ADVERTISEMENT

1 ರಿಂದ 8ನೇ ತರಗತಿ ಆರಂಭಕ್ಕೆ ಚಿಂತನೆ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 9:40 IST
Last Updated 18 ಆಗಸ್ಟ್ 2021, 9:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ಕೋವಿಡ್ ಕಾರ್ಯಪಡೆ, ಮಕ್ಕಳ ತಜ್ಞರು ಹಾಗೂ ತಾಂತ್ರಿಕ ಸಮಿತಿ ವರದಿ ಆಧರಿಸಿ 9, 10 ಹಾಗೂ ಪಿಯು ತರಗತಿ ಆರಂಭಿಸಲಾಗುತ್ತಿದೆ. ಇದರ ಯಶಸ್ಸು ನೋಡಿಕೊಂಡು 1 ರಿಂದ 8 ನೇ ತರಗತಿ ಶುರು ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪೋಷಕರು ಹಾಗು ಮಕ್ಕಳ ಧೈರ್ಯದ ಮೇಲೆ ಶಾಲೆ ತೆರೆಯಲಾಗುತ್ತಿದೆ. ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ಮಕ್ಕಳ ಮನವೊಲಿಸಲು ಶಿಕ್ಷಕರಿಗೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಬಲವಂತ ಮಾಡುವುದಿಲ್ಲ. ಪೋಷಕರು ಒಪ್ಪದಿದ್ದರೆ ಆನ್ ಲೈನ್ ತರಗತಿ ಮುಂದುವರಿಸಲಾಗುವುದು. ಈ ಬಗ್ಗೆ ಆತಂಕ ಬೇಡ' ಎಂದು ಹೇಳಿದರು.

ತರಗತಿಗೆ ಹಾಜರಾದ ವಿದ್ಯಾರ್ಥಿಗಳಿಗೆ ಒಂದು ವೇಳೆ ಸೋಂಕು ತಗುಲಿದರೆ ಒಂದು ವಾರ ಶಾಲೆ ಬಂದ್ ಮಾಡಲಾಗುವುದು. ಸಂಪೂರ್ಣ ಸ್ಯಾನಿಟೈಸ್ ಮಾಡಿ ಮತ್ತೆ ಶಾಲೆ ತೆರೆಯಲಾಗುವುದು. ಮಕ್ಕಳಿಗೆ ಕಲಿಕಾ ವಾತಾವರಣ ನಿರ್ಮಿಸಲು ಒಂದೂವರೆ ವರ್ಷದಿಂದ ಪ್ರಯತ್ನಿಸಲಾಗುತ್ತಿದೆ. ಅನ್ ಲೈನ್ ಮೂಲಕ ತರಗತಿ ನಡೆಸಲಾಗುತ್ತಿದ್ದು, ಶೇ.30 ರಿಂದ 40 ರಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ' ಎಂದರು.

ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 8.75 ಲಕ್ಷ ಮಕ್ಕಳು ತೇರ್ಗಡೆ ಹೊಂದಿದ್ದಾರೆ. ಇಷ್ಟೂ ಮಕ್ಕಳು ಪಿಯು ಪ್ರವೇಶ ಪಡೆಯುವುದು ಕಷ್ಟ. ಆದರೂ, 12 ಲಕ್ಷ ಮಕ್ಕಳು ಪ್ರವೇಶ ಪಡೆಯುವಷ್ಟು ಸೀಟು ಇವೆ. ಕೆಲವೆಡೆ ಸಮಸ್ಯೆ ಆಗಬಹುದು. ಸೀಟುಗಳನ್ನು ಹೆಚ್ಚಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಬಿ.ಸಿ.ನಾಗೇಶ್ ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.‌ಬದರಿನಾಥ್, ಬಿಜೆಪಿ ವಿಭಾಗೀಯ ಪ್ರಭಾರಿ ಜಿ.ಎಂ. ಸುರೇಶ್, ಮಾಜಿ ಜಿಲ್ಲಾಧ್ಯಕ್ಷ ಟಿ.ಜಿ.ನರೇಂದ್ರನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.