ADVERTISEMENT

ಶಾಲಾ ಶೈಕ್ಷಣಿಕ ಪ್ರವಾಸ | ಸುರಕ್ಷತೆಗೆ ಆದ್ಯತೆ ಕೊಡಿ: ಪೊಲೀಸರಿಂದ ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 18:39 IST
Last Updated 6 ಡಿಸೆಂಬರ್ 2025, 18:39 IST
   

ಬೆಂಗಳೂರು: ಶಾಲಾ, ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ ಆರಂಭ ಆಗಿದ್ದು, ಪ್ರಯಾಣ ಮಾಡುವ ಬಸ್ ಸೇರಿದಂತೆ ಇನ್ನಿತರ ವಾಹನಗಳಲ್ಲಿ ಸುರಕ್ಷತೆಗೆ ಆದ್ಯತೆ ಕೊಡಬೇಕು ಎಂದು ಸಂಚಾರ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಪೊಲೀಸರು ಸುತ್ತೋಲೆ ಹೊರಡಿಸಿದ್ದಾರೆ.

ಕೆಎಸ್​​ಆರ್​​ಟಿಸಿ ಹಾಗೂ ಖಾಸಗಿ ಬಸ್​​ಗಳಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯಲಾಗುತ್ತಿದೆ. ಪ್ರವಾಸಕ್ಕೆ ತೆರಳುವ ಮುನ್ನ ಬಸ್ ‘ಫಿಟ್‌ನೆಸ್’ ಹೊಂದಿರುವ ಬಗ್ಗೆ ಆರ್​​ಟಿಒಯಿಂದ ಖಾತ್ರಿ ಪಡಿಸಿಕೊಂಡಿರಬೇಕು ಎಂದು ತಿಳಿಸಲಾಗಿದೆ.

ಚಾಲಕರು ಮಾದಕ ದ್ರವ್ಯ ಹಾಗೂ ಮದ್ಯಪಾನ ಸೇವನೆ ವ್ಯಸನಿಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪ್ರವಾಸದ ಅವಧಿಯಲ್ಲಿ ರಾತ್ರಿ ವೇಳೆ ತಂಗುವ ಅವಶ್ಯಕತೆ ಕಂಡು ಬಂದರೆ ಚಾಲಕರ ಮೇಲೆ ಶಿಕ್ಷಕರು ನಿಗಾ ವಹಿಸಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ADVERTISEMENT

ಪ್ರವಾಸದ ಸಂದರ್ಭದಲ್ಲಿ ಬೇರೆ, ಬೇರೆ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಾಗ ಆಯಾ ಜಿಲ್ಲೆಯ ಪೊಲೀಸ್ ನಿಯಂತ್ರಣ ಕೊಠಡಿ ಹಾಗೂ ಸಂಬಂಧಪಟ್ಟ ದೂರವಾಣಿ ಸಂಖ್ಯೆಗಳನ್ನು ಪಡೆದುಕೊಂಡಿರಬೇಕು ಎಂದು ಎಡಿಜಿಪಿ ಹಿತೇಂದ್ರ ಅವರು ತಿಳಿಸಿದ್ದಾರೆ.

ಪ್ರವಾಸದ ಉದ್ದೇಶ, ಸುರಕ್ಷತೆ, ಅನುಮತಿ, ವೆಚ್ಚದ ವಿವರಗಳು, ಪೋಷಕರ ಸಮ್ಮತಿ, ತುರ್ತು ಸಂಪರ್ಕ ಮತ್ತು ಮಾರ್ಗದರ್ಶನ ಮುಖ್ಯವಾಗಿದ್ದು, ಇವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.

‘ಪ್ರವಾಸದ ಸ್ಥಳ, ದಿನಾಂಕ, ಅವಧಿ, ಶೈಕ್ಷಣಿಕ ಉದ್ದೇಶವನ್ನು ಮೊದಲೇ ನಿರ್ಧರಿಸಿರಬೇಕು. ಶಾಲಾ ಮುಖ್ಯಶಿಕ್ಷಕರು ಜಿಲ್ಲಾಡಳಿತದಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕು. ಬಸ್​​ಗಳು ಮತ್ತು ಸಾರಿಗೆ ವ್ಯವಸ್ಥೆ ವಿಶ್ವಾಸಾರ್ಹ ಸಂಸ್ಥೆಯಿಂದ ಇರಬೇಕು’ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

‘ಬಸ್‌ನಲ್ಲಿ ಕನಿಷ್ಠ ಒಬ್ಬ ಶಿಕ್ಷಕರು ಮತ್ತು ಒಬ್ಬ ಗಾರ್ಡ್ ಇರುವಂತೆ ನೋಡಿಕೊಳ್ಳಬೇಕು. ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ತುರ್ತು ವೈದ್ಯಕೀಯ ಸಂಪರ್ಕದ ವ್ಯವಸ್ಥೆ ಇರಬೇಕು. ವಿದ್ಯಾರ್ಥಿಗಳ ಪೂರ್ಣ ಪಟ್ಟಿ, ಪೋಷಕರ ಮೊಬೈಲ್ ನಂಬರ್ ಸಂಗ್ರಹಿಸಬೇಕು. ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಪ್ರಯಾಣದ ಪ್ರತಿ ಹಂತದಲ್ಲೂ ಸುರಕ್ಷತೆ ಕಾಪಾಡಿಕೊಳ್ಳಬೇಕು’ ಎಂದು ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.