
ಬೆಂಗಳೂರು: ಎಸ್‌ಸಿಎಸ್‌ಪಿ– ಟಿಎಸ್‌ಪಿ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಬಾರದು ಮತ್ತು ಈ ಬಾರಿ ಪರಿಶಿಷ್ಟ ಸಮುದಾಯಕ್ಕೆ ಇನ್ನೂ ಹೆಚ್ಚಿನ ಅನುದಾನ ನಿಗದಿ ಮಾಡಬೇಕು ಎಂದು ಪರಿಶಿಷ್ಟ ಜಾತಿ ಪ್ರತಿನಿಧಿಸುವ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಸೋಮವಾರ ನಡೆದ ಬಜೆಟ್ ಪೂರ್ವ ಸಭೆಯಲ್ಲಿ ಮುಖ್ಯಮಂತ್ರಿಯವರು ಪರಿಶಿಷ್ಟ ಜಾತಿಯ ಶಾಸಕರಿಂದ ಸಲಹೆಗಳನ್ನು ಪಡೆದರು.
ಆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ, ‘ಪರಿಶಿಷ್ಟ ಸಮುದಾಯದ ಶಾಸಕರು ಹಲವು ಸಮಸ್ಯೆಗಳ ಕುರಿತು ಚರ್ಚೆ ಮಾಡಿದ್ದಾರೆ. ಪರಿಶಿಷ್ಟರಿಗೆ ಅನುದಾನ ನಿಗದಿ ಮಾಡಬೇಕು ಎಂದು ಕಾನೂನು ತಂದವರೇ ಸಿದ್ದರಾಮಯ್ಯ. ಅದರ ಅನ್ವಯ ಕಳೆದ ವರ್ಷ ₹42 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದರು. ಆದರೆ, ಆ ಹಣವನ್ನೆಲ್ಲಾ ವಿವಿಧ ಇಲಾಖೆಗಳಿಗೆ ನೀಡಲಾಗಿತ್ತು. ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಶಾಸಕರು ಸಲಹೆಗಳನ್ನು ನೀಡಿದ್ದಾರೆ’ ಎಂದರು.
ಎರಡೂವರೆ ಲಕ್ಷ ಹುದ್ದೆಗಳು ಖಾಲಿ ಇದ್ದು, ಇದರಲ್ಲಿ 42 ಸಾವಿರ ಹುದ್ದೆಗಳಿಗೆ ಎಸ್‌ಸಿ– ಎಸ್‌ಟಿ ಅಭ್ಯರ್ಥಿಗಳನ್ನು ಭರ್ತಿ ಮಾಡಬೇಕಿದೆ. ಆದಷ್ಟು ಬೇಗ ಈ ಹುದ್ದೆಗಳನ್ನು ತುಂಬಬೇಕು. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನೂ ಭರ್ತಿ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎಂದು ಅವರು ಹೇಳಿದರು.
‘ಎಸ್‌ಸಿ–ಎಸ್‌ಟಿ ಶಾಸಕರು ರಾಹುಲ್‌ಗಾಂಧಿ ಭೇಟಿ ಮಾಡುವ ಯಾವುದೇ ಬೆಳವಣಿಗೆಗಳು ಆಗಿಲ್ಲ. ಅದರ ಅಗತ್ಯವೂ ಇಲ್ಲ. ಯಾವುದೇ ವಿಚಾರ ಹೈಕಮಾಂಡ್‌ಗೂ ಹೋಗುವ ಮುನ್ನ ಇಲ್ಲೇ ಆ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ’ ಎಂದರು.
ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ , ‘ಇದೇ ಮೊದಲ ಬಾರಿಗೆ ಪರಿಶಿಷ್ಟ ಸಮುದಾಯದ ಬೇಡಿಕೆಗಳ ಕುರಿತು ಬಜೆಟ್ ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ. ಪರಿಶಿಷ್ಟಜಾತಿಗೆ ಮೀಸಲಾದ ಹಣವನ್ನು ಸರಿಯಾಗಿ ಬಳಸಬೇಕು. ಅನ್ಯ ಉದ್ದೇಶಗಳಿಗೆ ಬಳಸಬಾರದು. ನಿಗದಿ ಮಾಡಿದ ಅಷ್ಟೂ ಹಣವನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದೇವೆ’ ಎಂದರು.
ಗುತ್ತಿಗೆ ನೀಡುವ ವಿಚಾರದಲ್ಲೂ ಪರಿಶಿಷ್ಟ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕೈಗಾರಿಕಾ ಪ್ರದೇಶಗಳಲ್ಲಿ ಪರಿಶಿಷ್ಟ ಸಮುದಾಯದ ಉದ್ಯಮಿಗಳಿಗೆ ಆದ್ಯತೆ ಮೇರೆಗೆ ಭೂಮಿಯನ್ನು ನೀಡಬೇಕು ಎಂದು ಕೋರಿದ್ದಾಗಿ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.