ADVERTISEMENT

ಮತಾಂತರಗೊಂಡ ಪರಿಶಿಷ್ಟರಿಗೆ ಎಸ್‌.ಸಿ ಸ್ಥಾನ: ಪರಿಶೀಲನೆಗೆ ಆಯೋಗ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 20:56 IST
Last Updated 7 ಅಕ್ಟೋಬರ್ 2022, 20:56 IST
   

ನವದೆಹಲಿ: ಪರಿಶಿಷ್ಟ ಜಾತಿಯ ವ್ಯಕ್ತಿಗಳು ಬೇರೆ ಧರ್ಮಗಳಿಗೆ ಮತಾಂತರ
ಗೊಂಡರೆ ಅವರಿಗೆ ಪರಿಶಿಷ್ಟ ಜಾತಿ ಸ್ಥಾನ ಮುಂದುವರಿಸಬೇಕೇ ಎಂಬುದನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್‌ ನೇತೃತ್ವದ ವಿಚಾರಣಾ ಆಯೋಗವನ್ನು ಕೇಂದ್ರವು ನೇಮಿಸಿದೆ.

ನಿವೃತ್ತ ಐಎಎಸ್‌ ಅಧಿಕಾರಿ ಡಾ.ರವೀಂದರ್‌ ಕುಮಾರ್‌ ಜೈನ್‌ ಮತ್ತು ಪ್ರಾಧ್ಯಾಪಕಿ ಸುಷ್ಮಾ ಯಾದವ್‌ ಅವರು ಆಯೋಗದ ಸದಸ್ಯರಾಗಿದ್ದಾರೆ.

ಕಾಲ ಕಾಲಕ್ಕೆ ಹೊರಡಿಸಲಾದ ರಾಷ್ಟ್ರಪತಿಯವರ ಆದೇಶದಲ್ಲಿ ಉಲ್ಲೇಖವಾಗದ ಧರ್ಮಕ್ಕೆ ಮತಾಂತರಗೊಂಡ, ಚಾರಿತ್ರಿಕವಾಗಿ ಪರಿಶಿಷ್ಟ ಜಾತಿಯವರಾಗಿರುವವರಿಗೆ ಪರಿಶಿಷ್ಟ ಜಾತಿ ಸ್ಥಾನ ಕೊಡಬೇಕೇ ಎಂಬುದನ್ನು ಈ ಆಯೋಗವು ಪರಿಶೀಲನೆಗೆ ಒಳಪಡಿಸಲಿದೆ. ರಾಷ್ಟ್ರಪತಿಯವರ ಆದೇಶದ ಪ್ರಕಾರ, ಮತಾಂತರದ ನಂತರ ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಸಿಖ್‌ ಧರ್ಮವನ್ನು ಅನುಸರಿಸುವವರಿಗೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನ ದೊರೆಯುತ್ತದೆ.

ADVERTISEMENT

ಬೇರೆ ಧರ್ಮಗಳಿಗೆ ಮತಾಂತರಗೊಂಡ ಪರಿಶಿಷ್ಟ ಜಾತಿಯ ವ್ಯಕ್ತಿಗಳ ಪದ್ಧತಿ, ಸಂಪ್ರದಾಯ, ಸಾಮಾಜಿಕ ಸ್ಥಾನಮಾನ, ಅವರು ಅನುಭವಿಸುತ್ತಿದ್ದ ಶೋಷಣೆ ಮತ್ತು ತಾರತಮ್ಯದಲ್ಲಿ ಆಗಿರುವ ಬದಲಾವಣೆ ಕುರಿತು ಕೂಡ ಆಯೋಗವು ಪರಿಶೀಲನೆ ನಡೆಸಲಿದೆ. ಈ ಜನರಿಗೆ ಪರಿಶಿಷ್ಟ ಜಾತಿ ಸ್ಥಾನ ನೀಡುವುದರಿಂದ ಆಗುವ ಪರಿಣಾಮಗಳನ್ನೂ ಅಧ್ಯಯನ ಮಾಡಲಿದೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧಿಸೂಚನೆಯಲ್ಲಿ ಹೇಳಲಾಗಿದೆ. ವರದಿ ನೀಡಲು ಆಯೋಗಕ್ಕೆ ಎರಡು ವರ್ಷಗಳ ಕಾಲಾವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.