ADVERTISEMENT

ನ.2ರಿಂದ ಶಿಕ್ಷಕರಿಗಷ್ಟೇ ಶಾಲೆ

ವಿದ್ಯಾಗಮ ತಾತ್ಕಾಲಿಕ ಸ್ಥಗಿತ l ಮುಂದಿನ ಕಲಿಕಾ –ಬೋಧನಾ ಯೋಜನೆ ರೂಪಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 19:31 IST
Last Updated 30 ಅಕ್ಟೋಬರ್ 2020, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಬಹು ಚರ್ಚೆಗೆ ಕಾರಣವಾಗಿದ್ದ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ರಾಜ್ಯ ಸರ್ಕಾರ, ನ.2 ರಿಂದ ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಿಬ್ಬಂದಿ ಮತ್ತು ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಈ ಅವಧಿಯಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸಬಾರದು ಎಂದೂ ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟ ನಿರ್ದೇಶನ ನೀಡಿದೆ.

ವಿದ್ಯಾಗಮ ಯೋಜನೆಯಡಿ ಈವರೆಗೆ ವಿದ್ಯಾರ್ಥಿಗಳಲ್ಲಾದ ಪ್ರಗತಿಯನ್ನು ವಿಶ್ಲೇಷಿಸಿ, ಮುಂದಿನ ಕಲಿಕೆಗೆ ಅವಶ್ಯ ಬೋಧನಾ–ಕಲಿಕಾ ಯೋಜನೆ ರೂಪಿಸಲು ಸೂಚಿಸಲಾಗಿದ್ದು, ಶಿಕ್ಷಕರು ನೀಡುವ ವರದಿ ಆಧಾರದ ಮೇಲೆ ವಿದ್ಯಾಗಮ ಕಾರ್ಯಕ್ರಮವನ್ನು ಮತ್ತೆ ಮುಂದುವರಿಸಬೇಕೆ, ಬೇಡವೇ ಎಂಬುದನ್ನು ತೀರ್ಮಾನಿಸಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ವಿದ್ಯಾಗಮ ಯೋಜನೆ ಕುರಿತು ಈ ಹಿಂದೆಯೂ ಶಿಕ್ಷಕರಿಂದ ವರದಿ ತರಿಸಿಕೊಳ್ಳಲಾಗಿತ್ತು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಿದೆ ಎಂಬ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು’ ಎಂದು ಅವರು ಹೇಳಿದರು.

ಆನ್‌ಲೈನ್ ಕಲಿಕೆಗೆ ಒತ್ತು: ಸದ್ಯ ಡಿಎಸ್‌ಇಆರ್‌ಟಿಯ ಯೂಟ್ಯೂಬ್ ಚಾನೆಲ್‌ ‘ಜ್ಞಾನದೀಪ’ದಲ್ಲಿ ಅಳವಡಿಸಿರುವ ವಿಡಿಯೊಗಳನ್ನು ಹಾಗೂ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾಠಗಳನ್ನು ನೋಡಲು ಮತ್ತು ಕಲಿಯಲು ಮಕ್ಕಳಿಗೆ ತಿಳಿಸಬೇಕು. ದೀಕ್ಷಾ ಪೋರ್ಟಲ್‌ನಲ್ಲಿ ಅಳವಡಿಸಿರುವ ಕಲಿಕಾಸಾಮಗ್ರಿಗಳನ್ನು ಬಳಸಲು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು ಎಂದೂ ಶಿಕ್ಷಣ ಇಲಾಖೆ ಸೂಚಿಸಿದೆ.

‘ಮುಂದಿನ ದಿನಗಳಲ್ಲಿ ದೂರದರ್ಶನ ಮತ್ತು ಆಕಾಶವಾಣಿ ಮೂಲಕ ಇನ್ನೂ ಹೆಚ್ಚಿನ ಕಲಿಕಾ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಉದ್ದೇಶಿಸಲಾಗಿದೆ’ ಎಂದು ಇಲಾಖೆಯ ಆಯುಕ್ತ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.

ರಾಜ್ಯೋತ್ಸವ:ಅ.12 ರಿಂದ 30ರವರೆಗೆಶಿಕ್ಷಕರಿಗೆ ಮಧ್ಯಂತರ ರಜೆ ಘೋಷಿಸಲಾಗಿತ್ತು. ನ.2ರಿಂದ ಅಧಿಕೃತವಾಗಿ ಶಾಲೆ
ಪ್ರಾರಂಭವಾಗುತ್ತಿದ್ದರೂ, 31ರಂದು ವಾಲ್ಮೀಕಿ ಜಯಂತಿ ಮತ್ತು ನ.1ರಂದು ರಾಜ್ಯೋತ್ಸವ ಆಚರಣೆಗೆ ಶಿಕ್ಷಕರು
ಮತ್ತು ಸಿಬ್ಬಂದಿ ಹಾಜರಾಗಬೇಕು. ಕೋವಿಡ್‌ ಮಾರ್ಗಸೂಚಿಯನ್ವಯವೇ ಈ ಕಾರ್ಯಕ್ರಮ ನಡೆಸಬೇಕು ಎಂದು ಇಲಾಖೆ ಹೇಳಿದೆ.

