟ್‌ ಪ್ರೈ.ಲಿ. ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ನೀಡಲಾಗಿದ್ದ ಪರಿಸರ ಇಲಾಖೆ ನೀಡಿದ್ದ ಅನುಮತಿ(ಇಸಿ) ರದ್ದುಗೊಳಿಸಿದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ(ಎನ್‌ಜಿಟಿ) ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ.

‘ಈ ಪ್ರಕರಣವನ್ನು ಪುನರ್‌ಪರಿಶೀಲಿಸಬೇಕು’ ಎಂದು ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಎಸ್‌.ಎ.ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್‌.ಭೋಪಣ್ಣ ಹಾಗೂ ವಿ.ರಾಮಸುಬ್ರಮಣಿಯನ್‌ ಅವರಿದ್ದ ನ್ಯಾಯಪೀಠವು ಎನ್‌ಜಿಟಿಗೆ ಸೂಚಿಸಿತು.ಅಲ್ಲಿಯವರೆಗೂ ಯಾವುದೇ ನಿರ್ಮಾಣ ಚಟುವಟಿಕೆ ಮಾಡಬಾರದು ಎಂದು ಪೀಠ ಆದೇಶಿಸಿತು.

ಕೈಕೊಂಡ್ರಹಳ್ಳಿ ಕೆರೆ ಪ್ರದೇಶದ ಬಫರ್‌ ವಲಯದಲ್ಲೇ ಈ ಯೋಜನೆಯು ಇದೆ ಎಂದಿದ್ದ ಎನ್‌ಜಿಟಿ ಅನುಮತಿಯನ್ನು ರದ್ದುಗೊಳಿಸಿತ್ತು. ಕೆರೆಯೊಂದರ ಬಫರ್‌ ವಲಯವನ್ನು ಉಲ್ಲಂಘಿಸುವ ಯಾವುದೇ ಯೋಜನೆಗಳಿಗೆ ಪರಿಸರ ಇಲಾಖೆ ಅನುಮತಿ ನೀಡಬಾರದು ಎಂದು ಎನ್‌ಜಿಟಿ ಸೂಚಿಸಿತ್ತು.

ADVERTISEMENT

‘ಈ ಪ್ರಕರಣದ ಪುನರ್‌ಪರಿಶೀಲನೆ ಆರಂಭಿಸಿದ ಬಳಿಕ ಆರು ವಾರದೊಳಗಾಗಿ ವಿಚಾರಣೆ ಪೂರ್ಣಗೊಳಿಸಬೇಕು. ಈಗಾಗಲೇ ನೀಡಿರುವ ಇಸಿ ಅವಧಿ ಎನ್‌ಜಿಟಿಯ ಹೊಸ ಆದೇಶಕ್ಕೆ ಒಳಪಡಲಿದೆ ಹಾಗೂ ಈ ಸನ್ನಿವೇಶದಲ್ಲಿ ಇಸಿ ಪುನರೂರ್ಜಿತವಾಗಿದೆ ಎಂದಲ್ಲ. ಈ ನ್ಯಾಯಾಲಯವು ಯಾವುದೇ ಅಭಿಪ್ರಾಯವನ್ನು ತಿಳಿಸಿಲ್ಲ’ ಎಂದು ಪೀಠ ಸ್ಪಷ್ಟಪಡಿಸಿತು.

‘ಈ ಪ್ರಕರಣದಲ್ಲಿ ಹೆಚ್ಚುವರಿ ದಾಖಲೆಗಳು ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಲು ಸಂಬಂಧಪಟ್ಟವರಿಗೆ ಎನ್‌ಜಿಟಿ ಅವಕಾಶ ನೀಡಬೇಕು. ಪೀಠದ ಆದೇಶ ತಲುಪಿದ ಕೂಡಲೇ ವಿಚಾರಣೆ ದಿನಾಂಕವನ್ನು ಎನ್‌ಜಿಟಿ ನಿಗದಿ ಪಡಿಸಬೇಕು’ ಎಂದು ಆದೇಶಿಸಿದೆ.

ಪ್ರಕರಣವೇನು?: ಬೆಂಗಳೂರು ನಿವಾಸಿಯಾದ ಎಚ್‌.ಪಿ.ರಾಜಣ್ಣ ಎನ್ನುವವರು ಬೆಂಗಳೂರು ನಗರ ಜಿಲ್ಲೆಯ ವರ್ತೂರು ಹೋಬಳಿಯಲ್ಲಿ ಕೈಕೊಂಡ್ರಹಳ್ಳಿ ಕೆರೆಯ ಸಮೀಪ ನಿರ್ಮಾಣವಾಗಲಿರುವ ಯೋಜನೆಗಳ ವಿರುದ್ಧ ಎನ್‌ಜಿಟಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಬಫರ್‌ ವಲಯದಲ್ಲೇ ಯೋಜನೆಯಿದ್ದು, ಇದಕ್ಕೆ 2018 ಜನವರಿ 10ರಂದು ಇಸಿ ನೀಡಿರುವುದನ್ನು ಅವರು ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.