ADVERTISEMENT

ಕಾಡು ಕಟ್ಟಲು ಹೊರಟ ಶಾಲಾ ಚಿಣ್ಣರು

ಕಾಡಿನ ಮರಗಳ ಬೀಜ ಸಂಗ್ರಹಿಸುವ ಕೆಲಸ l ವೃಕ್ಷ ಸಂಪತ್ತು ವೃದ್ಧಿಗೆ ‘ಬೀಜದಾನ’ ಅಭಿಯಾನ

ಸಂಧ್ಯಾ ಹೆಗಡೆ
Published 1 ಜುಲೈ 2019, 18:21 IST
Last Updated 1 ಜುಲೈ 2019, 18:21 IST
ಬೀಜದುಂಡೆ ಸಿದ್ಧಪಡಿಸುತ್ತಿರುವ ಮಕ್ಕಳು
ಬೀಜದುಂಡೆ ಸಿದ್ಧಪಡಿಸುತ್ತಿರುವ ಮಕ್ಕಳು   

ಶಿರಸಿ: ಈ ಶಾಲೆಯ ಮಕ್ಕಳು ನಿತ್ಯ ಶಾಲೆಗೆ ಬರುವಾಗ ಬೊಗಸೆ ತುಂಬ ಬೀಜ ತಂದು, ಶಾಲೆಯ ಚೀಲ ತುಂಬಿಸುತ್ತಾರೆ. ಬಿಡುವ ವೇಳೆಯಲ್ಲಿ ಖಾಲಿ ಚೀಲ ಹಿಡಿದು ಮನೆ–ಮನೆಗೆ ಹೋಗಿ ಬೀಜ ಭಿಕ್ಷೆ ಬೇಡುತ್ತಾರೆ!

ಪರಿಸರ ಸಂರಕ್ಷಣೆ, ಹಸಿರು ನಾಟಿಯ ಕನಸು ಹೊತ್ತ, ತಾಲ್ಲೂಕಿನ ತಿಗಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು, ‘ನೀವು ಬೀಜ ಸಂಗ್ರಹಿಸಿಡಿ, ನಾವು ನಿಮ್ಮ ಮನೆಗೆ ಬರುತ್ತೇವೆ’ ಎಂಬ ಘೋಷವಾಕ್ಯದೊಂದಿಗೆ ‘ಬೀಜದಾನ’ ಅಭಿಯಾನ ಆರಂಭಿಸಿದ್ದಾರೆ. ಊರಿನ ಮನೆಗಳಿಂದ ಕಾಡು ಮರಗಳು, ಹಣ್ಣಿನ ಬೀಜಗಳನ್ನು ಸಂಗ್ರಹಿಸಿ, ಸುಮಾರು 3,500 ಬೀಜದುಂಡೆಗಳನ್ನು ಸಿದ್ಧಪಡಿಸಿದ್ದಾರೆ.

‘ಬೇಸಿಗೆ ರಜೆ ಆರಂಭವಾಗುವ ಪೂರ್ವದಲ್ಲಿ ಎಲ್ಲ ಮಕ್ಕಳು, ಪಾಲಕರ ಬಳಿ ಬಳಸಿ ಎಸೆಯುವ ಹಲಸು, ನೇರಳೆ, ಹುಣಸೆ, ಮಾವು ಇಂತಹ ಹಣ್ಣಿನ ಬೀಜಗಳನ್ನು ಸಂಗ್ರಹಿಸಿಡಲು ಹೇಳಿದ್ದೆವು. ಹೀಗೆ ದಾಸ್ತಾನು ಮಾಡಿರುವ ಬೀಜವನ್ನು ಶಾಲೆ ಆರಂಭವಾದ ಮೇಲೆ ಮಕ್ಕಳು ಶಾಲೆಗೆ ತಂದು ಕೊಟ್ಟಿದ್ದಾರೆ. ಮಕ್ಕಳೇ ಮನೆ–ಮನೆಗೆ ಭೇಟಿ ನೀಡಿ, ಸಂಗ್ರಹಿಸಿರುವ ಬೀಜಗಳನ್ನು ತರುತ್ತಿದ್ದಾರೆ’ ಎನ್ನುತ್ತಾರೆ ಈ ಕಾರ್ಯಕ್ರಮದ ರೂವಾರಿ ಮತ್ತು ಶಿಕ್ಷಕ ಮಾರುತಿ ಉಪ್ಪಾರ.

