ADVERTISEMENT

ನಿಷೇಧ ಅಸ್ತ್ರಕ್ಕೆ ಬಗ್ಗುವುದಿಲ್ಲ: ಆಶ್ರಫ್ ಮಾಚೂರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 20:00 IST
Last Updated 18 ಜನವರಿ 2020, 20:00 IST

ಶಹಾಪುರ (ಯಾದಗಿರಿ ಜಿಲ್ಲೆ): ‘ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸಂಘಟನೆಯಲ್ಲ. ರಾಜಕೀಯ ಪಕ್ಷವಾಗಿದೆ ಎಂಬುದನ್ನು ಕೋಮವಾದಿ ಸರ್ಕಾರ ಅರ್ಥಮಾಡಿಕೊಳ್ಳಬೇಕು. ಅಧಿಕಾರ ದುರ್ಬಳಕೆ ಮಾಡಿಕೊಂಡು ನಿಷೇಧ ಎಂಬ ಅಸ್ತ್ರ ಬಳಸಿದರೆ ನಾವು ಬಗ್ಗುವುದಿಲ್ಲ. ಕಾನೂನು ಹೋರಾಟ ಮಾಡುತ್ತೇವೆ’ ಎಂದು ಎಸ್‌ಡಿಪಿಐನ ರಾಜ್ಯ ಘಟಕದ ಕಾರ್ಯದರ್ಶಿ ಆಶ್ರಫ್ ಮಾಚೂರ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘10 ವರ್ಷಗಳಿಂದ ಸಕ್ರಿಯ ರಾಜಕಾರಣ ಮಾಡುತ್ತಿರುವ ನಮ್ಮ ಪಕ್ಷವು ಒಂದೇ ಒಂದು ದೇಶದ್ರೋಹ ಕೃತ್ಯ ಎಸಗಿಲ್ಲ. ಉಗ್ರರ ನಂಟು ಎಂಬ ಹಳೆಯ ಕಟ್ಟು ಕತೆಯನ್ನು ಹೆಣೆದು ನಮ್ಮ ಶಕ್ತಿಯನ್ನು ಕುಂದಿಸಲು ಹೊರಟಿರುವುದು ಸರಿಯಲ್ಲ’ ಎಂದರು.

‘ಬೆಂಗಳೂರಿನಲ್ಲಿ 25 ದಿನಗಳ ಹಿಂದಿನ ಘಟನೆಯನ್ನು ನೆಪವಾಗಿ ಇಟ್ಟುಕೊಂಡು ಹಿಂದೂ ಮುಖಂಡರ ಹತ್ಯೆ ಸಂಚು ಬಯಲು ಎಂಬ ಹೊಸ ನಾಟಕ ಆರಂಭಿಸಿದ್ದಾರೆ. 800 ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ, ಕಲ್ಲು ತೂರಾಟ ಮಾಡಲು ಯತ್ನಿಸಿದ್ದಾರೆ ಎಂಬ ಸಬೂಬು ಹೇಳುವ ಸರ್ಕಾರ ಅಂದಿನ ದಿನವೇ ಯಾಕೆ ದುಷ್ಟಶಕ್ತಿಗಳನ್ನು ಬಂಧಿಸಲಿಲ್ಲ‌’ ಎಂದು ಪ್ರಶ್ನಿಸಿದ ಅವರು, ‘ಬಂಧಿತರಿಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.