ಡಿಸೆಂಬರ್ ಎರಡನೇ ವಾರದಲ್ಲಿ ಮಕ್ಕಳಿಗೆ ಶಾಲೆ?

ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳನ್ನು ಪುನರಾರಂಭಿಸಲುಸಾರ್ವಜನಿಕ ಶಿಕ್ಷಣ ಇಲಾಖೆಯು ಸಿದ್ಧತೆ ಆರಂಭಿಸಿದೆ. ಶಾಲೆ ಪುನರಾರಂಭದ ಸಾಧಕ–ಬಾಧಕಗಳ ಕುರಿತು ಚರ್ಚಿಸಲು ಇಲಾಖೆಯ ಆಯುಕ್ತರು ನ.2ರಂದು ಎಲ್ಲ ಜಿಲ್ಲೆಗಳ ಉಪನಿರ್ದೇಶಕರ ಜೊತೆ ವಿಡಿಯೊ ಸಂವಾದ ನಡೆಸಲಿದ್ದಾರೆ.

‘ಡಿಸೆಂಬರ್‌ ಎರಡನೇ ವಾರದ ವೇಳೆಗೆ ಶಾಲೆ ಪ್ರಾರಂಭಿಸುವ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಜಲ ಮಿಷನ್‌ ಅನ್ವಯ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ, ಹೆಚ್ಚುವರಿ ಶೌಚಾಲಯಗಳ ಅಗತ್ಯವಿದ್ದರೆ ಅದರ ಬಗ್ಗೆ ವರದಿ, ಶಾಲಾ ಕಟ್ಟಡ ದುರಸ್ತಿಯ ಕುರಿತು ಪ್ರಗತಿಯ ವರದಿ ನೀಡುವಂತೆ ಸೂಚಿಸುವ ಸಾಧ್ಯತೆ ಇದೆ.

‘ಮುಖ್ಯಮಂತ್ರಿಯವರೊಂದಿಗೆ ಇತ್ತೀಚೆಗೆ ನಡೆದ ಸಭೆಯಲ್ಲಿಯೂ ಈ ಬಗ್ಗೆ ಚರ್ಚಿಸಲಾಗಿದೆ. ದಿನ ಬಿಟ್ಟು ದಿನ ಅಥವಾ ಹಂತ–ಹಂತವಾಗಿ ಶಾಲೆಗಳನ್ನು ಪುನರಾರಂಭಿಸಲು ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ. ಅದಕ್ಕೂ ಮುನ್ನ, ಪದವಿ–ಸ್ನಾತಕೋತ್ತರ ಪದವಿ ಕಾಲೇಜುಗಳು ಪುನರಾರಂಭದ ನಂತರ ನಡೆಯುವ ಬೆಳವಣಿಗೆಗಳನ್ನು ಗಮನಿಸಿ ನಿರ್ಧಾರ ಕೈಗೊಳ್ಳುವಂತೆಯೂ ಹೇಳಿದ್ದಾರೆ’ ಎಂಬುದಾಗಿ ಅಧಿಕಾರಿಯೊಬ್ಬರು ತಿಳಿಸಿದರು.

ಆಶ್ರಮ ಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆ ರದ್ದು

ಆಶ್ರಮ ಶಾಲಾ ಶಿಕ್ಷಕರ ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆಯನ್ನು ಕರ್ನಾಟಕ ಲೋಕ ಸೇವಾ ಆಯೋಗವು ರದ್ದುಪಡಿಸಿದೆ.

ಹೈದರಾಬಾದ್ ಕರ್ನಾಟಕ ಭಾಗಕ್ಕೆ 37 ಹುದ್ದೆ ಸೇರಿದಂತೆ, ಒಟ್ಟು 493 ಹುದ್ದೆಗಳ ನೇಮಕಕ್ಕೆ 2017ರ ನವೆಂಬರ್‌ನಲ್ಲಿ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿತ್ತು. ಆದರೆ, ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕರ ಕೋರಿಕೆಯ ಮೇರೆಗೆ, 2018ರ ಜೂನ್‌ನಲ್ಲಿ ಈ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿದು ಅಧಿಸೂಚನೆ ಹೊರಡಿಸಲಾಗಿತ್ತು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕವೇ ಈ ಹುದ್ದೆಗಳನ್ನು ನೇಮಕ ಮಾಡಲು, ನಿರ್ದೇಶನಾಲಯದ ನಿರ್ದೇಶಕರು ಅವಕಾಶ ಕಲ್ಪಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಗೆ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸುವ ಮಾನದಂಡ ಹಾಗೂ ಅರ್ಹತೆಗಳ ಅನ್ವಯವೇ ಸದರಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ತೀರ್ಮಾನಿಸಿರುವುದರಿಂದ ಈ ಅಧಿಸೂಚನೆಯನ್ನು ರದ್ದುಗೊಳಿಸಲಾಗಿದೆ ಎಂದು ಆಯೋಗ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.