ADVERTISEMENT

‘ಸ್ಕೌಟ್ಸ್ ಮತ್ತು ಗೈಡ್ಸ್‌ ರಾಜ್ಯ ಘಟಕದ ಅಧ್ಯಕ್ಷ ಪಿ.ಜಿ.ಆರ್. ಸಿಂಧ್ಯಾ ಅವರು ಈ ವರ್ಷ ಒಂದು ಕೋಟಿ ಬೀಜದುಂಡೆ ಸಿದ್ಧಪಡಿಸಿ, ಗಿಡ ಬೆಳೆಸಬೇಕು ಎಂದು ಹೇಳಿದ್ದರು. ಅವರ ಮಾತಿನಿಂದ ಪ್ರೇರಿತನಾಗಿ, ಮಕ್ಕಳ ಬಳಿ, ತಿನ್ನುವ ಹಣ್ಣಿನ ಬೀಜಗಳನ್ನು ಎಸೆಯುವ ಬದಲಾಗಿ, ಡಬ್ಬದಲ್ಲಿ ಸೇರಿಸಿಡುವಂತೆ ಹೇಳಿದ್ದೆ. ಮಕ್ಕಳೇ ಉತ್ಸಾಹದಿಂದ ಮಣ್ಣು, ಗೊಬ್ಬರ ಕಲಸಿ, ಅದರೊಳಗೆ ಹಾಕಿರುವ ಬೀಜ ಈಗ ಮೊಳಕೆಯೊಡೆದಿದೆ. ಮುಂಗಾರು ಚುರುಕಾದ ಮೇಲೆ, ಇವುಗಳ ಬಿತ್ತನೆ ಮಾಡಲಾಗುತ್ತದೆ’ ಎಂದು ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಘಟಕದ ಕಾರ್ಯದರ್ಶಿಯೂ ಆಗಿರುವ ಮಾರುತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಅಭಿಯಾನ ಮಳೆಗಾಲದಲ್ಲಿ ಮಾತ್ರವಲ್ಲ, ವರ್ಷವಿಡೀ ನಡೆಯುತ್ತದೆ. ಊರಿನ ಮನೆಗಳಿಗೆ ಭೇಟಿ ನೀಡುವ ಆಶಾ ಕಾರ್ಯಕರ್ತೆಯರು ನಮ್ಮ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಈ ವರ್ಷ 15ಸಾವಿರ ಬೀಜದುಂಡೆ ಸಿದ್ಧಪಡಿಸುವ ಗುರಿಯಿದೆ. ಪಾಲಕರು, ಮಕ್ಕಳಲ್ಲಿ ಗಿಡ ಬೆಳೆಸುವ ಪ್ರಜ್ಞೆ ಜಾಗೃತವಾಗಿದೆ’ ಎಂದು ಅವರು ಹೇಳಿದರು.

**

ದೊಡ್ಡ ಮರವಾಗಿ ಬೆಳೆಯುವ ಮತ್ತು ಸುಲಭವಾಗಿ ಲಭ್ಯವಾಗುವ ಜಾತಿಯ ಬೀಜಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ. ಇದೇ ಮಣ್ಣಿಗೆ ಹೊಂದಿಕೊಂಡು ಅವು ಚೆನ್ನಾಗಿ ಬೆಳೆಯುತ್ತವೆ.
-ಮಾರುತಿ ಉಪ್ಪಾರ, ಬೀಜದಾನ ಅಭಿಯಾನದ ರೂವಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.